

ಮಡಿಕೇರಿ:
ಸುಖ-ಕಷ್ಟಗಳ ಸಮಭಾವದ ಅನುಭವದೊಂದಿಗೆ 2024ನ್ನು ಬೀಳ್ಕೊಟ್ಟು 2025ರ ಹೊಸ ವರ್ಷವನ್ನು ಸ್ವಾಗತಿಸಲು ಸಿದ್ಧತೆಗಳು ನಡೆದಿರುವಂತೆಯೇ ಕಳೆದ ಹೋದ ಒಂದು ವರ್ಷದ ಮೆಲುಕು ಹಾಕುವಾಗ ಕೊಡಗು ಕೂಡ ಸಾಕಷ್ಟು ಏಳು-ಬೀಳುಗಳನ್ನು ಕಂಡಿದೆ. ಕಳೆದ ವರ್ಷದ ಅನಾವೃಷ್ಟಿ ಸ್ಥಿತಿ ಈ ವರ್ಷವೂ ಮುಂದುವರಿದ ಪರಿಣಾಮ ಮಲೆನಾಡಿನ ಮಡಿಲಲ್ಲಿರುವ ಕೊಡಗು ಕೂಡ ಬರಗಾಲದ ಅನುಭವ ಎದುರಿಸುವಂತಾಯಿತು. ಲೋಕಸಭಾ ಚುನಾವಣೆಯಲ್ಲಿ ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿಯೂ ಬಿಜೆಪಿ ವಿಜಯಿ ಆದರೂ ಸಂಸದರಾಗಿ ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ಆಯ್ಕೆ ಆದರು. ವನ್ಯಜೀವಿ-ಮಾನವ ಸಂಘರ್ಷ ಪ್ರತಿ ಬಾರಿಯಂತೆ ಈ ವರ್ಷವೂ ಸಾಕಷ್ಟು ಕಹಿ ನೆನಪುಗಳನ್ನು ಉಳಿಸಿ ಹೋಗಲಿದೆ.
ಕೊಡಗಿನಲ್ಲಿ ಬರದ ಅನುಭವ
ಈ ವರ್ಷ ಜನವರಿಯಿಂದ ಮೇ ಮಧ್ಯಭಾಗದ ತನಕವೂ ಕಂಡ ಬಂದ ಬಿರು ಬಿಸಿಲಿನ ವಾತಾವರಣ ಕೊಡಗಿನ ಜನರನ್ನು ಹೈರಾಣಾಗುವಂತೆ ಮಾಡಿತು. ಸ್ಥಳೀಯರಿಗೆ ಬಯಲು ಸೀಮೆಯಲ್ಲಿ ಇರುವಂಥ ಅನುಭವ ಆಯಿತು. ಫೆಬ್ರವರಿಯಲ್ಲೇ ಕಾವೇರಿ ನದಿಯಲ್ಲಿ ನೀರಿನ ಹರಿವು ಸ್ಥಗಿತವಾಗಿ ಕುಡಿಯುವುದಕ್ಕೆ ನದಿ ನೀರು ಅವಲಂಬಿಸಿರುವ ಕುಶಾಲನಗರದಂಥ ಪಟ್ಟಣಗಳು ತೀವ್ರ ಸಮಸ್ಯೆ ಎದುರಿಸಿದವು. ಟ್ಯಾಂಕರ್‌ಗಳ ಮೂಲಕ ಮನೆ ಮನೆಗೆ ನೀರು ಪೂರೈಸುವ ಅನಿವಾರ್ಯತೆ ಎದುರಾಯಿತು. ಕಾಫಿ ಸೇರಿದಂತೆ ಜಿಲ್ಲೆಯ ವ್ಯವಸಾಯದ ಮೇಲೂ ಪರಿಣಾಮ ಬೀರಿತು. ಹಾಗಾಗಿ ಕೊಡಗಿನ ಜನರಿಗೂ ಈ ವರ್ಷ ನೀರಿನ ಬೆಲೆ ತಿಳಿಯುವಂತಾಯಿತು. ಏಪ್ರಿಲ್ 29ರ ಬೆಳಿಗ್ಗೆ 8.30ರಿಂದ ಏಪ್ರಿಲ್ 30ರ ಬೆಳಿಗ್ಗೆ 8.30ರ ಅವಧಿಯಲ್ಲಿ ಕೊಡಗಿನಲ್ಲಿ 38.6 ಡಿಗ್ರಿ ಸೆಲ್ಸಿಯಸ್‌ನಷ್ಟು ತಾಪಮಾನ ದಾಖಲಾಗಿ ಜನರ ಬೆವರಿಳಿಸಿತು.
ಬಿಜೆಪಿಗೆ ಟಾನಿಕ್
ಈ ವರ್ಷ ಕೊಡಗು ಬಿಜೆಪಿ ಪಾಲಿಗೆ ಅತ್ಯುತ್ತಮ ಆರಂಭವನ್ನೇ ಕೊಟ್ಟಿತು. ಸುಮಾರು 3 ದಶಕಗಳ ಕಾಲ ಜಿಲ್ಲೆಯ 2 ವಿಧಾನಸಭಾ ಕ್ಷೇತ್ರಗಳಲ್ಲಿ ಪಾರಮ್ಯ ಮೆರೆದಿದ್ದ ಪಕ್ಷಕ್ಕೆ ಕಳೆದ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ರುಚಿ ತೋರಿಸಿತ್ತು. ಈ ಆಘಾತದಿಂದ ಮೇಲೆ ಬರಲು ಈ ವರ್ಷದ ಲೋಕಸಭಾ ಚುನಾವಣೆ ದೊಡ್ಡ ಮಟ್ಟದ ಟಾನಿಕ್ ಕೊಟ್ಟಿತು. ಸತತ ಎರಡು ಅವಧಿಗೆ ಮೈಸೂರು-ಕೊಡಗು ಕ್ಷೇತ್ರ ಪ್ರತಿನಿಧಿಸಿದ್ದ ಪ್ರತಾಪ್ ಸಿಂಹ ಅವರ ಬದಲಿಗೆ ಮೈಸೂರು ರಾಜ ವಂಶÀಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಬಿಜೆಪಿ ಟಿಕೆಟ್ ಕೊಟ್ಟಿತ್ತು. ವಿಧಾನಸಭಾ ಚುನಾವಣೆಗಿಂತಲೂ ಹೆಚ್ಚಿನ ಮತಗಳು ಕೊಡಗಿನಲ್ಲಿ ಒಡೆಯರ್ ಅವರಿಗೆ ಸಿಗುವ ಮೂಲಕ ಗೆಲುವುದು ಸಾಧಿಸಿದರು. ಇದರಿಂದಾಗಿ ಬಿಜೆಪಿ ಮತ್ತೆ ತನ್ನ ಇರುವಿಕೆಯನ್ನು ಇಲ್ಲಿ ಸಾಬೀತುಪಡಿಸಿದಂತೆ ಆಯಿತು.
ಕಾಂಗ್ರೆಸ್‌ನಲ್ಲಿ ಉತ್ಸಾಹ
ಲೋಕಸಭಾ ಚುನಾವಣೆ ಸೋಲಿನಿಂದ ಹತಾಶೆಗೆ ಒಳಗಾಗದ ಕಾಂಗ್ರೆಸ್ ಜಿಲ್ಲೆಯಲ್ಲಿ ಮುಂದಿನ ಚುನಾವಣೆ ಮೇಲೆ ಕಣ್ಣಿಟ್ಟು ಸಂಘಟನೆಯನ್ನು ಬಲಗೊಳಿಸುತ್ತಿದೆ. ಮತ್ತೊಂದು ಕಡೆ ವಿಧಾಸಭಾ ಚುನಾವಣೆಯಲ್ಲಿ ತನ್ನ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದವರಿಗೆ ಸ್ಥಾನ-ಮಾನಗಳನ್ನು ಕೊಡಲು ಕೂಡ ಮರೆತಿಲ್ಲ. ಪಕ್ಷದ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ ಅವರಿಗೆ ಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷರಾಗುವ ಅವಕಾಶ ಕೊಟ್ಟಿದೆ. ಪಕ್ಷದ ಬ್ಲಾಕ್ ಅಧ್ಯಕ್ಷರುಗಳನ್ನು ಸಮಿತಿಯ ತಾಲೂಕು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ವಿರಾಜಪೇಟೆಯ ಅಜ್ಜಿನಿಕಂಡ ಮಹೇಶ್ ನಾಚಯ್ಯ ಅವರನ್ನು ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರನ್ನಾಗಿ ನೇಮಿಸಿದೆ. ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನಗರ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಯಲ್ಲಪ್ಪ ಅವರನನ್ನು ನೇಮಕ ಮಾಡಿದರೆ, ಕುಶಾಲನಗರ ನಗರ ಯೋಜನಾ ಪ್ರಾಧಿಕಾರಕ್ಕೆ ಅಲ್ಲಿನ ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಮೋದ್ ಮುತ್ತಪ್ಪ ಅವರನ್ನು ನೇಮಿಸಲಾಗಿದೆ.
ಬಿಜೆಪಿ-ಜೆಡಿಎಸ್ ಸಮನ್ವಯತೆಯ ಕೊರತೆ
ಬಿಜೆಪಿಯ ಜಿಲ್ಲಾ ಘಟಕದ ಅಧ್ಯಕ್ಷರಾಗಿ ರವಿ ಕಾಳಪ್ಪ ಅವರು ಅಧಿಕಾರಿ ವಹಿಸಿಕೊಂಡರು. ವಿಧಾನಸಭಾ ಚುನಾವನೆ ನಂತರ ಸೊರಗಿರುವ ಪಕ್ಷಕ್ಕೆ ಶಕ್ತಿ ನೀಡುವ ಕೆಲಸದ ಜತೆಗೆ ಕಾರ್ಯಕರ್ತರಿಗೆ ಹುರುಪು ನೀಡುತ್ತಾ ಮುಂದಿನ ಚುನಾವಣೆಗಳಿಗೆ ಸಜ್ಜಾಗಬೇಕಾದ ಹೊಣೆಗಾರಿಕೆಯೂ ಅವರ ಮೇಲಿದ್ದು, ಪಕ್ಷ ಸಂಘಟನೆಗೆ ಆದ್ಯತೆ ಕೊಟ್ಟಿದ್ದಾರೆ. ಜೆಡಿಎಸ್‌ಗೆ ಇನ್ನೂ ಕೂಡ ಜಿಲ್ಲಾಧ್ಯಕ್ಷರ ನೇಮಕ ಆಗಿಲ್ಲ. ಯುವ ಜೆಡಿಎಸ್ ಅಧ್ಯಕ್ಷ ಸಿ.ಎಲ್. ವಿಶ್ವ ಮತ್ತೆ ಕೆಲವು ಮುಖಂಡರು ಜಿಲ್ಲೆಯಲ್ಲಿ ಜೆಡಿಎಸ್ ಅಸ್ತಿತ್ವ ಉಳಿಸಿಕೊಳ್ಳುವ ಸಲುವಾಗಿ ಕೆಲಸ ಮಾಡುತ್ತಿದ್ದಾರೆ. ರಾಷ್ಟçಮಟ್ಟದಲ್ಲಿ ಬಿಜೆಪಿ-ಜೆಡಿಎಸ್ ದೋಸ್ತಿಗಳಾಗಿದ್ದರೂ ಕೊಡಗಿನ ಮಟ್ಟಿಗೆ ಅಂಥ ಸಮನ್ವಯ ಎರಡೂ ಪಕ್ಷದ ನಾಯಕರಲ್ಲಿ ಕಂಡುಬAದಿಲ್ಲ.
ಕೊಡಗಿನಲ್ಲಿ ಸಿದ್ದರಾಮಯ್ಯ
ಜನವರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಡಗಿಗೆ ಭೇಟಿ ನೀಡಿದ್ದರು. ಹಲವು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದರು. ಫೆಬ್ರವರಿಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯೋಜಿಸಿದ್ದ ರಾಜ್ಯ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯ ಎರಡು ವಿಭಾಗಗಳಲ್ಲಿ ಪ್ರಥಮ ಸ್ಥಾನ ಗಳಿಸಿದ ಕೊಡಗಿನ ವಿದ್ಯಾರ್ಥಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಹುಮಾನ ವಿತರಿಸಿದರು. ಮಾರ್ಚ್ 8ರಂದು ಕೊಡಗಿನ ವೀರ ಪುತ್ರ, ವೀರ ಸೇನಾನಿ, ಪದ್ಮಭೂಷಣ ಜನರಲ್ ಕೆ.ಎಸ್. ತಿಮ್ಮಯ್ಯ ಅವರ ಪ್ರತಿಮೆಯನ್ನು ಮಡಿಕೇರಿಯಲ್ಲಿ ಸಕಲ ಗೌರವಗಳೊಂದಿಗೆ ಮರು ಸ್ಥಾಪನೆ ಮಾಡಲಾಯಿತು.
ಮುಂದುವರಿದ ವನ್ಯಜೀವಿ-ಮಾನವ ಸಂಘರ್ಷ
ವನ್ಯಜೀವಿ - ಮಾನವ ಸಂಘರ್ಷಕ್ಕೆ ಪರಿಹಾರ ಹುಡುಕುವ ಮಾತುಗಳು ಬರೀ ಹೇಳಿಕೆಗಳಿಗೆ ಸೀಮಿತವಾಗಿರುವುದು ಈ ವರ್ಷವೂ ಕಂಡು ಬಂತು. ಸಾಮಾನ್ಯವಾಗಿ ಜಿಲ್ಲೆಯನ್ನು ಕಾಡುತ್ತಿದ್ದ ಆನೆ, ಹುಲಿ ಹಾವಳಿ ಜತೆಗೆ ಈ ವರ್ಷ ಕಾಡುಕೋಣ, ಕಾಡೆಮ್ಮೆ, ಕೋತಿ, ಚಿರತೆ, ನವಿಲು, ಕಾಡು ಹಂದಿ, ಕರಡಿಗಳೂ ಸ್ಥಳೀಯರ ಜನಜೀವನದ ಮೇಲೆ ಪರಿಣಾಮ ಬೀರಿದವು. ಜ. 24ರಂದು ಸಿದ್ದಾಪುರ ಸಮೀಪದ ಹೊಸೂರು ಬೆಟ್ಟಗೇರಿಯಲ್ಲಿ ಕಾಡಾನೆ ದಾಳಿಗೆ ಸಿಲುಕಿ ಕಾರ್ಮಿಕ ಮಹಿಳೆ ಬೇಬಿ (55) ಎಂಬವರು ಸ್ಥಳದಲ್ಲೇ ಮೃತಪಟ್ಟರು. ಹೀಗೆ ವರ್ಷಾರಂಭದಲ್ಲೇ ಆನೆ-ಮಾನವ ಸಂರ್ಘದಿAದ ಶುರುವಾದ ಸಾವುಗಳ ಸರಣಿ ವರ್ಷಪೂರ್ತಿ ಮುಂದುವರಿಯಿತು. ಹುಲಿ ದಾಳಿಗೆ ಮನುಷ್ಯರು ಮಾತ್ರವಲ್ಲದೆ ಜಾನುವಾರುಗಳೂ ಬಲಿಯಾಗುವಂತಾಯಿತು. ಏಪ್ರಿಲ್‌ನಲ್ಲಿ ಗೋಣಿಕೊಪ್ಪಲು ಸಮೀಪದ ಪೊನ್ನಂಪೇಟೆ ತಾಲೂಕು ನಿಟ್ಟೂರು ಜಾಗಲೆ ಗ್ರಾಮದಲ್ಲಿ ವ್ಯಕ್ತಿಯೊಬ್ಬರನ್ನು ಕೊಂದ ಹುಲಿಯನ್ನು ಮರುದಿನವೇ ಸೆರೆ ಹಿಡಿಯಲಾಯಿತು. ಆದರೆ, ಇನ್ನುಳಿದ ಕಡೆ ಹುಲಿ ದಾಳಿ ಸಾಮಾನ್ಯ ಎನ್ನುವಷ್ಟರ ಮಟ್ಟಿಗೆ ಅವ್ಯಾಹತವಾಗಿ ನಡೆದು, ಜನರ ನಿದ್ದೆಗೆಡಿಸಿತು.
ಕೊಡಗಿನ ಶೈಕ್ಷಣಿಕ ಸಾಧನೆ
ಪ್ರಸಕ್ತ ಸಾಲಿನ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಕೊಡಗು 5ನೇ ಸ್ಥಾನ ಗಳಿಸುವ ಮೂಲಕ ಇತರ ಜಿಲ್ಲೆಗಳಿಗೆ ಮಾದರಿ ಎನಿಸುವಂತಾಯಿತು. ಎಸ್‌ಎಸ್‌ಎಲ್‌ಸಿಯಲ್ಲಿ ಗುಣಾತ್ಮಕ ಶಿಕ್ಷಣ ನೀಡುವಿಕೆಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆಯಿತು. ಹಿಂದಿನ ಎಲ್ಲಾ ವರ್ಷಗಳಿಗಿಂತ ಉತ್ತಮ ಫಲಿತಾಂಶ ದಾಖಲಿಸಿ, ರಾಜ್ಯದಲ್ಲೇ 4ನೇ ಸ್ಥಾನಕ್ಕೇರಿತ್ತು. ಕೇಂದ್ರೀಯ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಪರೀಕ್ಷೆಯಲ್ಲಿ 713ನೇ ರ‍್ಯಾಂಕ್‌ನಲ್ಲಿ ವಿರಾಜಪೇಟೆಯ ಕೆ.ಎಲ್.ಸೂರಜ್ ಉತ್ತೀರ್ಣರಾದರು.
ಗಿನ್ನಿಸ್ ದಾಖಲೆಗೆ ಕುಂಡ್ಯೋಳAಡ ಟೂರ್ನಿ
ಮಡಿಕೇರಿ ತಾಲೂಕು ನಾಪೋಕ್ಲುವಿನ ಚೆರಿಯಪರಂಬುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆದ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ 24ನೇ ಆವೃತ್ತಿಯ ಕುಂಡ್ಯೋಳAಡ ಟೂರ್ನಿ ಗಿನ್ನಿಸ್ ದಾಖಲೆಗೆ ಸೇರ್ಪಡೆಯಾಗಿದ್ದು ಈ ವರ್ಷದ ಕ್ರೀಡಾ ವಿಶೇಷವಾಗಿ ದಾಖಲಾಯಿತು. ಚೇಂದAಡ ಕುಟುಂಬ 3ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತು. ಜಿಲ್ಲೆಯಲ್ಲಿ ಜನವರಿಯಲ್ಲಿ 67ನೇ ರಾಷ್ಟç ಮಟ್ಟದ (17ರ ವರ್ಷದೊಳಗಿನವರ) ಶಾಲಾ ಬಾಲಕಿಯರ ಹಾಕಿ ಪಂದ್ಯಾವಳಿ ನಡೆಯಿತು. ಸೋಮವಾರಪೇಟೆ, ಕೂಡಿಗೆ ಹಾಗೂ ಪೊನ್ನಂಪೇಟೆಯಲ್ಲಿ ಪಂದ್ಯಾವಳಿಗಳು ನಡೆದವು. ಇದರಲ್ಲಿ ಜಾರ್ಖಂಡ್ ತಂಡ ಚಾಂಪಿಯನ್ ಆಯಿತು. ವಿರಾಜಪೇಟೆ ಸಮೀಪದ ಕುಕ್ಲೂರು ಗ್ರಾಮದ ಶರಣ್ಯ ರಾವ್ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಭಾರತೀಯ ಭೂಸೇನೆಯ ಕ್ಯಾಪ್ಟನ್ ಆಗಿ ಭೂಸೇನೆಯ ನಾರಿಶಕ್ತಿ ತಂಡವನ್ನು ಮುನ್ನಡೆಸಿದರು.