

ಹರಿಹರ: ತಾಲೂಕಿನ ಜೀವನಾಡಿ ತುಂಗಭದ್ರಾ ನದಿ ಮೈದುಂಬಿ ಹರಿಯುತ್ತಿದ್ದು, ಗುರುವಾರ ಮಳೆ ಕಡಿಮೆಯಾದರೂ ನದಿಯಲ್ಲಿ ನೀರಿನ ಪ್ರಮಾಣದಲ್ಲಿ ಕಡಿಮೆಯಾಗಿಲ್ಲ.
ನಗರದ ಗಂಗಾ ನಗರದ 7 ಮನೆಗಳು ನೀರಿನಿಂದ ಜಲಾವೃತಗೊಂಡಿದ್ದು, ಅವರನ್ನು ಕಾಳಜಿ ಕೇಂದ್ರಕ್ಕೆ ತೆರಳುವಂತೆ ತಾಲೂಕು ಆಡಳಿತ ಮನವಿ ಮಾಡಿಕೊಂಡರೂ ನಿವಾಸಿಗಳು ಗಂಗಾನಗರದ ತಮ್ಮ ಸಂಬಂಧಿಕರ ಮನೆಯಲ್ಲಿ ವಾಸ್ತವ್ಯ ಮಾಡಿದ್ದಾರೆ. ಶಾಶ್ವತ ಪರಿಹಾರ ಕಲ್ಪಿಸಬೇಕು ಎನ್ನುವುದು ಅವರ ಒತ್ತಾಯವಾಗಿದೆ.
ಹಿಂದು ರುದ್ರಭೂಮಿ ಜಲಾವೃತ: ನಗರದ ತುಂಗಭದ್ರಾ ನದಿಯ ದಡದ ಸುಮಾರು 3 ಎಕರೆ ಪ್ರದೇಶದಲ್ಲಿರುವ ಹಿಂದು ರುದ್ರಭೂಮಿ ನದಿಯ ನೀರಿನಿಂದ ಸಂಪೂರ್ಣ ಜಾಲಾವೃತವಾಗಿದೆ. ಇಂತಹ ಸಂದರ್ಭ ಯಾರಾದರೂ ಸಾವನ್ನಪ್ಪಿದರೆ ಶವಸಂಸ್ಕಾರಕ್ಕೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಎಸಿ ಭೇಟಿ: ಜಲಾವೃತಗೊಂಡ ಪ್ರದೇಶಗಳಾದ ಗಂಗಾನಗರ, ಹಿಂದು ರುದ್ರಭೂಮಿ, ಗುತ್ತೂರು ಗ್ರಾಮದ ರುದ್ರಭೂಮಿಗೆ ಉಪವಿಭಾಗಧಿಕಾರಿ ಸಂತೋಷ್ ಕುಮಾರ್ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.
ಸಾರ್ವಜನಿಕರ ದಂಡು: ರಾಘವೇಂದ್ರ ಮಠದ ಹಿಂಭಾಗ ತುಂಗಾಭದ್ರಾ ಆರತಿ ಮಂಟಪವು ಸಂಪೂರ್ಣ ಜಲಾವೃತಗೊಂಡಿದ್ದು, ಮೈದುಂಬಿ ಹರಿಯುತ್ತಿರುವ ತುಂಗಭದ್ರಾ ನದಿ ಜನರು ಕುಟುಂಬ ಸಮೇತವಾಗಿ ಆಗಮಿಸುತ್ತಿದ್ದಾರೆ.