ಗೋವಾದಲ್ಲಿ 24ರಿಂದ ಹಿಂದು ಅಧಿವೇಶನ

IMG-20240619-WA0005-1.jpg
Published on

ಹುಬ್ಬಳ್ಳಿ: ಗೋವಾ ರಾಜ್ಯದ ಪೋಂಡಾದಲ್ಲಿ ಹಿಂದು ಜನ ಜಾಗೃತಿ ಸಮಿತಿ ವತಿಯಿಂದ ಅಖಿಲ ಭಾರತೀಯ ಹಿಂದು ರಾಷ್ಟ್ರ 12ನೇ ಅಧಿವೇಶನವನ್ನು ಜೂ. 24ರಿಂದ 30ರ ವರೆಗೆ ಏರ್ಪಡಿಸಲಾಗಿದೆ ಎಂದು ಸಮಿತಿ ರಾಜ್ಯ ವಕ್ತಾರ ಮೋಹನಗೌಡ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿವೇಶನವು ಏಳು ದಿನಗಳ ಕಾಲ ನಡೆಯಲಿದೆ. ಹಿಂದುಗಳ ಐಕ್ಯತೆ ಹಾಗೂ ಜಾಗೃತಿ ಬಗ್ಗೆ ಅಧಿವೇಶನದಲ್ಲಿ ಚರ್ಚೆ ನಡೆಸಲಾಗುವುದು. ದೇಶದ 26 ರಾಜ್ಯಗಳ ಒಂದು ಸಾವಿರ ಸಂಘಟನೆಗಳು ಹಾಗೂ ಎರಡು ಸಾವಿರ ಹಿಂದು ಕಾರ್ಯಕರ್ತರು ಭಾಗವಹಿಸುತ್ತಿದ್ದಾರೆ ಎಂದರು.

ದೇಶದಲ್ಲಿ ಪ್ರಸ್ತುತ ಜ್ವಲಂತ ಸಮಸ್ಯೆಗಳಾದ ಲವ್ ಜಿಹಾದ್, ಲ್ಯಾಂಡ್ ಜಿಹಾದ್, ಕಾಶಿ ಮಥರ್ ಮುಕ್ತಿ, ಕೋಟೆ ದುರ್ಗದ ಮೇಲಿನ ಅತಿಕ್ರಮಣ, ಮಂದಿರ ಸಂರಕ್ಷಣೆ, ಹಿಂದು ರಾಷ್ಟ್ರ ರಕ್ಷಣೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚಿಂತನ ಮಂಥನ ನಡೆಯಲಿದೆ.

ನ್ಯಾಯವಾದಿ ಹರಿಶಂಕರ ಜೈನ್, ವಿಷ್ಣು ಶಂಕರ ಜೈನ್, ಅಶ್ವಿನಿ ಉಪಾಧ್ಯಾಯ, ರಣಜಿತ ಸಾವರ್ಕರ, ಕಪಿಲ ಮಿಶ್ರಾ ಹಾಗೂ ಅನೇಕ ನ್ಯಾಯಾಧೀಶರು, ವಕೀಲರು, ಪತ್ರಕರ್ತರು, ಚಿಂತಕರು, ಹಿಂದು ಸಂಘಟನೆಗಳ ಮುಖ್ಯಸ್ಥರು ಪಾಲ್ಗೊಳ್ಳುವರು ಎಂದು ವಿವರಿಸಿದರು.

ದೇಶದ ಲೋಕಸಭೆ ಚುನಾವಣೆ ಮೊದಲು ಹೊರಬಂದ ಸಮೀಕ್ಷೆಯೊಂದರ ಅಂಶಗಳು ಆತಂಕ ಮೂಡಿಸುತ್ತಿವೆ. ಅದರಲ್ಲಿ ಹಿಂದುಗಳ ಜನಸಂಖ್ಯೆ ಶೇ. 8ರಷ್ಟು ಕಡಿಮೆಯಾಗಿದೆ. ಶೇ. 43.16ರಷ್ಟು ಮುಸ್ಲಿಂ ಜನಸಂಖ್ಯೆ ಹೆಚ್ಚಳವಾಗಿದೆ. ಇದಕ್ಕೆ ಮೂಲ ಕಾರಣ ಬಾಂಗ್ಲಾದೇಶಿಯರು.

ನುಸುಳುಕೋರರು ಭಾರತ ಪ್ರವೇಶ ಮಾಡಿದ್ದಲ್ಲದೇ ಮತದಾನ ಸಹ ಮಾಡುತ್ತಿದ್ದಾರೆ. ಇವರು ಸಹ ಪೌರತ್ವ ಪಡೆಯುತ್ತಿರುವುದು ದುರದೃಷ್ಟಕರ ಸಂಗತಿ ಎಂದರು.

ದೇಶವು ಅಪಾಯಕಾರಿ ಸ್ಥಿತಿಗೆ ತಲುಪುವ ಸಾಧ್ಯತೆ ಇದೆ. ಇಂತಹ ಅತಿಕ್ರಮಣದ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿ ನುಸುಳುಕೋರರಿಗೆ ಕಠಿಣ ಶಿಕ್ಷೆ ನೀಡಬೇಕು. ಕೇಂದ್ರ ಸರ್ಕಾರ ಸಿಸಿಆರ್ ಜಾರಿ ಹಾಗೂ ಜನಸಂಖ್ಯೆ ಕುರಿತು ಶ್ವೇತಪತ್ರ ಹೊರಡಿಸಬೇಕು ಎಂದು ಮೋಹನಗೌಡ ಅವರು ಆಗ್ರಹಿಸಿದರು.

ಸಂಘಟನೆಯ ವಿಲಾಸ ಕುಂಟೆ, ಅಶೋಕ ಭೋಜ, ಎಸ್ಎಸ್ಕೆ ಸಮಾಜದ ಭಾಸ್ಕರ್ ಜಿತೂರಿ ಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net