

ಯಲ್ಲಾಪುರ ಬ್ರಾಹ್ಮಣ್ಯ ಉಳಿದರೆ ಮಾತ್ರ ಹಿಂದು ಸಮಾಜದ ನೆಲೆ ಇನ್ನಷ್ಟು ಗಟ್ಟಿಯಾಗಲು ಸಾಧ್ಯ ಎಂದು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.
ಪಟ್ಟಣದ ಎಪಿಎಂಸಿ ರೈತ ಸಭಾಭವನದಲ್ಲಿ ಭಾನುವಾರ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ವಿಪ್ರ ಸಮಾವೇಶದ ಸಮಾರೋಪದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಸಂಸ್ಕಾರಗಳೇ ಬ್ರಾಹ್ಮಣರ ವಿಶೇಷ. ಆದರೆ, ನಮ್ಮ ಸಂಸ್ಕಾರದ ಕುರಿತಾದ ಅಭಿಮಾನವೂ ಇಲ್ಲದಷ್ಟು ಅದು ಕ್ಷೀಣಿಸಿರುವುದು ವಿಪರ್ಯಾಸ. ಇತರ ಸಮಾಜಗಳಿಗೆ ಬೆಳಕಾಗಲು ಬ್ರಾಹ್ಮಣ್ಯ ಉಳಿಯಬೇಕು. ಸಂಸ್ಕಾರಗಳು ನಶಿಸದಂತೆ ಕಾಯ್ದುಕೊಂಡು, ಬ್ರಾಹ್ಮಣ್ಯ ಉಳಿಸಿಕೊಳ್ಳುವುದು ಬ್ರಾಹ್ಮಣ ಸಂಘಟನೆಯ ಪ್ರಮುಖ ಕಾರ್ಯ ಆಗಬೇಕು. ಹಳೆಯ ತತ್ವವನ್ನು ಹೊಸ ವಿಜ್ಞಾನಕ್ಕೆ ಸರಿಸಮವಾಗಿ ತಂದು ಜೋಡಿಸುವ ಜವಾಬ್ದಾರಿ ಬ್ರಾಹ್ಮಣರದು ಎಂದರು.
ಮಕ್ಕಳಿಗೆ ಆಧುನಿಕ ಶಿಕ್ಷಣದ ಬಗ್ಗೆ ಹೇಳಿದಂತೆ ನಮ್ಮ ಸಂಸ್ಕಾರಗಳ ಬಗ್ಗೆಯೂ ತಿಳಿಸುವ ಹೊಣೆಯನ್ನು ಪಾಲಕರು ನಿರ್ವಹಿಸಿದಾಗ ಬ್ರಾಹ್ಮಣರ ಎಲ್ಲ ಸಮಸ್ಯೆಗಳಿಗೆ ಪರಿಹಾರ ದೊರಕಲು ಸಾಧ್ಯ ಎಂದರು.
ವಿವಿಧ ಕ್ಷೇತ್ರಗಳ ಸಾಧಕರಾದ ಪಂ. ಗಣಪತಿ ಭಟ್ಟ ಹಾಸಣಗಿ, ಮಂಜುನಾಥ ಹೆಗಡೆ ನೆಟ್ಟಿಗಾರ, ಶ್ರೀಧರ ದೇಸಾಯಿ ಗುಂದ, ಶಂಭುಲಿಂಗ ಹೆಗಡೆ, ಎಂ.ಪಿ. ಭಟ್ಟ ಅಂಕೋಲಾ, ಜಿ.ಡಿ. ಭಟ್ಟ ಕೆಕ್ಕಾರ ಅವರನ್ನು ಸನ್ಮಾನಿಸಲಾಯಿತು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಅಶೋಕ ಹಾರ್ನಳ್ಳಿ, ಉಪಾಧ್ಯಕ್ಷ ಡಾ. ಶಶಿಭೂಷಣ ಹೆಗಡೆ, ಮಹಿಳಾ ಸಂಚಾಲಕಿ ಡಾ. ಶುಭಮಂಗಲಾ, ನಿರ್ಮಲಾ ಹೆಗಡೆ ಕರ್ಕಿ, ಸಂಚಾಲಕ ಛಾಯಾಪತಿ, ಸಂಘಟನಾ ಕಾರ್ಯದರ್ಶಿ ಎಚ್.ಆರ್. ಗಣೇಶ, ಹವ್ಯಕ ಮಹಾಮಂಡಲದ ಅಧ್ಯಕ್ಷ ಮೋಹನ ಹೆಗಡೆ, ಸ್ವರ್ಣವಲ್ಲೀ ಮಠದ ಅಧ್ಯಕ್ಷ ವಿ.ಎಂ. ಹೆಗಡೆ ಬೊಮ್ನಳ್ಳಿ, ಪ್ರಮುಖರಾದ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ಇತರರಿದ್ದರು. ಡಾ. ರವಿ ಭಟ್ಟ ಬರಗದ್ದೆ, ಚಂದ್ರಕಲಾ ಭಟ್ಟ, ಪ್ರಸಾದ ಹೆಗಡೆ ನಿರ್ವಹಿಸಿದರು.
ಯಕ್ಷಗೆಜ್ಜೆ ತಂಡದಿಂದ ಯಕ್ಷಗಾನ ಪ್ರದರ್ಶನ, ಖ್ಯಾತ ಭಾಗವತ ರಾಮಕೃಷ್ಣ ಹೆಗಡೆ ಹಿಲ್ಲೂರು ತಂಡದಿಂದ ಭಕ್ತಿಗಾನ ಕಾರ್ಯಕ್ರಮ ನಡೆಯಿತು. ಮಹಿಳೆಯರಿಂದ ಸಾಂಪ್ರದಾಯಿಕ ಉಡುಗೆ ಪ್ರದರ್ಶನ ನಡೆಯಿತು.