ಹಿಂದುತ್ವವೇ ನಮ್ಮ ಅಜೆಂಡಾ: ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಸುರೇಶ್‌ಗೌಡ

23Tmk_Sira_Byelection
Published on

ತುಮಕೂರು: ಶಿರಾ ನಗರದಲ್ಲಿ ಹಿಂದುಗಳು ಭಯದ ವಾತಾವರಣದಲ್ಲಿದ್ದು ಈ ಬಾರಿ ಹಿಂದುತ್ವ ನಮ್ಮ ಚುನಾವಣಾ ಅಜೆಂಡಾ ಆಗಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಸುರೇಶ್‌ಗೌಡ ಹೇಳಿದರು.

ಅಲ್ಪಸಂಖ್ಯಾತರ ಓಲೈಕೆಗಾಗಿ ಈವರೆಗೆ ಕಾಂಗ್ರೆಸ್, ಜೆಡಿಎಸ್‌ನಿಂದ ಆಯ್ಕೆಯಾದ ಶಾಸಕರು ಹಿಂದುಗಳ ಹಿತ ರಕ್ಷಿಸುವಲ್ಲಿ ವಿಫಲರಾಗಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಗಂಭೀರ ಆರೋಪ ಮಾಡಿದರು.

ಕ್ಷೇತ್ರದ 264 ಬೂತ್‌ಗಳ ಪೈಕಿ ಈಗಾಗಲೇ 220 ಬೂತ್‌ಗಳಲ್ಲಿ ಪಕ್ಷದಿಂದ ಸಭೆಗಳನ್ನು ಮಾಡಲಾಗಿದೆ. ಬಹುತೇಕ ಒಂದು ಸುತ್ತಿನ ಪ್ರಚಾರ ಸಭೆಗಳನ್ನು ಮುಗಿಸಿದ್ದು ನೂರಕ್ಕೆ ನೂರು ಬಿಜೆಪಿ ಗೆಲ್ಲಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಮದಲೂರು ಕೆರೆಗೆ ಹೇಮೆ!: ಶಿರಾ ಕ್ಷೇತ್ರದಲ್ಲಿ ಸಾಕಷ್ಟು ಜ್ವಲಂತ ಸಮಸ್ಯೆಗಳಿದ್ದು 30 ವರ್ಷಗಳಿಂದ ಮದಲೂರು ಕೆರೆಗೆ ನೀರು ಹರಿದಿಲ್ಲ. ಇದು ಚುನಾವಣೆಯಲ್ಲಿ ಪ್ರಮುಖ ವಿಚಾರವಾಗಲಿದೆ, ಈ ಬಾರಿ ಹೇಮಾವತಿ ನೀರು ಹರಿಸುವ ವಿಚಾರವಾಗಿ ಈಗಾಗಲೇ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೇವೆ. ಅವರೂ ಸಹ ಸ್ಪಂದಿಸಿದ್ದಾರೆ ಎಂದರು. ಇದಲ್ಲದೆ ಭದ್ರಾ ಮೇಲ್ದಂಡೆ ಯೋಜನೆಯಿಂದ ಈ ಭಾಗದ 62 ಕೆರೆಗಳಿಗೆ ನೀರು ಹರಿಸುವ ಯೋಜನೆಗೆ ಶೀಘ್ರ ಶಂಕುಸ್ಥಾಪನೆ ನೆರವೇರಿಸುವಂತೆ ಸಿಎಂಗೆ ಮನವಿ ಮಾಡಿದ್ದೇವೆ. ಇನ್ನೆರಡು ವರ್ಷಗಳಲ್ಲಿ ನೀರು ಹರಿದು ಶಾಶ್ವತ ನೀರಾವರಿ ಯೋಜನೆ ಸಾಕಾರವಾಗಲಿದೆ ಎಂದರು.

ಬಿಜೆಪಿ ರಾಜ್ಯ ಕಾರ್ಯದರ್ಶಿ ವಿನಯ್ ಬಿದರೆ, ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಶಿವಪ್ರಸಾದ್, ಉಪಾಧ್ಯಕ್ಷ ಎಂ.ಬಿ.ನಂದೀಶ್, ಜಿಲ್ಲಾ ಪ್ರಭಾರಿ ಲಕ್ಷ್ಮೀಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಪಿಗೆ ಶ್ರೀಧರ್, ಜಿಲ್ಲಾ ಕಾರ್ಯದರ್ಶಿ ಓಂಕಾರ್ ಹಾಜರಿದ್ದರು.

ಪ್ರೀತಿಯೇ ಬೇರೆ, ರಾಜಕಾರಣವೇ ಬೇರೆ!: ಜಯಚಂದ್ರ ಅವರ ಪತ್ನಿ ಶಿಕಾರಿಪುರದವರು. ಯಡಿಯೂರಪ್ಪ ಅವರ ಸಂಬಂಧಿಕರ ನೆರೆ-ಹೊರೆಯವರು. ನಾನೂ ಸೇರಿ ಯಡಿಯೂರಪ್ಪ, ದೇವೇಗೌಡರು, ಮಾಜಿ ಸಿಎಂ ಕುಮಾರಸ್ವಾಮಿ ಜತೆಗೆ ಉತ್ತಮ ಸಂಬಂಧ ಹೊಂದಿರುವ ಜಯಚಂದ್ರ ಸಜ್ಜನ ರಾಜಕಾರಣಿ. ಆದರೆ, ಅವರ ಬಗೆಗಿನ ಪ್ರೀತಿಯೇ ಬೇರೆ, ರಾಜಕಾರಣವೇ ಬೇರೆ. ಶಿರಾ ಯುದ್ಧದಲ್ಲಿ ಗೆಲ್ಲಬೇಕೆಂಬುದಷ್ಟೇ ನಮ್ಮ ಗುರಿ. ಗೆಲ್ಲುವಂತಹ ಅಭ್ಯರ್ಥಿಯನ್ನೇ ಪಕ್ಷ ಕಣಕ್ಕಿಳಿಸಲಿದೆ ಎಂದು ಸುರೇಶ್‌ಗೌಡ ಹೇಳಿದರು.

ವಿಜಯೇಂದ್ರ ನಮ್ಮನೆ ಹುಡುಗ: ಶಿರಾ ತಾಲೂಕಿನಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳನ್ನು ನೋಡಲು ಸಿಎಂ ಪುತ್ರ ಬಿ.ವೈ.ವಿಜಯೇಂದ್ರ ಕ್ಷೇತ್ರಕ್ಕೆ ಬರಬೇಕು ಅಂತ ಹೇಳುತ್ತಿದ್ದ. ವಿಜಯೇಂದ್ರ ನಮ್ಮನೆ ಹುಡುಗ ಇದ್ದಂತೆ ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಮಂಗಳವಾರ ತಾಲೂಕಿನ ಸಿದ್ದನಹಳ್ಳಿಯಲ್ಲಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ ಬಳಿಕ ತೀಕ್ಷ್ಣವಾಗಿ ಪ್ರತಿಕ್ರಿ ಯಿಸುವ ಮೂಲಕ ಬಿಜೆಪಿ ಆರೋಪಗಳಿಗೆ ಟಾಂಗ್ ನೀಡಿದರು.

ಕೆರೆಗೆ ಮೊದಲು ನೀರು ಹರಿಸಿ: ಶಿರಾ ತಾಲೂಕಿನ ಬಂದಗುಂಟೆಯಲ್ಲಿ ಬುಧವಾರ ಬೂತ್‌ಮಟ್ಟದ ಸಭೆ ಬಳಿಕ ಮತ ಕೇಳಲು ಬಂದ ಬಿ.ಸುರೇಶ್‌ಗೌಡ ಅವರನ್ನು ಮತದಾರರು ತರಾಟೆಗೆ ತೆಗೆದುಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮದಲೂರು ಕೆರೆಗೆ ಮೊದಲು ನೀರು ಹರಿಸಿ. ಆನಂತರ ಮಾತನಾಡಿ ಎಂದಿರುವ ಸ್ಥಳೀಯರು, ಗ್ಯಾಸ್ ಸಬ್ಸಿಡಿ ಏಕೆ ವಾಪಸ್ ತೆಗೆದುಕೊಂಡಿದ್ದೀರಾ ? ರೈತರಿಗೆ ನಿಮ್ಮ ಸರ್ಕಾರದಿಂದ ಅನುಕೂಲ ಆಗುತ್ತಿಲ್ಲ ಎಂದು ಕಿಡಿಕಾರಿದರು. ಜನರ ಆಕ್ರೋಶಭರಿತ ನುಡಿಗಳನ್ನು ತಾಳ್ಮೆಯಿಂದಲೇ ಆಲಿಸಿದ ಸುರೇಶ್‌ಗೌಡ ನೀರು ಹರಿಸಬೇಕು ಅಲ್ವ, ನಿಮ್ಮ ಬೇಡಿಕೆ ಶೀಘ್ರ ಈಡೇರಿಸುವುದಾಗಿ ಭರವಸೆಯಿತ್ತರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net