ಕಾಂಗ್ರೆಸ್ ಸರ್ಕಾರವಿರುವವರೆಗೆ ಹಿಂದುಗಳಿಗೆ ರಕ್ಷಣೆಯಿಲ್ಲ

16 NMG 02
ನಾಗಮಂಗಲ ಪಟ್ಟಣದಲ್ಲಿ ನಡೆದಿದ್ದ ಗಲಭೆ ಪ್ರಕರಣದ ಸಂತ್ರಸ್ತರ ಮನೆಗಳಿಗೆ ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಭೇಟಿ ನೀಡಿ ಸಾಂತ್ವನ ಹೇಳಿದರು.
Published on

ನಾಗಮಂಗಲ: ಎಲ್ಲಿಯವರೆಗೆ ಕಾಂಗ್ರೆಸ್ ಸರ್ಕಾರ ಇರುತ್ತದೋ ಅಲ್ಲಿಯವರೆಗೆ ಹಿಂದುಗಳು ಸುರಕ್ಷಿತರಲ್ಲ. ಹಿಂದುಗಳ ರಕ್ಷಣೆಗೆ ಯಾರೂ ನಿಲ್ಲುತ್ತಾರೆ ಅವರಿಗೆ ಮತ ಹಾಕಬೇಕಿದ್ದು ನಮ್ಮಗಳ ರಕ್ಷಣೆಗೆ ಪೂಜೆ, ಮಂತ್ರದ ಜತೆಗೆ ಧರ್ಮಕ್ಕಾಗಿ ಹೋರಾಟವನ್ನು ಮೈಗೂಡಿಸಿಕೊಳ್ಳಬೇಕಿದೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು.

ಪಟ್ಟಣದಲ್ಲಿ ಕಳೆದ ಅಕ್ಟೋಬರ್ ತಿಂಗಳಲ್ಲಿ ಗಣಪತಿ ವಿಸರ್ಜನೆ ವೇಳೆ ನಡೆದ ಕೋಮು ಗಲಭೆ ಹಿನ್ನೆಲೆಯಲ್ಲಿ ಹಾನಿಗೊಳಗಾದ ಸಂತ್ರಸ್ತರ ಮನೆಗಳಿಗೆ ಸೋಮವಾರ ಭೇಟಿ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ಗಲಭೆ ಇಲ್ಲಿಗೆ ನಿಲ್ಲುವುದಿಲ್ಲ. ಇನ್ನೂ ಮುಂದುವರಿಯುತ್ತದೆ. ಪ್ರತಿಯೊಬ್ಬ ಹಿಂದು ಮುಂದಿನ ದಿನಗಳಲ್ಲಿ ಆಲೋಚನೆ ಮಾಡಬೇಕಿದೆ. ಧರ್ಮಕ್ಕಾಗಿ ದೇಶಕ್ಕಾಗಿ ಪ್ರಸ್ತುತ ಪ್ರತಿಯೊಬ್ಬ ಹಿಂದು ಪೂಜೆ, ಹೋಮ, ಹವನ, ರುದ್ರಾಭಿಷೇಕದ ಜತೆಗೆ ಕ್ಷಾತ್ರಧರ್ಮವನ್ನು ಪಾಲಿಸುವ ಮೂಲಕ ನಮ್ಮ ರಕ್ಷಣೆಗಾಗಿ ಹೋರಾಟದ ಮನೋಭಾವ ಬೆಳೆಸಿಕೊಳ್ಳಬೇಕಿದೆ. ನಮ್ಮ ಊರಿನಲ್ಲಿ ನಮ್ಮ ದೇಶದಲ್ಲಿ ಗಣಪತಿ ಪೂಜೆ ವಿಸರ್ಜನೆಗೆ ತೊಂದರೆ ನೀಡುತ್ತಾರೆ ಎಂದರೆ ನಾವು ಭಾರತದಲ್ಲಿದ್ದೇವಾ ಅಥವಾ ಯಾವ ದೇಶದಲ್ಲಿದ್ದೇವೆ ಎಂಬುದೇ ಅರ್ಥವಾಗುತ್ತಿಲ್ಲ. ಸಾವಿರಾರು ವರ್ಷದಿಂದ ನಾವು ಗಣಪತಿ ಪೂಜಿಸುತ್ತಿದ್ದೇವೆ. ಮೊದಲ ಪೂಜೆ ಗಣೇಶನಿಗೆ ಎಂಬುದು ನಮ್ಮ ಧಾರ್ಮಿಕ ಪದ್ಧತಿ. ಹೀಗಿರುವಾಗ ಕೆಲವು ದುಷ್ಕರ್ಮಿಗಳು ಗಣಪತಿ ವಿಸರ್ಜನೆ ವೇಳೆ ಅಪಮಾನ ಮಾಡುತ್ತಾರೆಂದರೆ ಇದು ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿನ ಪ್ರತಿಫಲ. ಕಳೆದ 78 ವರ್ಷಗಳಿಂದ ಹಿಂದುಗಳು ತಾಳ್ಮೆಯಿಂದ ಇದ್ದಾರೆ. ಅದರ ಪ್ರತಿಫಲವೇ ನಮ್ಮ ಮೇಲೆ ದಬ್ಬಾಳಿಕೆ ದೌರ್ಜನ್ಯ ಹಿಂಸೆ ನಡೆಯುತ್ತಿದೆ. ಇನ್ನು ಹಿಂದುಗಳ ತಾಳ್ಮೆ ಸಾಕು. ಪ್ರತಿಯೊಬ್ಬ ಹಿಂದು ಕ್ರಾತ್ರಧರ್ಮ ಪರಿಪಾಲಿಸುವಂತಾಗಬೇಕು ಎಂದರು.

ಬಜರಂಗದಳ ತಾಲೂಕು ಕಾರ್ಯದರ್ಶಿ ಮಹೇಶ್, ಮಂಡ್ಯ ಜಿಲ್ಲಾ ವಿಶ್ವ ಹಿಂದು ಪರಿಷತ್ ಜಿಲ್ಲಾ ಕಾರ್ಯದರ್ಶಿ ಪುಣ್ಯಕೋಟಿ ರಾಘವೇಂದ್ರ, ಮಂಡ್ಯ ಬಜರಂಗದಳ ಜಿಲ್ಲಾ ಸಂಯೋಜಕ ಶಶಿಕಿರಣ್, ತಾಲೂಕು ಸಂಯೋಜಕ್ ಕಾರ್ತಿಕ್, ವಿಶ್ವ ಹಿಂದು ಪರಿಷತ್ ನಗರ ಅಧ್ಯಕ್ಷ ಸೋಮಶೇಖರ್, ಪ್ರವೀಣ್, ರಾಜೇಶ್ ಸೇರಿದಂತೆ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net