

ಮಂಗಳೂರು: ದೇವಸ್ಥಾನ, ದೈವಸ್ಥಾನಗಳ ಜಾತ್ರೆ, ರಥೋತ್ಸವ ಸಹಿತ ಎಲ್ಲ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹಿಂದುಗಳಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ ನೀಡಬೇಕು. ಮೂರ್ತಿ ಪೂಜೆ ಒಪ್ಪದವರಿಗೆ ಅವಕಾಶ ನೀಡಬಾರದು ಎಂದು ಸನಾತನ ಹಿಂದು ಜಾತ್ರಾ ವ್ಯಾಪಾರಸ್ಥರ ಸಂಘ ಒತ್ತಾಯಿಸಿದೆ.
ಹಿಂದು ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅನಿಯಮ 1997ರ ತಿದ್ದುಪಡಿ ಅನಿಯಮ 2012ರ ಪ್ರಕಾರ ಧಾರ್ಮಿಕ ದತ್ತಿ ಇಲಾಖೆಗೆ ಸಂಬಂಸಿದ ದೇವಸ್ಥಾನದ ಸುತ್ತಲಿನ ಪ್ರದೇಶದಲ್ಲಿ ಹಿಂದುಗಳಲ್ಲದವರಿಗೆ ಅಂಗಡಿಗಳ ಗುತ್ತಿಗೆ ನೀಡುವಂತಿಲ್ಲ. ಈ ನಿಯಮದ ಪ್ರಕಾರ ದೇವಸ್ಥಾನ, ದೈವಸ್ಥಾನ, ಮಠ, ಮಂದಿರಗಳ ಜಾತ್ರೆಘ, ರಥೋತ್ಸವ ಮುಂತಾದ ಯಾವುದೇ ಧಾರ್ಮಿಕ ಕಾರ್ಯಕ್ರಮಗಳಲ್ಲಿ ವ್ಯಾಪಾರಕ್ಕೆ ಹಿಂದುಯೇತರರಿಗೆ ಅವಕಾಶ ನೀಡಬಾರದು. ಅವರು ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸದಂತೆ ನಿಯಮದ ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಡಳಿತವನ್ನು ವಿನಂತಿಸುತ್ತೇವೆ ಎಂದು ಸಂಘದ ಅಧ್ಯಕ್ಷ ಜಯರಾಮ ಶೆಟ್ಟಿಗಾರ್ ಕಲ್ಲಡ್ಕ ಅವರು ನಗರದ ಪತ್ರಿಕಾ ಭವನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಹಿಂದು ಜಾತ್ರಾ ವ್ಯಾಪಾರಸ್ಥರ ಸಂಘದ ಮೂಲಕ ಎಲ್ಲ ಸದಸ್ಯರಿಗೆ ಅನುಕೂಲವಾಗುವ ಬೆಲೆಯಲ್ಲಿ ಜಾಗ ಮಾಡಿಕೊಡಲಾಗುವುದು, ಜಾತ್ರೆ ವ್ಯಾಪಾರದಲ್ಲಿ ಹಿಂದುಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಹಿಂದುಗಳಿಗೆ ಅತಿ ಹೆಚ್ಚು ಜಾಗ ನೀಡಬೇಕು, ದೇವಸ್ಥಾನದ ರಶೀದಿ ಮೂಲಕ ನಿಗದಿತ ಮೊತ್ತ ಪಡೆದು ದೇವಸ್ಥಾನದ ಜಾಗಗಳನ್ನು ನೀಡಬೇಕು ಎಂದು ಅವರು ಆಗ್ರಹಿಸಿದರು.
ಜಾತ್ರೆ ಬಳಿಕ ಜಾತ್ರಾ ಸ್ಥಳದಲ್ಲಿ ಕಸ ತೆಗೆಯುವ ಕೆಲಸವನ್ನು ಸಂಘ ನಿರ್ವಹಿಸುವ ಬಗ್ಗೆ ಸಂಘದ ಸಭೆಯಲ್ಲಿ ನಿರ್ಣಯಿಸಲಾಗಿದೆ. ಕಲ್ಲಡ್ಕದ ಶ್ರೀರಾಮ ಮಂದಿರದಲ್ಲಿ ಕಳೆದ ಮಾಚ್ರ್ 15 ರಂದು ಸನಾತನ ಹಿಂದು ವ್ಯಾಪಾರಸ್ಥರ ಸಂಘ ಅಸ್ತಿತ್ವಕ್ಕೆ ಬಂದಿದ್ದು. ರಾಜ್ಯದ ವಿವಿಧೆಡೆಗಳಲ್ಲಿ ಇರುವ ಹಿಂದು ಮುಖಂಡರು ಬೆಂಬಲ ವ್ಯಕ್ತಪಡಿಸಿದ್ದಾರೆ.
ಸಂಘದ ಗೌರವಾಧ್ಯಕ್ಷ ರವೀಂದ್ರ ದಾಸ್, ಕಾರ್ಯದರ್ಶಿ ಸತೀಶ್ ಬಂಗೇರ, ವಕ್ತಾರ ಧನು ಕುಂಡಡ್ಕ ಉಪಸ್ಥಿತರಿದ್ದರು.