ಗಿಚ್ ಐತಿ ಮಾಹಿ ಕಿಚ್ಚು..; ಹುಬ್ಬಳ್ಳಿ ಪ್ರತಿಭೆಯ ಹಿಪ್​ಹಾಪ್ ಹಾಡು

Gich
Published on

ಹುಬ್ಬಳ್ಳಿ: ಉತ್ತರ ಕರ್ನಾಟಕದ ಮೊದಲ ರೇಡಿಯೋ ಜಾಕಿ ಎಂಬ ಖ್ಯಾತಿಗೆ ಪಾತ್ರವಾಗಿರುವ ಆರ್​ಜೆ ಮಾಹಿ (ಮಹೇಶ ನೇತ್ರೇಕರ) ಹುಬ್ಬಳ್ಳಿಯ ಗಿಚ್ ಪ್ರತಿಭೆ. ರೇಡಿಯೋ ಜಾಕಿಯಾಗಿ, ಧಾರಾವಾಹಿ, ಸಿನಿಮಾಗಳಲ್ಲಿ ನಟನಾಗಿ, ನಿರೂಪಕನಾಗಿ ಹೀಗೆ ವಿವಿಧ ಆಯಾಮದಲ್ಲಿ ಗುರುತಿಸಿಕೊಂಡಿದ್ದಾರೆ. ಆರ್​ಜೆ ಮಾಹಿ ಈಗ ‘ಹುಬ್ಬಳ್ಳಿ ಗಿಚ್ ಐತಿ, ನಮ್ ಮಂದ್ಯಾಗ ಕಿಚ್ ಐತಿ ...’ ಎಂಬ ಜವಾರಿ ಹಿಪ್​ಹಾಪ್ ವಿಡಿಯೋ ಗೀತೆಯ ಮೂಲಕ ಸದ್ದು ಮಾಡುತ್ತಿದ್ದಾರೆ.

ಹುಬ್ಬಳ್ಳಿ ಮಂದಿಗಾಗೇ ಆರ್​ಜೆ ಮಾಹಿ ವಿಶೇಷವಾಗಿ ರಚಿಸಿ, ಹಾಡಿ, ನಿರ್ದೇಶಿರುವ ‘ಹುಬ್ಬಳ್ಳಿ ಗಿಚ್ ಐತಿ ...’ ಹಾಡು ಅಶ್ವಿನಿ ರೆಕಾರ್ಡಿಂಗ್ ಕಂಪನಿ (ಎಆರ್​ಸಿ) ಯೂಟ್ಯೂಬ್ ಚಾನೆಲ್​ನಲ್ಲಿ ಬಿಡುಗಡೆಯಾಗಿದೆ. ಬಿಡುಗಡೆಗೊಂಡ ಕೆಲವೇ ದಿನಗಳಲ್ಲಿ ಲಕ್ಷಾಂತರ ವೀಕ್ಷಣೆ ಪಡೆದು ಜನಮನ್ನಣೆ ಗಳಿಸಿದೆ.

ಹಾಡಿನ ಶೀರ್ಷಿಕೆಯಂತೆ ಹುಬ್ಬಳ್ಳಿಯ ಪ್ರಾಮುಖ್ಯತೆಯನ್ನು ಜಗತ್ತಿಗೆ ತೋರಿಸುವ ಉದ್ದೇಶದಿಂದ ಮಾಹಿ ಈ ಹಾಡು ಪ್ರಸ್ತುತಪಡಿಸಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಪ್ರಮೋದ ಸ್ಟಿಫನ್ ಸಂಗೀತ ನೀಡಿದ್ದು, ವಿನಾಯಕ ಬಾಕಳೆ, ವಿಜಯ ಬಾಕಳೆ ಸಂಕಲನ ಮಾಡಿದ್ದಾರೆ. ಬಾಲ್ಯದಿಂದಲೂ ನಟನೆ, ನಿರೂಪಣೆ, ನೃತ್ಯ, ಗಾಯನದಲ್ಲಿ ಸೆಳೆತವಿದ್ದಿದ್ದರಿಂದ ಕೈತುಂಬ ಸಂಬಳ ನೀಡುವ ಕೆಲಸಕ್ಕೆ ರಾಜೀನಾಮೆ ನೀಡಿ ನಟನೆಗೆ ಮುಂದಾದ ಮಹೇಶ್, ಉದಯ ಟಿವಿಯಲ್ಲಿ ‘ಸರಿಗಮಪದನಿ’ ಧಾರಾವಾಹಿಯಲ್ಲಿ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಿದರು. ನಂತರ 2016ರಲ್ಲಿ ರೇಡಿಯೋ ಜಾಕಿಯಾಗಿ ಮೈಸೂರಿಗೆ ತೆರಳಿದರು. ಈ ವೇಳೆ ‘ಋಣ’ ಎಂಬ ಕಿರುಚಿತ್ರ ನಿರ್ವಿುಸಿದರು. 2018ರಲ್ಲಿ ಉತ್ತರ ಕರ್ನಾಟಕದ ಮೊದಲ ಆರ್​ಜೆಯಾಗಿ ಕೆಲಸ ಆರಂಭಿಸಿದರು. ಆ ವೇಳೆ ಮೊದಲು ಹೇಳಿದ ಮಾತು, ‘ಹುಬ್ಬಳ್ಳಿ ಗಿಚ್ ಐತಿ, ನಮ್ ಮಂದ್ಯಾಗ ಕಿಚ್ ಐತಿ’. ಈ ಮಾತೇ ಈಗ ವಿಡಿಯೋ ರೂಪದಲ್ಲಿ ಹೊರಹೊಮ್ಮಿದೆ.

ಹಾಡಿನ್ಯಾಗ ಏನೈತಿ?: ‘ಹುಬ್ಬಳ್ಳಿ ಗಿಚ್ ಐತಿ’ ಹಾಡಿನಲ್ಲಿ ಹುಬ್ಬಳ್ಳಿಯ ವಿಶೇಷತೆಗಳನ್ನು ಬಿಂಬಿಸಲಾಗಿದೆ. ಈ ಭಾಗದ ವಿಶೇಷ ಖಾದ್ಯಗಳಾದ ಖಡಕ್ ರೊಟ್ಟಿ-ಎಣ್ಣೆಗಾಯಿ ಪಲ್ಯ, ಸಾವಜಿ ಊಟ, ಧಾರವಾಡ ಪೇಡಾ ಹಾಗೂ ಪ್ರಸಿದ್ಧ ಸ್ಥಳಗಳನ್ನು ಹಾಡಿನಲ್ಲಿ ತೋರಿಸಲಾಗಿದೆ. ರಾಷ್ಟ್ರಮಟ್ಟದ ಖ್ಯಾತಿ ಪಡೆದ ಹುಬ್ಬಳ್ಳಿಯ ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ, ಎಂಡಿ ಆನಂದ ಸಂಕೇಶ್ವರ, ವರೂರಿನ ವಿಆರ್​ಎಲ್ ಕಚೇರಿ ಆವರಣ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕ ಅರವಿಂದ ಬೆಲ್ಲದ, ಪ್ಯಾರಾ ಪಟು ಜ್ಯೋತಿ ಸಣ್ಣಕ್ಕಿ, ಮರಿ ಗಾನಕೋಗಿಲೆ ಮಹನ್ಯಾ ಪಾಟೀಲ, ‘ನನ್ನ ಗೆಳತಿ ...’ ಹಾಡಿನ ಖ್ಯಾತಿಯ ಮಂಜುನಾಥ ಸಂಗಳದ, ಗಿನ್ನೆಸ್ ದಾಖಲೆಯ ಸ್ಕೇಟಿಂಗ್ ಪಟು ಓಜಲ್ ನಲವಡಿ ಮತ್ತಿತರ ಸಾಧಕರ ಝುಲಕ್ ಹಾಡಿನಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net