ರಾಜ್ಯ ಸರ್ಕಾರದ ನಡೆಯಿಂದ ಹಿಂದುಗಳಿಗೆ ನೋವು

Raghavendra B.Y. (7)
Published on

ಸಾಗರ: ರಾಜ್ಯ ಸರ್ಕಾರ ಜನರ ಭಾವನೆಗಳನ್ನು ಅರ್ಥಮಾಡಿಕೊಳ್ಳಬೇಕು. ಹನುಮ ಧ್ವಜ ಹಿಂದುತ್ವದ ಸಂಕೇತವಾಗಿದೆ. ಹನುಮ ಧ್ವಜವನ್ನು ಕಿತ್ತು ಹಾಕುವ ತೆಗೆದು ಹಾಕುವ ಪ್ರಯತ್ನ ಜತೆಗೆ ಹಿಂದುಗಳ ಭಾವನೆಗಳಿಗೆ ನೋವನ್ನುಂಟು ಮಾಡುವ ಕೆಲಸವನ್ನ ರಾಜ್ಯ ಸರ್ಕಾರ ಪದೇ ಪದೆ ಮಾಡುತ್ತಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅಸಮಾಧಾನ ವ್ಯಕ್ತಪಡಿಸಿದರು.

ಭಾನುವಾರ ಸುದ್ದಿಗಾರರ ಜತೆ ಮಾತನಾಡಿ, ಧ್ವಜ ಯಾವುದೇ ಧರ್ಮ ಹಾಗೂ ಜಾತಿಗೆ ಸೇರಿದಂತಲ್ಲ. ಮೇಲಿಂದ ಮೇಲೆ ಈ ರೀತಿಯ ತಪ್ಪುಗಳನ್ನು ಮಾಡಿ ಸಂಸತ್‌ನಲ್ಲಿ ಅಧಿಕೃತ ವಿರೋಧ ಪಕ್ಷದ ಸ್ಥಾನವನ್ನು ಕಾಂಗ್ರೆಸ್ ಕಳೆದುಕೊಂಡಿದೆ. ಹೀಗೆ ತಪ್ಪು ಮಾಡುತ್ತಾ ಹೋದರೆ ರಾಜ್ಯದಲ್ಲಿ ಅಪ್ಪಿ-ತಪ್ಪಿ ಬಂದಿರುವಂತಹ ಅಧಿಕಾರವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದರು.
ಪ್ರಧಾನ ಮಂತ್ರಿ ಕೊಟ್ಟಂತಹ ಯೋಜನೆಗಳೇ ನಮಗೆ ಸಾಕು. ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಜನರ ಮಧ್ಯೆ ತೆಗೆದುಕೊಂಡು ಹೋಗುತ್ತೇವೆ. ಮಾರಿಕಾಂಬೆ ಗದ್ದಿಗೆ ಬಳಿ ನಿಂತು ಮಾತನಾಡುತ್ತಿದ್ದೇನೆ, ಈ ಬಾರಿ 400ಕ್ಕಿಂತಲೂ ಹೆಚ್ಚಿನ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸುತ್ತದೆ. ಮತ್ತೊಮ್ಮೆ ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ದೇಶ ಕಟ್ಟುವಂತ ಕೆಲಸ ನಡೆಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೇವಲ ಚುನಾವಣೆ ಸಮಯದಲ್ಲಿ ಮಾತ್ರ ಶರಾವತಿ ಸಂತ್ರಸ್ತರ ವಿಚಾರ ನೆನಪಿಸಿಕೊಳ್ಳುವುದಲ್ಲ. ಅದು ನನ್ನ ಆದ್ಯ ಕರ್ತವ್ಯ ಎಂದು ಪರಿಗಣಿಸಿದ್ದೇನೆ. ಈಗಾಗಲೇ ಸಾಕಷ್ಟು ಪ್ರಯತ್ನಗಳನ್ನ ನಾವು ಮಾಡಿದ್ದೇವೆ. ಆದರೆ ಇನ್ನೂ ಅದಕ್ಕೆ ಯಶಸ್ಸಿನ ಮಾರ್ಗ ಸಿಕ್ಕಿಲ್ಲ. ಸುಪ್ರೀಂಕೋರ್ಟ್ ಸೂಚನೆ ನೀಡಿದ ನಂತರವೂ ರಾಜ್ಯ ಸರ್ಕಾರ ಕೇಂದ್ರಕ್ಕೆ ಇನ್ನೂ ಪ್ರಸ್ತಾವನೆ ಸಲ್ಲಿಸಿಲ್ಲ. ಒಂದು ಕೇವಿಯಟ್ ಸಹ ರಾಜ್ಯ ಸರ್ಕಾರ ಸುಪ್ರೀಂಕೋರ್ಟಿಗೆ ಸಲ್ಲಿಸಿಲ್ಲ ಎಂದು ದೂರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net