ನೇತಾಜಿ, ವಿವೇಕಾನಂದರು ಸರ್ವಕಾಲಕ್ಕೂ ಸ್ಫೂರ್ತಿ: ಜಗದೀಶ್ ಕಾರಂತ್ ಅಭಿಮತ

7
Published on

ಬಂಟ್ವಾಳ: ಭಾರತದ ಸ್ವಾಭಿಮಾನವನ್ನು ಬಡಿದ್ದೆಬ್ಬಿಸಿದ ಸಿಡಿಲ ಸಂತ ಸ್ವಾಮಿ ವಿವೇಕಾನಂದ ಹಾಗೂ ಭಾರತ ಸ್ವಾತಂತ್ರ್ಯ ಸಂಗ್ರಾಮಕ್ಕೆ ಹೊಸ ಮುನ್ನುಡಿ ಬರೆದ ನೇತಾಜಿ ಸುಭಾಷ್‌ಚಂದ್ರ ಬೋಸ್ ಅವರಂತಹ ಮಹಾನ್ ವ್ಯಕ್ತಿಗಳು ಸರ್ವಕಾಲಕ್ಕೂ ಯುವ ಪೀಳಿಗೆಗೆ ಪ್ರೇರಣೆ ಮತ್ತು ಸ್ಫೂರ್ತಿಯಾಗಿದ್ದಾರೆ ಎಂದು ಹಿಂದು ಜಾಗರಣ ವೇದಿಕೆ ಕ್ಷೇತ್ರೀಯ ಸಂಯೋಜಕ ಜಗದೀಶ್ ಕಾರಂತ್ ಹೇಳಿದರು.

ಬಿ.ಸಿ.ರೋಡಿನ ಶ್ರೀರಕ್ತೇಶ್ವರೀ ದೇವಸ್ಥಾನದ ಮುಂಭಾಗದಲ್ಲಿ ಹಿಂದು ಜಾಗರಣ ವೇದಿಕೆ ಬಂಟ್ವಾಳ ತಾಲೂಕು, ಮಂಗಳೂರು ಗ್ರಾಮಾಂತರ ಜಿಲ್ಲೆಯ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದ ಮತ್ತು ನೇತಾಜಿ ಸುಭಾಷ್‌ಚಂದ್ರ ಬೋಸ್ ಜನ್ಮಜಯಂತಿ ಪ್ರಯುಕ್ತ ಭಾನುವಾರ ನಡೆದ ಹಿಂದು ಯುವ ಸಮಾವೇಶದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.

ಪೊಳಲಿ ಶ್ರೀ ರಾಮಕಷ್ಣ ತಪೋವನದ ಶ್ರೀ ವಿವೇಕ ಚೈತನ್ಯಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಭಿನ್ನಾಭಿಪ್ರಾಯ ಮರೆತು ಹಿಂದು ಸಮಾಜ ಸಂಟಿತರಾಗಬೇಕು. ಆ ಮೂಲಕ ಭಾರತವನ್ನು ವಿಶ್ವಗುರುವನ್ನಾಗಿಸುವ ನಿಟ್ಟಿನಲ್ಲಿ ಪಣತೊಡಬೇಕು. ಸನಾತನ ಹಿಂದು ಧರ್ಮಕ್ಕೆ ಆದಿಯೂ ಇಲ್ಲ, ಅಂತ್ಯವೂ ಇಲ್ಲ. ಹಿಂದು ಸಮಾಜ ಬಲಿಷ್ಠವಾದರೆ ಸದೃಢ ರಾಷ್ಟ್ರ ನಿರ್ಮಾಣ ಸಾಧ್ಯ ಎಂದರು.

ಮಂಗಳೂರು ಗ್ರಾಮಾಂತರ ಜಿಲ್ಲಾ ಸಂಯೋಜಕ ನರಸಿಂಹ ವಾಣಿ, ಪ್ರಾಂತ ಕಾರ್ಯಕಾರಿಣಿ ಸದಸ್ಯ ಪ್ರಶಾಂತ್ ಕೆಂಪುಗುಡ್ಡೆ, ಯುವ ಅಯಾಮ ಪ್ರಮುಖ್ ಪುಷ್ಪರಾಜ್ ಕವ್ಮಾಜೆ, ನ್ಯಾಯ ಜಾಗರಣ್ ಪ್ರಮುಖ್ ರಾಜೇಶ್ ಬೊಳ್ಳುಕಲ್ಲು ಇದ್ದರು.

ಹಿಂ.ಜಾ.ವೇ. ಬಂಟ್ವಾಳ ತಾಲೂಕು ಸಂಯೋಜಕ ಚಿದಾನಂದ ಕುಜಿಲಬೆಟ್ಟು ಸ್ವಾಗತಿಸಿದರು. ಸುರೇಶ್ ಎಸ್.ನಾವೂರು ನಿರೂಪಿಸಿದರು. ಕಿರಣ್ ವಂದಿಸಿದರು.

ಸವಾವೇಶಕ್ಕೆ ಮುನ್ನ ಬಿ.ಸಿ.ರೋಡ್ ಕೈಕಂಬ ಪೊಳಲಿ ದ್ವಾರದಿಂದ ಶ್ರೀರಕೇಶ್ವರೀ ದೇವಸ್ಥಾನದವರೆಗೆ ಶೋಭಾಯಾತ್ರೆ ನಡೆಯಿತು. ಕುಣಿತ ಭಜನೆ ಮೆರವಣಿಗೆಗೆ ವಿಶೇಷ ಮೆರುಗು ನೀಡಿತು.

ಸ್ವಾಮಿ ವಿವೇಕಾನಂದರು ಅಪ್ಪಟ ರಾಷ್ಟ್ರಭಕ್ತರಾಗಿದ್ದರು. ಧೈರ್ಯ, ಸಾಹಸ, ಪರಾಕ್ರಮ ಎಲ್ಲ ಸದ್ಗುಣಗಳನ್ನು ಮೈಗೂಡಿಸಿರುವ ಕ್ರಾಂತಿಕಾರಿ ಸುಭಾಶ್ಚಂದ್ರ ಬೋಸ್ ಬ್ರಿಟಿಷರ ವಿರುದ್ಧ ಸೇಡು ತೀರಿಸಲು ಸನ್ನದ್ಧರಾಗಿದ್ದರು. ಆದರೆ ಅಹಿಂಸಾ ತತ್ವದಡಿಯಲ್ಲಿ ಮಹಾತ್ಮ ಗಾಂಧಿ ಮತ್ತವರ ಬೆಂಬಲಿಗರು ಅಸಹಕಾರ ನೀಡಿದ್ದರಿಂದ ಇದು ಸಾಧ್ಯವಾಗಿಲ್ಲ. ಸುಭಾಶ್ಚಂದ್ರ ಬೋಸ್ ಇನ್ನೆರಡು ವರ್ಷ ಬದುಕುಳಿದಿದ್ದರೆ ದೇಶ ವಿಭಜನೆಯಾಗುತ್ತಿರಲಿಲ್ಲ, ಅಂದಿನ ನಮ್ಮ ನಾಯಕತ್ವದ ದೌರ್ಬಲ್ಯದಿಂದಾಗಿ ದೇಶ ವಿಭಜನೆಯಾಗುವಂತಾಯಿತು. ಜಗದೀಶ್ ಕಾರಂತ್, ಹಿಂದು ಜಾಗರಣ ವೇದಿಕೆ ಕ್ಷೇತ್ರೀಯ ಸಂಯೋಜಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net