

ವಿಜಯವಾಣಿ ಸುದ್ದಿಜಾಲ ಗುರುಪುರ
ನೂರಾರು ಮತ, ಪಂಥ, ಸಂಸ್ಕೃತಿ ಒಳಗೊಂಡ ಧರ್ಮ ಸನಾತನ ಹಿಂದು ಧರ್ಮ. ಬೌದ್ಧರು, ಜೈನರು ಹಿಂದುಗಳೇ ಆಗಿದ್ದು, ಎಲ್ಲರೂ ಸೇರಿ ಸನಾತನ ಹಿಂದು ಧರ್ಮ ಶ್ರೇಷ್ಠವಾಗಿದೆ. ಆಧುನಿಕತೆ ಮತ್ತು ಪರಂಪರೆ ಒಗ್ಗೂಡಿಸುವ ಕೆಲಸ ವಿಶ್ವ ಹಿಂದು ಪರಿಷತ್ ಮಾಡುತ್ತಿದೆ ಎಂದು ಮೂಡುಬಿದಿರೆ ಜೈನ ಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಹೇಳಿದರು.
ಎಡಪದವು ಮಿಜಾರು ಶಾಸ್ತಾವು ಶ್ರೀ ಭೂತನಾಥೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ವಿಹಿಂಪ ಗುರುಪುರ ಪ್ರಖಂಡದ ವತಿಯಿಂದ ಭಾನುವಾರ ಷಷ್ಠಿಪೂರ್ತಿ ಸಮಾರೋಪ ಸಂಭ್ರಮದ ‘ಹಿಂದು ಸಂಗಮ’ದಲ್ಲಿ ಆಶೀರ್ವಚನ ನೀಡಿದರು.
ವಿಹಿಂಪ ಕರ್ನಾಟಕ ದಕ್ಷಿಣ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಮಾತನಾಡಿ, 1964ರಲ್ಲಿ ವಿಹಿಂಪ ಪ್ರಾರಂಭವಾದ ಬಳಿಕ ದೇಶದಲ್ಲಿ ಮಹತ್ತರವಾದ ಬದಲಾವಣೆಯಾಗಿದೆ. ಹಿಂದುಗಳು ಜಾಗೃತರಾಗುವಂತಾಗಿದೆ. ದೇಶದ ಪ್ರತಿ ಗ್ರಾಮದಲ್ಲೂ ಸಂಘಟನೆಯು ಹಿಂದು ಧರ್ಮದ ಬಗ್ಗೆ ಜಾಗೃತಿ ಮೂಡಿಸುತ್ತಿದೆ ಎಂದರು.
ವಿಹಿಂಪ ಗುರುಪುರ ಪ್ರಖಂಡದ ಅಧ್ಯಕ್ಷ ವಿಷ್ಣು ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಪ್ರೇಮಾ ವಿ.ಶೆಟ್ಟಿ ಮುಂಡಬೆಟ್ಟು ಮತ್ತು ಶಾಲಿನಿ ಬಿ. ಸೇಮಿತ ಮಿಜಾರು ಮುಂಡಬೆಟ್ಟು ಅವರನ್ನು ಸನ್ಮಾನಿಸಲಾಯಿತು.
ವಿಹಿಂಪ ಜಿಲ್ಲಾಧ್ಯಕ್ಷ ಎಚ್.ಕೆ.ಪುರುಷೋತ್ತಮ, ಸಂಜೀವ ನಲಿಕೆ ಬೈಲು ಕಂದಾವರ ಮೂಡುಕರೆ, ಕುಡುಬಿ ಸಮಾಜ ಬೆಳ್ಳಿಬೆಟ್ಟುಗುತ್ತು ಕೊಂಪದವು ಇದರ ಗುರಿಕಾರ ಅಪ್ಪು ಗೌಡ, ಬಜರಂಗ ದಳ ಕರ್ನಾಟಕ ದಕ್ಷಿಣ ಪ್ರಾಂತ ಸಹ ಸಂಚಾಲಕ ಭುಜಂಗ ಕುಲಾಲ್ ಆದ್ಯಪಾಡಿ ಉಪಸ್ಥಿತರಿದ್ದರು. ಗುರುಪುರ ಪ್ರಖಂಡದ ಕಾರ್ಯದರ್ಶಿ ದಿನೇಶ್ ಮಿಜಾರು ಸ್ವಾಗತಿಸಿದರು. ರವಿ ಸುವರ್ಣ ವಂದಿಸಿದರು.
ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕ ಡಾ.ಭರತ್ ಶೆಟ್ಟಿ, ಜಿಪಂ ಮಾಜಿ ಸದಸ್ಯ ಜನಾರ್ದನ ಗೌಡ, ವಿಹಿಂಪ ಪದಾಧಿಕಾರಿಗಳು, ಧಾರ್ಮಿಕ- ಸಾಮಾಜಿಕ ಮುಖಂಡರು, ಮಹಿಳೆಯರು ಸಹಿತ 2,000ಕ್ಕೂ ಅಧಿಕ ಕಾರ್ಯಕರ್ತರು ಭಾಗವಹಿಸಿದ್ದರು. ಕಾರ್ಯಕ್ರಮಕ್ಕೆ ಮುನ್ನ ಎಡಪದವಿನ ಶ್ರೀರಾಮ ಮಂದಿರದಿಂದ ಶಾಸ್ತಾವು ಸಭಾಂಗಣದವರೆಗೆ ಆಯೋಜಿಸಲಾದ ವಾಹನ ಜಾಥಾಕ್ಕೆ ಶಾಸಕ ಡಾ.ಭರತ್ ಶೆಟ್ಟಿ ಚಾಲನೆ ನೀಡಿದರು. ಶಾಸ್ತಾವು ದೇವಸ್ಥಾನದಲ್ಲಿ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು.