

ಶಿರಸಿ: ಹಿಂದಿನಿಂದಲೂ ಪ್ರತ್ಯೇಕತಾ ರಾಜಕಾರಣ ಮಾಡುತ್ತ ಬಂದಿರುವ ಕಾಂಗ್ರೆಸ್ ಈಗ ಮುಸ್ಲಿಮರನ್ನು ಓಲೈಸುತ್ತಿದೆ. ಅವರನ್ನು ಮುಖ್ಯವಾಹಿನಿಗೆ ತರುವ ಕಾರ್ಯ ಕಾಂಗ್ರೆಸ್‌ನಿಂದ ಆಗುತ್ತಿಲ್ಲ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಇಲ್ಲಿಯ ದೈವಜ್ಞ ಕಲ್ಯಾಣ ಮಂಟಪದಲ್ಲಿ ಚಾತುರ್ಮಾಸ್ಯದಲ್ಲಿರುವ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಸ್ವಾಮೀಜಿಯವರ ಆಶೀರ್ವಾದ ಪಡೆದು ಮಂಗಳವಾರ ಮಾಧ್ಯಮದೊಂದಿಗೆ ಮಾತನಾಡಿದರು. ದೇಶದಲ್ಲಿ ನಾವೆಲ್ಲ ಅಣ್ಣ ತಮ್ಮಂದಿರಂತೆ ಬದುಕಬೇಕಿತ್ತು. ಸ್ವಾತಂತ್ರ್ಯಾನಂತರ ಮುಸ್ಲಿಂ ಸಮುದಾಯದ ಜನರನ್ನು ಈ ದೇಶದ ಭಕ್ತರನ್ನಾಗಿ ಮಾಡಿ ಮುಖ್ಯವಾಹಿನಿಗೆ ತಂದು ಬೆಳೆಸಬೇಕಿತ್ತು. ಆದರೆ ಅಂದು ವೊಟಿಗಾಗಿ, ಅಧಿಕಾರಕ್ಕಾಗಿ ಮುಸ್ಲಿಂ ತುಷ್ಟೀಕರಣ ಮಾಡಿ ಅವರನ್ನೇ ಪ್ರತ್ಯೇಕವಾಗಿ ಇಡುವ ಪ್ರಯತ್ನ ಮಾಡಿದರು. ಇಂದಿಗೂ ಕಾಂಗ್ರೆಸ್ ಅದೇ ನಿಯಮವನ್ನು ಅಳವಡಿಸಿಕೊಂಡು ಬಂದಿದೆ. ವಕ್ಫ್ ಆಸ್ತಿ ದಾಖಲೀಕರಣ ಮಾಡಬೇಕು ಎಂದು ಕಾಯ್ದೆ ತರಲು ಕೇಂದ್ರ ಸರ್ಕಾರ ಮುಂದಾಗಿದ್ದರೂ ಅದಕ್ಕೆ ಕಾಂಗ್ರೆಸ್ ವಿರೋಧಿಸಿದೆ. ಈ ಹಿಂದೆ ಮಠ, ದೇವಸ್ಥಾನಗಳು ಹೊಂದಿದ್ದ ಸಾವಿರಾರು ಎಕರೆ ಜಮೀನನ್ನು ಭೂ ಸುಧಾರಣೆ ಹೆಸರಿನಲ್ಲಿ ಸರ್ಕಾರ ವಶಕ್ಕೆ ಪಡೆದಿದೆ. ಇದು ಕಾಂಗ್ರೆಸ್‌ನ ನೀತಿ. ಕಾಂಗ್ರೆಸ್‌ಗೆ ಹಿಂದು ಧರ್ಮ ನಗಣ್ಯ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಭ್ರಷ್ಟಾಚಾರ ನಡೆಸಿ ಈಗ ರಾಜ್ಯಪಾಲರನ್ನು ದೂರುತ್ತಿದ್ದಾರೆ. ರಾಜ್ಯಪಾಲರು ಕೇವಲ ತನಿಖೆಗೆ ಆದೇಶ ನೀಡಿದ್ದಾರೆ. ತನಿಖೆಯನ್ನೇ ಮಾಡಬಾರದು ಎಂದರೆ ಹೇಗೆ? ಎಂದು ಪ್ರಶ್ನಿಸಿದರು. ಡಿಕೆ ಶಿವಕುಮಾರ ತನ್ನನ್ನೂ ತನಿಖೆ ಮಾಡಬಾರದು ಎನ್ನುತ್ತಾರೆ. ಸಿದ್ದರಾಮಯ್ಯ ಮಾಡಿದ ಅಪರಾಧಕ್ಕೆ ತಕ್ಷಣ ಅಧಿಕಾರದಿಂದ ಇಳಿದು ನೈತಿಕತೆ ಪ್ರದರ್ಶಿಸಬೇಕು ಎಂದರು.
ಕಾಂಗ್ರೆಸ್ ಮುಖ್ಯಮಂತ್ರಿ ಸ್ಥಾನದ ಆಕಾಂಕಕ್ಷಿತರಲ್ಲಿ ದೇಶಪಾಂಡೆ ಒಬ್ಬರೇ ಅಲ್ಲ, ಬಹಳ ಜನರಿದ್ದಾರೆ. ಆದರೆ, ಈ ಸರ್ಕಾರವೇ ಉಳಿಯುವುದಿಲ್ಲ. ಹಿಂದೆ ನಮ್ಮ ಸರ್ಕಾರಕ್ಕೆ ಶೇ. ಶೇ. 40 ಕಮಿಷನ್ ಸರ್ಕಾರ ಎಂದು ಹೇಳುತ್ತ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಈಗ ಶೇ. 100 ರಷ್ಟು ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಆರೋಪಿಸಿದರು. ಗುರುಪ್ರಸಾದ ಹರ್ತೆಬೈಲ್ ಇತರರಿದ್ದರು.