ಅಲ್ಪಸಂಖ್ಯಾತರನ್ನು ಓಲೈಸಲು ಹಿಂದುಗಳ ಟಾರ್ಗೆಟ್

31M.D.R.11
Published on

 ಮದ್ದೂರು: ರಾಜ್ಯ ಸರ್ಕಾರವು ಅಲ್ಪಸಂಖ್ಯಾತರನ್ನು ಓಲೈಕೆಮಾಡಲು ಬಿಜೆಪಿ, ಭಜರಂಗದಳ ಹಾಗೂ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರನ್ನು ಟಾರ್ಗೆಟ್ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದರು.

ಪಟ್ಟಣದ ಬಿಜೆಪಿ ಕಚೇರಿಗೆ ಶನಿವಾರ ಆಗಮಿಸಿದ ವೇಳೆ ಮನ್‌ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ ಅವರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

ಮಂಗಳೂರಿನಲ್ಲಿ ನಡೆಯುತ್ತಿರುವ ಕೋಮುಗಲಭೆಯ ವಿಷಯದಲ್ಲಿ ಕಾಂಗ್ರೆಸ್ ಪಕ್ಷ ಅದನ್ನು ಹತ್ತಿಕ್ಕುವ ಬದಲು ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ. ಈ ಮೂಲಕ ರಾಜ್ಯದ ಹಲವೆಡೆ ಕೋಮುಗಲಭೆಗಳಿಗೆ ಪ್ರಚೋದನೆ ನೀಡಿ ಕುಮ್ಮಕ್ಕು ನೀಡುತ್ತಿದ್ದಾರೆ. ಅದು ದಕ್ಷಿಣ ಕನ್ನಡ ಜಿಲ್ಲೆಯ ಜನತೆಗೆ ಚೆನ್ನಾಗಿ ಗೊತ್ತಿದೆ ಎಂದು ಕಿಡಿಕಾರಿದರು.

ರಾಜ್ಯ ಸರ್ಕಾರದ ಬೆಲೆ ಏರಿಕೆಯಿಂದಾಗಿ ಜನತೆ ಬೇಸತ್ತು ಹೋಗಿದ್ದಾರೆ. ರಾಜ್ಯ ಸರ್ಕಾರವು ಬಡವರ, ರೈತರ, ದೀನ ದಲಿತರ ವಿರೋಧಿ ಸರ್ಕಾರವೆಂದು ಸಾಬೀತಾಗಿದೆ. ಎಲ್ಲ ವರ್ಗದ ಜನರಿಗೆ ಅನ್ಯಾಯವಾಗುತ್ತಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು ಜಾತಿ ಜಾತಿಗಳ ನಡುವೆ ವಿಷ ಬೀಜ ಬಿತ್ತುವುದನ್ನೇ ಕೆಲಸ ಮಾಡಿಕೊಂಡಿದೆ. ಮುಂದಿನ ದಿನಗಳಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲಿದ್ದು, ಮಂಡ್ಯ ಜಿಲ್ಲೆಯಲ್ಲೂ 2 ರಿಂದ 3 ಸ್ಥಾನಗಳಿಸಲಿದ್ದೇವೆ. ಬಿಜೆಪಿ ಜೆಡಿಎಸ್ ಮೈತ್ರಿ ಮುಂದುವರಿಯಲಿದೆ ಎಂದರು.

ಮಂಡ್ಯದಲ್ಲಿ ನಡೆದ ಘಟನೆಯಲ್ಲಿ ಸಾವನ್ನಪ್ಪಿದ ರಿತೀಕ್ಷಾ ಬಾಲಕಿಯ ಪಾಲಕರಿಗೆ ಪರಿಹಾರ ಧನ ನೀಡಿದರು. ರಿತೀಕ್ಷಾ ಸುರಕ್ಷಾ ಎಂಬ ಹೆಸರಿನಲ್ಲಿ 10 ಸಾವಿರ ಹೆಲ್ಮೆಟ್‌ಗಳನ್ನು ವಿತರಿಸುವುದಾಗಿ ಬಿಜೆಪಿ ಮುಖಂಡ ಸಚ್ಚಿದಾನಂದ ಘೋಷಿಸಿದರು.

ಮನ್ ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್, ಮುಖಂಡರಾದ ಇಂಡುವಾಳು ಸಚ್ಚಿದಾನಂದ, ಸಿದ್ದರಾಮಯ್ಯ, ಅಶೋಕ್‌ಜಯರಾಮು, ಕೃಷ್ಣೇಗೌಡ, ಮಹದೇವು, ಸಿ.ಕೆ.ಸತೀಶ್, ಮ.ನ.ಪ್ರಸನ್ನಕುಮಾರ್, ಶ್ವೇತಾ, ಎಂ.ಸತೀಶ್, ಜಿ.ಸಿ.ಮಹೇಂದ್ರ, ಮಹೇಂದ್ರ, ಡಾಬಾಕಿಟ್ಟಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net