ಧಾರ್ಮಿಕ ಸಹಿಷ್ಣುತೆ ಕಲಿಸಿದ ಹಿಂದು ಧರ್ಮ: ಸರ್ವಜಯಾನಂದಜೀ ಮಹಾರಾಜ್ ಅಭಿಮತ

16
Published on

ಮೈಸೂರು: ಶಕ್ತಿ, ಧೈರ್ಯದ ಪ್ರತಿಬಿಂಬದ ವ್ಯಕ್ತಿತ್ವ ಹೊಂದಿದ್ದ ಸ್ವಾಮಿ ವಿವೇಕಾನಂದರ ಜೀವನ ಸಂದೇಶವನ್ನು ವಿದ್ಯಾರ್ಥಿಗಳು ಓದಬೇಕು ಎಂದು ರಾಮಕೃಷ್ಣ ಆಶ್ರಮದ ಸ್ವಾಮಿ ಸರ್ವಜಯಾನಂದಜೀ ಮಹಾರಾಜ್ ಹೇಳಿದರು.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ವತಿಯಿಂದ ನಗರದ ಗೋಪಾಲಸ್ವಾಮಿ ಶಿಶು ವಿಹಾರ ಶಿಕ್ಷಣ ಸಂಸ್ಥೆಯಲ್ಲಿ ಶುಕ್ರವಾರ ಆಯೋಜಿಸಿದ್ದ ವಿವೇಕ ಯಾನ ರಥಯಾತ್ರೆಗೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.
ಷಿಕಾಗೋದಲ್ಲಿ ವಿವೇಕಾನಂದರು ಮಾಡಿದ್ದ ಭಾಷಣ ಜಗತ್ತಿನ ಶಾಂತಿ ಸಾಮರಸ್ಯ ಕಾಪಾಡಲು ಸಾಕ್ಷಿಯಾಯಿತು. ಈ ಮೂಲಕ ಜಗತ್ತಿಗೆ ಸರ್ವಧರ್ಮ ಸಹಿಷ್ಣುತೆಯನ್ನು ಕಲಿಸಿದ್ದು ಹಿಂದು ಧರ್ಮ. ಇಂತಹ ಧೈರ್ಯ, ಶಕ್ತಿಯ ವ್ಯಕ್ತಿತ್ವ ಹೊಂದಿದ್ದ ಸ್ವಾಮಿ ವಿವೇಕಾನಂದರು ಎಲ್ಲರಿಗೂ ಆದರ್ಶ. ವಿದ್ಯಾರ್ಥಿಗಳು ಇಂತಹ ವ್ಯಕ್ತಿತ್ವದ ಜೀವನವನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು.
ಧರ್ಮ ಎಂದರೆ ಮನುಷ್ಯರಲ್ಲಿ ಪ್ರೇಮವನ್ನು ಬಿತ್ತಬೇಕು. ಆದರೆ ಇಂದು ಧರ್ಮದ ಹೆಸರಿನಲ್ಲಿ ಸಾಮರಸ್ಯವನ್ನು ಹಾಳು ಮಾಡುವ ಘಟನೆಗಳು ನಡೆಯುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ದೇಶಕ್ಕೆ ಸ್ವಾತಂತ್ರ್ಯ ಸಿಗುವಲ್ಲಿ ಸ್ವಾಮಿ ವಿವೇಕಾನಂದರ ಪಾಲಿದೆ. ಷಿಕಾಗೋದಿಂದ ಬಂದ ನಂತರ ದೇಶದಲ್ಲಿ ಸ್ವಾತಂತ್ರ್ಯ ಹೋರಾಟ ಕುರಿತು ಎಚ್ಚರಿಕೆ ಸಂದೇಶಗಳನ್ನು ಯುವಕರಿಗೆ ನೀಡಿದರು. ಇದರ ಫಲವಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಜೈಲು ಸೇರಿದ ಯುವಕರು ಸ್ವಾಮಿ ವಿವೇಕಾನಂದರ ಸಂದೇಶಗಳನ್ನು ಓದುತ್ತಿದ್ದರು ಎಂದರು.
ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಎಂಬ ಘೋಷಣೆಯ ಮೂಲಕ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳಲು ಪ್ರೇರೇಪಿಸಿದರು. ಸ್ವಾತಂತ್ರ್ಯಕ್ಕಾಗಿ ಜೀವನವನ್ನು ಸಮರ್ಪಿಸಿದರು. ಈಗ ನಾವು ಕೂಡ ದೇಶವನ್ನು ಮುನ್ನಡೆಸಲು ಸಂಕಲ್ಪಗಳನ್ನು ಮಾಡಬೇಕು. ವಿವೇಕಾನಂದರನ್ನು ಓದಿ ಅವರ ಆಶಯದಂತೆ ನಡೆಯಬೇಕು ಎಂದು ಸಲಹೆ ನೀಡಿದರು.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಪ್ರಾಂತ ಕಾರ್ಯದರ್ಶಿ ಎಚ್.ಕೆ.ಪ್ರವೀಣ್ ಮಾತನಾಡಿ, ವಿವೇಕಾನಂದರು ಭಾರತವನ್ನು ಕಟುವಾಗಿ ಟೀಕಿಸುತ್ತಲೇ ಹೊರ ದೇಶಗಳಿಗೆ ಹೋದಾಗ ಹಿಂದು ಧರ್ಮದ ಸಂಸ್ಕೃತಿ-ಪರಂಪರೆ-ವೈಭವವನ್ನು ಸಾರುತ್ತಿದ್ದರು ಎಂದರು.
ಇಂದು ನಮ್ಮ ಆಚರಣೆ, ಸಂಪ್ರದಾಯಗಳು ಕುಂಠಿತವಾಗುತ್ತಿವೆ. ಅಂದಿನ ಭಾರತವನ್ನು ಮರು ನಿರ್ಮಾಣ ಮಾಡುವ ಸಂಕಲ್ಪ ಮಾಡಬೇಕು. ಹಿಂದು ಧರ್ಮದ ಆಧ್ಯಾತ್ಮಿಕ ಶಕ್ತಿಯ ಚಿಂತನೆಯ ಮೂಲಕ ದೇಶವನ್ನು ಕಟ್ಟಲು ಸಾಧ್ಯವಿದೆ ಎಂದು ಹೇಳಿದರು.
ಗೋಪಾಲಸ್ವಾಮಿ ಶಿಶು ವಿಹಾರ ಶಿಕ್ಷಣ ಸಂಸ್ಥೆಯ ಸಂಯೋಜಕ ಕರೆಸ್ಪಾಂಡೆಂಟ್ ಎನ್.ಆರ್.ಮಂಜುನಾಥ್, ಪರಿಷತ್‌ನ ಸಿ.ಎನ್.ಐಶ್ವರ್ಯ, ವಿಭಾಗದ ಪ್ರಮುಖ ಡಾ.ಎಸ್.ಜಿ.ರಾಮದಾಸ್ ರೆಡ್ಡಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net