

ಹುಬ್ಬಳ್ಳಿ: ಸಂವಿಧಾನಬದ್ಧವಾಗಿ ವಿವಿಧ ಜನಾಂಗಗಳಿಗೆ ಬರಬೇಕಾದ ಮೀಸಲಾತಿ ಒದಗಿಸುವುದು, ಹಿಂದುಳಿದ ಸಮಾಜದ ಮಠ ಸ್ಥಾಪನೆಗೆ ಭೂಮಿ ಮಂಜೂರು ಮಾಡುವುದು, ಅಲೆಮಾರಿ ಮತ್ತು ತೀರಾ ಹಿಂದುಳಿದ ವರ್ಗಗಳ ಜನಾಂಗದ ಗುರುಪೀಠಗಳ ಸ್ಥಾಪನೆ ಮಾಡುವುದು, ಸಂವಿಧಾನ ತತ್ವಗಳ ರಕ್ಷಣೆಗಾಗಿ ಎಲ್ಲರೂ ಕಟಿಬದ್ಧವಾಗಿರುವುದು ಸೇರಿದಂತೆ ಹಲವು ನಿರ್ಣಯಗಳನ್ನು ಕೈಗೊಳ್ಳಲಾಗಿದೆ.
ಇಲ್ಲಿಯ ಗೋಕುಲ ರಸ್ತೆ ಲೋಹಿಯಾನಗರದಲ್ಲಿ ಭಾನುವಾರ ರಾಷ್ಟ್ರೀಯ ಕೋಲಿ ಬೆಸ್ತ ಹಿಂದುಳಿದ ವರ್ಗಗಳ ಮಠಾಧೀಶ್ವರರ ಮಹಾಸಭಾ ವತಿಯಿಂದ ಏರ್ಪಡಿಸಿದ್ದ ಹಿಂದುಳಿದ ವರ್ಗಗಳ ಮಠಾಧೀಶ್ವರರ ಚಿಂತನ ಮಂಥನ ಸಭೆಯಲ್ಲಿ ಈ ಕುರಿತು ಚರ್ಚೆ ಮಾಡಿ ಸರ್ಕಾರಕ್ಕೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ.
ಸಮಾಜ, ಜನಾಂಗದವರು ತಮ್ಮ ಹಕ್ಕನ್ನು ಪಡೆಯುವದಕ್ಕಾಗಿ ಹೋರಾಟ ನಡೆಸುವುದು, ನಾಡು, ನುಡಿ ರಕ್ಷಣೆ ಹಾಗೂ ರಾಷ್ಟ್ರ ವಿರೋಧಿ ಚಟುವಟಿಕೆ ಮಾಡುವವರ ವಿರುದ್ಧ ಜಾಗೃತಿ ಮೂಡಿಸುವುದು, ಇದಕ್ಕಾಗಿ ರಾಷ್ಟ್ರೀಯ ಸಂಘಟನೆ ಸ್ಥಾಪನೆ ಮಾಡಲು ಕೂಡ ತೀರ್ಮಾನಿಸಲಾಯಿತು ಎಂದು ಸಭೆ ನಂತರ ಮಹಾಸಭಾ ಅಧ್ಯಕ್ಷ ಬ್ರಹ್ಮಶ್ರೀ ರಾಜು ಗುರುಸ್ವಾಮೀಜಿ ತಿಳಿಸಿದ್ದಾರೆ.
ಹುಬ್ಬಳ್ಳಿಯ ರಾಜ ವಿದ್ಯಾಶ್ರಮದ ಜಗದ್ಗುರು ಶ್ರೀ ಷಡಕ್ಷರಿ ಅಪ್ಪಗಳು, ವೇದವ್ಯಾಸ ಪೀಠದ ಪೀಠಾಧಿಪತಿ ಶ್ರೀರಾಜು ಗುರುಸ್ವಾಮಿ, ಶಿಕ್ಕಲಿಗಾರ ಸಮಾಜ ಪೀಠದ ಸ್ವಾಮೀಜಿ ಆಚಾರ್ಯ ರಾಘವೇಂದ್ರ ಸ್ವಾಮೀಜಿ, ಉಪ್ಪಾರ ಪೀಠದ ಭಗೀರಥಾನಂದಪುರಿ, ಬಂಜಾರ ಪೀಠದ ಜಗದ್ಗುರು ಕುಮಾರ ದೇವು, ಅಂಬಿಗರ ಪೀಠದ ಶಾಂತಗುರು ಸಿದ್ದಲಿಂಗ ಸ್ವಾಮೀಜಿ, ಸಿಂದಗಿ ಗಣೇಶಾನಂದ ಸ್ವಾಮೀಜಿ, ಹೂಗಾರ ಪೀಠದ ಗಜಾನನ ಸ್ವಾಮೀಜಿ, ಬಾದಾಮಿ ವಿಶ್ವಕರ್ಮ ಪೀಠದ ಜಗದೀಶಾನಂದ ಸ್ವಾಮೀಜಿ, ಸೇರಿ ಹಲವು ಮಠಾಧೀಶರು ಪಾಲ್ಗೊಂಡಿದ್ದರು.
ಬೀಳ್ಕೊಡುಗೆ:
ರಾಷ್ಟ್ರೀಯ ಕೋಲಿ ಬೆಸ್ತ ಹಿಂದುಳಿದ ವರ್ಗಗಳ ಮಠಾಧೀಶ್ವರರ ಮಹಾಸಭಾ ವತಿಯಿಂದ ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಹಿಂದುಳಿದ ವರ್ಗಗಳ ಮಠಾಧೀಶ್ವರರ ಹಾಗೂ ಜನಾಂಗದ ಪ್ರಮುಖ ನಾಯಕರ ಚಿಂತನ ಮಂಥನ ಸಭೆಗೆ ಆಗಮಿಸಿದ ವಿವಿಧ ಸ್ವಾಮೀಜಿಗಳನ್ನು ಶ್ರೀ ಸಿದ್ಧಾರೂಢ ಮಠದಲ್ಲಿ ಸ್ವಾಗತಿಸಿ ಬೀಳ್ಕೊಡಲಾಯಿತು.
ಶ್ರೀಮಠದಲ್ಲಿ ಉಭಯ ಗದ್ದುಗೆಗೆ ಪೂಜೆ ಸಲ್ಲಿಸಿದ ಸ್ವಾಮೀಜಿಗಳು ಸಭೆಗೆ ತೆರಳಿದರು. ಈ ಸಂದರ್ಭದಲ್ಲಿ ಶ್ರೀಮಠದ ಟ್ರಸ್ಟ್ ಕಮಿಟಿ ಚೇರ್ಮನ್ ಬಸವರಾಜ ಕಲ್ಯಾಣಶೆಟ್ಟರ್, ವೈಸ್ ಚೇರ್ಮನ್ ಮಂಜುನಾಥ ಮುನವಳ್ಳಿ, ಕೆಪಿಸಿಸಿ ವಕ್ತಾರ ಗಂಗಾಧರ ದೊಡ್ಡವಾಡ, ಸಿಕ್ಕಲಿಗಾರ ಸಮಾಜದ ಮುಖಂಡ ದ್ಯಾಮಣ್ಣ ಡೋಂಗಿ, ಕಿಶನ್ ಬಿಲಾನ, ಈಶ್ವರ ಶಿರಕೋಳ, ವಿರುಪಾಕ್ಷಪ್ಪ ಕಳ್ಳಿಮನಿ ಮುಂತಾದವರು ಉಪಸ್ಥಿತರಿದ್ದರು.