ಹಿಪ್ಪರಗಿ ಜಲಾಶಯ ಓಯಸಿಸ್‌ನಂತೆ ಭಾಸ

Hipparagi Reservoir feels like an oasis
ನೀರಿಲ್ಲದೆ ಭಣಗುಡುತ್ತಿರುವ ಬಾಗಲಕೋಟೆ ಜಿಲ್ಲೆಯ ಹಿಪ್ಪರಗಿ ಜಲಾಶಯ.
Published on

ರಬಕವಿ/ಬನಹಟ್ಟಿ: ಆರು ಟಿಎಂಸಿ ಸಾಮರ್ಥ್ಯ ಹೊಂದಿರುವ ಹಿಪ್ಪರಗಿ ಜಲಾಶಯದಲ್ಲೀಗ ಕೇವಲ 0.2 ಟಿಎಂಸಿ ನೀರು ಡೆಡ್ ಸ್ಟೋರೇಜ್‌ನಲ್ಲಿದೆ. ಅಲ್ಲಲ್ಲಿ ತಗ್ಗು ಪ್ರದೇಶದಲ್ಲಿ ನಿಂತ ನೀರು ಮರಭೂಮಿಯಲ್ಲಿನ ಓಯಸಿಸ್‌ನಂತೆ ಕಾಣುತ್ತಿದೆ.

ಜಲಾಶಯದಲ್ಲಿ ನೀರಿಲ್ಲದೆ ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.
ರಬಕವಿ-ಬನಹಟ್ಟಿ ಅವಳಿ ನಗರಕ್ಕೂ ಹಿಪ್ಪರಗಿ ಜಲಾಶಯವೇ ನೀರಿನ ಮೂಲವಾಗಿದೆ. ಸಮೀಪದ ಮಹಿಷವಾಡಗಿ ಬ್ಯಾರೇಜ್ ಹತ್ತಿರದ ತಗ್ಗು ಪ್ರದೇಶಗಳಲ್ಲಿರುವ ನೀರನ್ನು ಪೈಪ್‌ಲೈನ್ ಮೂಲಕ ಜಾಕ್‌ವೆಲ್‌ಗೆ ಹರಿಸಿ ಅವಳಿ ನಗರಗಳಿಗೆ ಒಂದು ವಾರ ಮಾತ್ರ ನೀರು ಪೂರೈಸಲು ಸಾಧ್ಯ ಎಂದು ಅಧಿಕಾರಿಗಳು ಹೇಳುತ್ತಾರೆ.

ತೀವ್ರ ನಿಗಾ

ಈಗಾಗಲೇ ರಬಕವಿಗೆ ನೀರು ಪೂರೈಕೆಗೆ ತೀವ್ರ ಸಮಸ್ಯೆ ಎದುರಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರಿ ಕೊಳವೆ ಬಾವಿ, ತೆರೆದ ಬಾವಿಗಳ ಮೂಲಕ ನೀರು ಪೂರೈಸಲು ಸಕಲ ಸಿದ್ಧತೆ ಕೈಗೊಳ್ಳಲು ಸಿಬ್ಬಂದಿ ಸನ್ನದ್ಧವಾಗಿದೆ. ಮಿತವಾಗಿ ನೀರು ಬಳಸಬೇಕೆಂದು ಪೌರಾಯುಕ್ತ ಜಗದೀಶ ಈಟಿ ಮನವಿ ಮಾಡಿದ್ದಾರೆ.

ಸುಳ್ಳು ಭರವಸೆ ನೀಡಿದ ಜನಪ್ರತಿನಿಧಿಗಳು

ಸಚಿವ, ಸಂಸದ, ಶಾಸಕರನ್ನೊಳಗೊಂಡ ಎಲ್ಲ ಜನಪ್ರತಿನಿಧಿಗಳು ಈಗಾಗಲೇ ಕೃಷ್ಣೆಗೆ ನೀರು ಹರಿಸುವಲ್ಲಿ ಮಹಾರಾಷ್ಟ್ರ ಸರ್ಕಾರ ಜತೆ ಮಾತುಕತೆ ನಡೆಸಲಾಗಿದೆ. 2 ಟಿಎಂಸಿ ನೀರು ಬಿಡುಗಡೆಗೆ ಒತ್ತಾಯಿಸಿದ್ದು, ಶೀಘ್ರ ನೀರು ಬಿಡುಗಡೆಯಾಗಲಿದೆ ಎಂದು ಭರವಸೆ ನೀಡುತ್ತ ಲೋಕಸಭೆ ಚುನಾವಣೆ ಮುಗಿಸಿದ್ದಾರೆ. ಈಗಲೂ ಕೃಷ್ಣೆಗೆ ನೀರು ಹರಿಸುವ ಬದಲು ಬರೀ ಸುಳ್ಳು ಹೇಳುತ್ತಿದ್ದಾರೆ. ಕೂಡಲೇ ನದಿಗೆ ಮಹಾರಾಷ್ಟ್ರದಿಂದ ನೀರು ಹರಿಸಲು ಅಧಿಕಾರಿಗಳು ಪ್ರಾಮಾಣಿಕವಾಗಿ ಪ್ರಯತ್ನ ನಡೆಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net