

ಬೈಲಹೊಂಗಲ: ಕಬ್ಬಿಗೆ ವೈಜ್ಞಾನಿಕ ದರ ನಿಗದಿ ಮಾಡುವಂತೆ ಒತ್ತಾಯಿಸಿ ಜಿಲ್ಲಾ ಕಬ್ಬು ಬೆಳೆಗಾರರ ಸಮಿತಿ ನಗರದ ಚನ್ನಮ್ಮಾಜಿ ವತ್ತದಲ್ಲಿ ನಡೆಸುತ್ತಿರುವ ಹೋರಾಟ ನಾಲ್ಕನೆಯ ದಿನಕ್ಕೆ ಕಾಲಿಟ್ಟಿದೆ.
ನಯಾನಗರದ ಸುಖದೇವಾನಂದ ಪುಣ್ಯಾಶ್ರಮದ ಅಭಿನವ ಸಿದ್ಧಲಿಂಗ ಸ್ವಾಮೀಜಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ನಾನಾಸಾಹೇಬ ಪಾಟೀಲ, ಮಾಜಿ ಶಾಸಕ ವಿಶ್ವನಾಥ ಪಾಟೀಲ, ಎಂ.ಕೆ.ಹುಬ್ಬಳ್ಳಿಯ ಗದ್ದಿಕೇರಿ ಮಠದ ಸಚ್ಚಿದಾನಂದ ಅವಧೂತ ಸ್ವಾಮೀಜಿ, ಈಶ್ವರೀಯ ವಿಶ್ವವಿದ್ಯಾಲಯದ ಪ್ರಭಾ ಅಕ್ಕ, ರಾಜ್ಯ ನೇಗಿಲಯೋಗಿ ರೈತ ಸಂಘದ ಜಿಲ್ಲಾಧ್ಯಕ್ಷ ಶಂಕರ ಬೋಳನ್ನವರ, ವಿಎಚ್‌ಪಿ ಜಿಲ್ಲಾಧ್ಯಕ್ಷ ಪ್ರಮೋದಕುಮಾರ ವಕ್ಕುಂದಮಠ ಮಾತನಾಡಿ, ರೈತರು ಹಗಲಿರುಳು ಕಷ್ಟಪಟ್ಟು ಬೆಳೆದ ಕಬ್ಬಿಗೆ ಯೋಗ್ಯವಾದ ಬೆಲೆ ಸಿಗುವಂತಾಗಬೇಕು. ಒಟ್ಟಿನಲ್ಲಿ ಸರ್ಕಾರ ಹಾಗೂ ಸಕ್ಕರೆ ಕಾರ್ಖಾನೆಗಳು ರೈತರ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು.
ಮೂರುಸಾವಿರ ಮಠದ ಪ್ರಭುನೀಲಕಂಠ ಸ್ವಾಮೀಜಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. ರಾಜ್ಯ ಹೆದ್ದಾರಿ ಬಂದ್ ಮಾಡಿ ಹಾರುಗೊಪ್ಪ, ಚಚಡಿ ರೈತರು ಬೆಳಗಾವಿ- ಬಾಗಲಕೋಟೆ ರಸ್ತೆಯ ಚಚಡಿ ಕ್ರಾಸ್ ಬಳಿ ರಸ್ತೆ ಸಂಚಾರ ತಡೆ ನಡೆಸಿದರು. ಜನರಿಗೆ ಸಮಸ್ಯೆ ಉಂಟಾಗಿ ಸಂಚಾರ ಅಸ್ತವ್ಯಸ್ತಗೊಂಡಿತು. ನ.7ರಂದು ಹಿರೇಬಾಗೇವಾಡಿ ಟೋಲ್‌ನಾಕಾ ಬಂದ್ ಮಾಡಿ ತೀವ್ರವಾಗಿ ಪ್ರತಿಭಟಿಸಲಾಗುವುದು ಎಂದು ಹೋರಾಟ ಸಮಿತಿಯ ಮುಖಂಡರು ತಿಳಿಸಿದ್ದಾರೆ.
ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ, ಮಲ್ಲಿಕಾರ್ಜುನ ಹುಂಬಿ, ಜಗದೀಶ ಬೂದಿಹಾಳ, ಎಸ್. ಕೆ. ಮೆಳ್ಳಿಕೇರಿ, ಉದಯ ಬೂದಿಹಾಳ, ಉಮೇಶ ಬೋಳೆತ್ತಿನ, ಪ್ರಶಾಂತ ನೆಗೂರ್, ಬಸವರಾಜ ಹುಬ್ಬಳ್ಳಿ, ಸುರೇಶ ವಾಲಿ, ವಿಶಾಲ ಬೋಗುರ, ಮಹಾಂತೇಶ ಕಲಭಾವಿ, ಗುರುಸಿದ್ದಪ್ಪ ಕೋಟಗಿ, ಮಹೇಶ ಬೆಳಗಾಂವಕರ, ಪರಶುರಾಮ ಎತ್ತಿನಗುಡ್ಡ, ಬೀರಪ್ಪ ದೇಶನೂರ, ಬಸನಗೌಡ ಪಾಟೀಲ, ಸೋಮಪ್ಪ ಚಳಕೊಪ್ಪ, ಗೌಡಪ್ಪಗೌಡ ಪಾಟೀಲ ಇತರರಿದ್ದರು.