ಹಿರೇಬಾಗೇವಾಡಿ ಜನರೆಂದರೆ ವೈದ್ಯರಿಗೂ ಭಯ!

8 BGV HRBD 1-Web
ಹಿರೇಬಾಗೇವಾಡಿ ಗ್ರಾಮ ಸಂಪರ್ಕಿಸುವ ಪ್ರಮುಖ ರಸ್ತೆಗೆ ಗೇಟ್ ಅಳವಡಿಸಿ ಸಂಚಾರ ನಿಷೇಧಿಸಿರುವುದು.
Published on

ಹಿರೇಬಾಗೇವಾಡಿ: ಪುಟ್ಟ ಹಳ್ಳಿಯಾಗಿದ್ದರೂ ಮಾರಕ ಕರೊನಾ ವೈರಸ್‌ನಿಂದಾಗಿ ದೇಶದ ಗಮನ ಸೆಳೆದಿರುವ ಹಿರೇಬಾಗೇವಾಡಿ ಗ್ರಾಮದ ಜನರು ಸಾಮಾನ್ಯ ಕಾಯಿಲೆಗೂ ಚಿಕಿತ್ಸೆ ಲಭಿಸದೆ ಸಮಸ್ಯೆ ಅನುಭವಿಸುತ್ತಿದ್ದಾರೆ. ಇಲ್ಲಿನ ಜನರಿಗೆ ಸ್ಥಳೀಯವಾಗಿಯೇ ಇರುವ ಖಾಸಗಿ ಆಸ್ಪತ್ರೆಗಳ ವೈದ್ಯರು ಕರೊನಾ ವೈರಸ್ ಭೀತಿಯಿಂದ ಚಿಕಿತ್ಸೆ ನೀಡಲು ಹಿಂದೇಟು ಹಾಕುತ್ತಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 85 ಜನರಿಗೆ ಕರೊನಾ ಸೋಂಕು ಬಂದಿದ್ದು, ಹಿರೇಬಾಗೇವಾಡಿ ಗ್ರಾಮವೊಂದರಲ್ಲೇ 46 ಜನರಿಗೆ ‘ದೆಹಲಿ ನಂಜು’ ಅಂಟಿದ್ದು, ಜಿಲ್ಲೆಯಲ್ಲಿಯೇ ಈ ಗ್ರಾಮ ಸಿಂಹಪಾಲು ಗಳಿಸಿದೆ. ಶುಕ್ರವಾರ ಒಂದೇ ದಿನ ಇಲ್ಲಿನ 10 ಜನರಿಗೆ ಕರೊನಾ ಸೋಂಕು ದೃಢಪಟ್ಟಿದೆ.

ದೆಹಲಿ ತಬ್ಲಿಘಿ ಕಾರ್ಯಕ್ರಮಕ್ಕೆ ಹೋಗಿ ಬಂದ ಗ್ರಾಮದ ಯುವಕನ ಸಂಪರ್ಕದಿಂದ ಪ್ರಾರಂಭವಾದ ಸೋಂಕಿತರ ಸಂಖ್ಯೆಯು ರಾಜ್ಯದ ಜಿಲ್ಲಾವಾರು ಸೋಂಕಿತರ ಸಂಖ್ಯೆಯಲ್ಲಿ ಬೆಳಗಾವಿಗೆ ಪ್ರಮುಖ ಸ್ಥಾನ ನೀಡುತ್ತಿದೆ. ದಿನದಿಂದ ದಿನಕ್ಕೆ ಈ ಗ್ರಾಮದ ಜನರಲ್ಲೇ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಇಲ್ಲಿನ ಜನರನ್ನು ಕಂಡರೆ ಹೊರಗಿನವರೂ ಈಗ ಭಯಪಡುತ್ತಿದ್ದಾರೆ.

ಸ್ಥಳೀಯರಿಗೂ ಬೇಸರ: ಕರೊನಾ ಸೋಂಕಿನ ಹಾಟ್‌ಸ್ಪಾಟ್ ಆಗಿರುವ ಹಿರೇವಾಗೇವಾಡಿ ಗ್ರಾಮದಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳುತ್ತಿದೆ. ಕರೊನಾ ಸೇನಾನಿಗಳು ಹಗಲು- ರಾತ್ರಿ ಎನ್ನದೆ ಶ್ರಮಿಸುತ್ತಿದ್ದಾರೆ. ಗ್ರಾಮವನ್ನು ಸಂಪೂರ್ಣವಾಗಿ ಲಾಕ್‌ಡೌನ್ ಮಾಡಿ, ಎಲ್ಲ ಕಡೆ ಕ್ಯಾಮರಾ ಅಳವಡಿಸಲಾಗಿದೆ. ಹೀಗಾಗಿ ನೆರೆಯ ಗ್ರಾಮಗಳ ಜನರು ಹಿರೇಬಾಗೇವಾಡಿ ಗ್ರಾಮದ ಎಲ್ಲ ನಿವಾಸಿಗಳಿಗೂ ಸೋಂಕು ತಗುಲಿದ ಹಾಗೆ ಸಂಶಯದಿಂದ ನೋಡುತ್ತಿದ್ದಾರೆ. ಸಣ್ಣಪುಟ್ಟ ಅನಾರೋಗ್ಯವಾದರೂ ಖಾಸಗಿ ವೈದ್ಯರೂ ಇಲ್ಲಿನ ಜನರನ್ನು ಮುಟ್ಟುತ್ತಿಲ್ಲ. ಇದು ಸ್ಥಳೀಯರ ಬೇಸರಕ್ಕೆ ಕಾರಣವಾಗಿದೆ.

ದೃಢೀಕರಣ ಪತ್ರ ತಂದರೆ ಮಾತ್ರ ಚಿಕಿತ್ಸೆ !

ಕರೊನಾ ಹೊರತುಪಡಿಸಿ ಇತರೆ ಕಾಯಿಲೆಗಳಿಗೆ ಹಿರೇಬಾಗೇವಾಡಿ ಜನರು ಚಿಕಿತ್ಸೆ ಪಡೆಯಲು ಬೆಳಗಾವಿ ಸೇರಿ ಸುತ್ತಮುತ್ತಲ ಖಾಸಗಿ ಆಸ್ಪತ್ರೆಗಳಿಗೆ ಹೋದರೆ ಅಲ್ಲಿನ ಸಿಬ್ಬಂದಿ ಇವರನ್ನು ದಾಖಲಿಸಿಕೊಳ್ಳುತ್ತಿಲ್ಲ. ಸರ್ಕಾರಿ ಆಸ್ಪತ್ರೆಗೆ ಹೋಗುವಂತೆ ಅಥವಾ ಕರೊನಾ ಸೋಂಕು ಇಲ್ಲವೆಂದು (ನೆಗೆಟಿವ್ ಸರ್ಟಿಫಿಕೇಟ್) ದೃಢೀಕರಣ ಪತ್ರ ತರುವಂತೆ ವೈದ್ಯರು ಸೂಚಿಸುತ್ತಿದ್ದಾರೆ. ಇತ್ತೀಚೆಗೆ ಗ್ರಾಮದ ವ್ಯಕ್ತಿಯೊಬ್ಬರು ಹೃದಯ ಸಂಬಂಧಿ ಕಾಯಿಲೆಯ ಚಿಕಿತ್ಸೆಗೆಂದು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ಹೋಗಿದ್ದಾಗ ದಾಖಲಿಸಿಕೊಳ್ಳದೆ ಸಿವಿಲ್ ಆಸ್ಪತ್ರೆಗೆ ಕಳಿಸಿದ್ದರು. ಸಿವಿಲ್ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿ ನೆಗೆಟಿವ್ ಎಂದು ವರದಿ ನೀಡಿದ ನಂತರವೇ ಖಾಸಗಿ ಆಸ್ಪತ್ರೆಯವರು ಚಿಕಿತ್ಸೆ ನೀಡಿದ್ದಾರೆ. ಆದರೆ, ತುರ್ತು ಪರಿಸ್ಥಿತಿಯಲ್ಲಿ ರೋಗಿಯ ಜೀವಕ್ಕೆ ತೊಂದರೆಯಾದರೆ ಯಾರು ಜವಾಬ್ದಾರಿ ಎಂದು ಪ್ರಜ್ಞಾವಂತ ನಾಗರಿಕರು ಪ್ರಶ್ನಿಸಿದ್ದಾರೆ.

ಗ್ರಾಮದ ಪ್ರತಿಯೊಬ್ಬರನ್ನೂ ಕರೊನಾ ಸೋಂಕಿದೆಯೇ ಎಂದು ಪರೀಕ್ಷೆಗೆ ಒಳಪಡಿಸಲು ಸಾಧ್ಯವಿಲ್ಲ. ಕರೊನಾ ಪೀಡಿತರ ನೇರ, ದ್ವಿತೀಯ ಸಂಪರ್ಕದಲ್ಲಿರುವವರನ್ನು ಕಡ್ಡಾಯವಾಗಿ ತಪಾಸಣೆ ಮಾಡಲಾಗುತ್ತಿದೆ. ಅಲ್ಲದೆ, ಕೆಮ್ಮು- ನೆಗಡಿ, ವಿಪರೀತ ತಲೆನೋವು ಇತ್ಯಾದಿ ಕರೊನಾ ಸೋಂಕಿನ ಲಕ್ಷಣಗಳಿದ್ದರೆ ಮಾತ್ರ ತಪಾಸಣೆಗೆ ಒಳಪಡಿಸಬೇಕೆಂಬ ಆದೇಶವಿದೆ.| ಡಾ. ನೀತಾ ಚವ್ಹಾಣ ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ, ಹಿರೇಬಾಗೇವಾಡಿಸರ್ಕಾರ ಹಿರೇಬಾಗೇವಾಡಿ ಗ್ರಾಮದ ಪ್ರತಿಯೊಬ್ಬರನ್ನೂ ಕರೊನಾ ತಪಾಸಣೆಗೆ ಒಳಪಡಿಸಿ ದೃಢೀಕರಣ ಪತ್ರ ನೀಡಿದರೆ ಎಲ್ಲರಿಗೂ ಅನುಕೂಲವಾಗುತ್ತದೆ. ಇದರಿಂದ ತುರ್ತು ಪರಿಸ್ಥಿತಿಯಲ್ಲಿ ರೋಗಿಗಳು ಆಸ್ಪತ್ರೆಗಳಿಗೆ ಅಲೆದಾಡುವುದು ತಪ್ಪುತ್ತದೆ. ಈ ಸಂಬಂಧ ಜಿಲ್ಲಾಡಳಿತ ಸೂಕ್ತ ಕ್ರಮ ಜರುಗಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು.| ಡಾ. ಎಫ್.ಎಸ್. ಪಾಟೀಲ ಖಾಸಗಿ ವೈದ್ಯ ಹಿರೇಬಾಗೇವಾಡಿ

| ಮನೋಹರ ಕಮ್ಮಾರ ಹಿರೇಬಾಗೇವಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net