ಶಿಕ್ಷಕರನ್ನು ನೇಮಿಸಿ ಗಡಿ ಶಾಲೆ ಉಳಿಸಿ

21adarshkdga2
Published on

ಮಡಿಕೇರಿ: ಮಡಿಕೇರಿ ತಾಲೂಕಿನ ಗಡಿ ಗ್ರಾಮ ಕರಿಕೆ ಶಾಲೆಗೆ ಶಿಕ್ಷಕರನ್ನು ನೇಮಿಸುವಂತೆ ಆಗ್ರಹಿಸಿ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಂಗಧಾಮಯ್ಯರಿಗೆ ಕರಿಕೆ ಗ್ರಾ.ಪಂ ಉಪಾಧ್ಯಕ್ಷ ಎನ್.ಬಾಲಚಂದ್ರ ನಾಯರ್ ಹಾಗೂ ಸರ್ಕಾರಿ ಪ್ರೌಢಶಾಲೆಯ ಅಧ್ಯಕ್ಷ ಕೆ.ಆರ್.ಜನಾರ್ಧನರವರು ಮನವಿ ಸಲ್ಲಿಸಿದರು.


ಈ ಸಂದರ್ಭ ಮಾತನಾಡಿದ ಅವರು, ಶಿಕ್ಷಕರು ಹಾಗೂ ಮೂಲಭೂತ ಸೌಲಭ್ಯಗಳ ಕೊರತೆಯ ನಡುವೆ ಸರ್ಕಾರಿ ಕನ್ನಡ ಶಾಲೆಗಳು ಮುಚ್ಚುವ ಹಂತಕ್ಕೆ ಬಂದು ತಲುಪಿವೆ. ಬಡ ವಿದ್ಯಾರ್ಥಿಗಳಿಗೆ ಸರ್ಕಾರಿ ಶಾಲೆಗಳೇ ವರದಾನವಾಗಿದ್ದು, ಕನ್ನಡ ಭಾಷೆಯ ಉಳಿವಿಗೂ ಸಹಕಾರಿಯಾಗಿದೆ. ಆದರೆ ಕೊಡಗು ಮತ್ತು ಕೇರಳದ ಗಡಿ ಭಾಗದಲ್ಲಿರುವ ಕರಿಕೆ ಗ್ರಾಮದ ಸರ್ಕಾರಿ ಕನ್ನಡ ಶಾಲೆಗೆ ಶಿಕ್ಷಕರ ಕೊರತೆ ಎದುರಾಗಿರುವುದರಿಂದ ಇಲ್ಲಿನ ಬಡ ಮಕ್ಕಳು ಪಕ್ಕದ ಮಲೆಯಾಳ ಶಾಲೆಗೆ ಸೇರುವ ಅನಿವಾರ್ಯತೆ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.


ಕರಿಕೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಸುಮಾರು ೭೦ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇವರಲ್ಲಿ ಶೇ.೭೫ ರಷ್ಟು ಮಂದಿ ಪರಿಶಿಷ್ಟ ಜಾತಿ, ಪಂಗಡಕ್ಕೆ ಸೇರಿದವರಾಗಿದ್ದಾರೆ. ಶಾಲೆಯಲ್ಲಿ ಮುಖ್ಯೋಪಾದ್ಯಾಯರು, ಹಿಂದಿ, ಕನ್ನಡ, ಗಣಿತ, ದೈಹಿಕ ಶಿಕ್ಷಣ ಹುದ್ದೆಗಳು ಖಾಲಿ ಇವೆ. ಇದರಿಂದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿರಾಗುತ್ತಿದ್ದಾರೆ. ಅಲ್ಲದೆ ಅನಿವಾರ್ಯವಾಗಿ ಪಕ್ಕದಲ್ಲಿರುವ ಕೇರಳ ರಾಜ್ಯದ ಮಲೆಯಾಳ ಶಾಲೆಯಲ್ಲಿ ದಾಖಲಾಗುವ ಆತಂಕವೂ ಎದುರಾಗಿದೆ ಎಂದರು.


ಖಾಯಂ ಶಿಕ್ಷಕರನ್ನು ನೇಮಕ ಮಾಡಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಮೂಲಕ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯವನ್ನು ಉಜ್ವಲಗೊಳಿಸಬೇಕು. ಖಾಯಂ ಶಿಕ್ಷಕರ ನೇಮಕಾತಿ ಆಗುವವರೆಗೆ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಯಾವುದೇ ಶಿಕ್ಷಕರನ್ನು ವರ್ಗಾವಣೆ ಮಾಡಬಾರದು ಎಂದು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net