ಹಿರಾ ಶುಗರ್ಸ್‌ನಿಂದ ಸಕ್ಕರೆ ವಿತರಣೆ

3Huk1
Published on

ಹುಕ್ಕೇರಿ: ಸಂಕೇಶ್ವರದ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯ ಅ ವರ್ಗದ ಪ್ರತಿಯೊಬ್ಬ ಸದಸ್ಯರಿಗೆ ಪ್ರಸಕ್ತ ವರ್ಷ ಮಾ.5ರಿಂದ ಡಿ.31ರ ವರೆಗೆ ಒಂದು ಕೆ.ಜಿ.ಗೆ 17ರೂ.ನಂತೆ 50 ಕೆ.ಜಿ ಸಕ್ಕರೆ ವಿತರಿಸಲಾಗುತ್ತದೆ ಎಂದು ಕಾರ್ಖಾನೆ ಅಧ್ಯಕ್ಷ ಅಜ್ಜಪ್ಪ(ಬಸವರಾಜ) ಕಲ್ಲಟ್ಟಿ ತಿಳಿಸಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸಕ್ತ ಹಂಗಾಮಿನಲ್ಲಿ ಕಬ್ಬು ಪೂರೈಸಿದ ಎಲ್ಲ ರೈತರಿಗೆ 17 ರೂ. ದರದಲ್ಲಿ ಪ್ರತಿ ಟನ್‌ಗೆ ಅರ್ಧ ಕೆಜಿ ಸಕ್ಕರೆಯನ್ನು ಏ.1ರಿಂದ ಸೆ.30ರ ವರೆಗೆ ಕೊಡಲಾಗುವುದು. ಮಾ.31ರ ಒಳಗಾಗಿ ಸಕ್ಕರೆ ಸ್ಲಿಪ್ ತಲುಪಿಸುವುದಾಗಿ ತಿಳಿಸಿದರು.

ಕಾರ್ಖಾನೆ ಉಪಾಧ್ಯಕ್ಷ ಅಶೋಕ ಪಟ್ಟಣಶೆಟ್ಟಿ ಮಾತನಾಡಿ, ಮುಂದಿನ ಹಂಗಾಮಿನಲ್ಲಿ ಕಬ್ಬು ಕಡಿಯುವ ಮತ್ತು ಸಾರಿಗೆ ಮುಕ್ತೆದಾರರಿಗೆ ನೆರೆ-ಹೊರೆಯ ಸಕ್ಕರೆ ಕಾರ್ಖಾನೆಗಳು ನೀಡುವ ದರ ನೀಡಲು ನಿರ್ಧರಿಸಲಾಗಿದೆ. ಕಾಂಪೋಸ್ಟ್ ಗೊಬ್ಬರ 1000 ರೂ.ಗೆ ಕೊಡಲು ನಿರ್ಧರಿಸಲಾಗಿದೆ. ರೈತರ ಕಬ್ಬಿನ ಬಿಲ್ ಏಪ್ರಿಲ್ ಮೊದಲ ವಾರದಲ್ಲಿ ಸಂದಾಯ ಮಾಡುತ್ತೇವೆ ಎಂದರು.

ನಿರ್ದೇಶಕರಾದ ಬಾಬಾಸಾಹೇಬ ಅರಬೋಳೆ ಮತ್ತು ಬಸವರಾಜ ಮರಡಿ ಮಾತನಾಡಿ, ಡಿಸಿಸಿ ಬ್ಯಾಂಕ್ ರೈತರ ಕಬ್ಬಿನ ಬಿಲ್ ಸಂದಾಯ ಮಾಡಲು ಸಕ್ಕರೆ ಅಡಮಾನದ ಮೇಲೆ ಸಾಲ ನೀಡಿದೆ. ಕಾರ್ಖಾನೆ ಆರ್ಥಿಕ ವ್ಯವಸ್ಥೆ ಸದೃಢವಾಗಿದೆ ಎಂದರು. ನಿರ್ದೇಶಕ ಪ್ರಭುದೇವ ಪಾಟೀಲ, ವ್ಯವಸ್ಥಾಪಕ ನಿರ್ದೇಶಕ ಎಸ್.ಆರ್. ಕರ್ಕಿನಾಯಿಕ, ಸುಭಾಸ ನಾಶಿಪುಡಿ, ರವೀಂದ್ರ ಚೌಗಲಾ, ಕಾರ್ಮಿಕ ಸಂಘಟನೆ ಅಧ್ಯಕ್ಷ ಮೋಹನ ಕೋಟಿವಾಲೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net