

ಮಂಗಳೂರು: ಹಿಂದೂ ರಾಷ್ಟ್ರ ಸ್ಥಾಪನೆಗೆ ಸಂಘಟನೆಗಳು ತಮ್ಮ ಹೆಸರನ್ನು ಬದಿಗಿಟ್ಟು ಒಗ್ಗಟ್ಟಾಗಿ ಹಿಂದುತ್ವಕ್ಕಾಗಿ ಹೋರಾಟ ನಡೆಸಬೇಕಾಗಿದೆ. ಸಂಘಟನೆಗಳು ಹಿಂದೂ ಸಾಮಾಜದ ಶಕ್ತಿಯಾಗಬೇಕು. ಎಲ್ಲ ಹಿಂದು ಸಂಘಟನೆಗಳು ಈ ನಿಟ್ಟಿನಲ್ಲಿ ಸಂಕಲ್ಪ ಮಾಡಬೇಕು ಎಂದು ಸಾಮಾಜಿಕ ಹೋರಾಟಗಾರ ದಿನೇಶ್ ಕುಮಾರ್ ಜೈನ್ ಹೇಳಿದರು.
ಕದ್ರಿ ಮೈದಾನದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಭಾನುವಾರ ಹಿಂದೂ ರಾಷ್ಟ್ರ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು. ನೂರಾರು ಜಾತಿ, ಜಾತಿಗೊಂದು ಸ್ವಾಮೀಜಿ, ಮಠ, ಜಾತಿಗೊಂದು ಶಾಸಕರನ್ನು ಕೇಳುವ ತನಕ ಮುಂದುವರಿದಿದೆ. ಜಾತಿ ಮನೆಯ ಧಾರ್ಮಿಕ ಆಚರಣೆಗೆ ಸೀಮಿತವಾಗಬೇಕು. ಸರ್ಕಾರದ ಸವಲತ್ತು ಪಡೆಯಲು ಜಾತಿ ಇಟ್ಟುಕೊಳ್ಳಿ. ಜಾತಿ ಸಂಘಟನೆಯ ಹೆಸರಲ್ಲಿ ಹಿಂದುತ್ವವನ್ನು ವಿಘಟನೆ ಸಲ್ಲದು. ಜಾತಿಯನ್ನು ಮೀರಿ ಹಿಂದುತ್ವದ ಹೆಸರಿನಲ್ಲಿ ಒಗ್ಗಟ್ಟಾಗಿ ನಿಲ್ಲಬೇಕಿದೆ ಎಂದರು.
ಜಾತಿ, ಭಾಷೆ, ಸಂಸ್ಕೃತಿಯ ಹೆಸರಿನಲ್ಲಿ ನಾವು ಬೇರೆಯಾದರೆ ಮತಾಂಧ ಶಕ್ತಿಗಳಿಗೆ ಬಲಿಯಾಗುವ ಸಾಧ್ಯತೆ ಇದೆ. ಪಾಶ್ಚಾತ್ಯ ಸಂಸ್ಕೃತಿ ಬಿಟ್ಟು, ಮೂಲ ಸಂಸ್ಕೃತಿ ಅಳವಡಿಸಿಕೊಳ್ಳಬೇಕಾಗಿದೆ. ಜನಜಾಗೃತಿ ಧರ್ಮ ಶಿಕ್ಷಣ ಕೊಡುವ ಕೆಲಸ ಮಾಡುತ್ತಿದೆ. ಅದರ ಸದುಪಯೋಗ ಹಿಂದು ಮಕ್ಕಳಿಗೆ ಸಿಗುವಂತಾಗಬೇಕು ಎಂದರು.
ನಮ್ಮ ನಡುವೆ ಭಯೋತ್ಪಾದಕರಿದ್ದಾರೆ. ನಾವು ಸಮಾಜದಲ್ಲಿ ಸೂಕ್ಷ್ಮ ವಿಚಾರಗಳತ್ತ ಗಮನ ವಹಿಸಬೇಕು. ಅನುಮಾನಾಸ್ಪದ ವ್ಯಕ್ತಿಗಳ ಚಲನವಲನಗಳ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಬೇಕಾಗಿದೆ. ಹಿಂದೂ ಸಮಾಜ ಶಾಂತಿಯಿಂದ ಇದೆ. ನಮ್ಮನ್ನು ಕೆಣಕಿದರೆ ಕ್ರಾಂತಿಯಾಗುವುದು ನಿಶ್ಚಿತ ಎಂದರು.
3,4ನೇ ತರಗತಿ ಓದಿ ಗುಜರಿ ಹೆಕ್ಕುವ ನೀವು ನಮಗೆ ಸಂವಿಧಾನದ ಪಾಠ ಮಾಡಲು ಹೊರಟಿದ್ದೀರಾ? ನಾವು ಸಂವಿಧಾನಬದ್ಧವಾಗಿ ಹಿಂದೂ ರಾಷ್ಟ್ರ ಕೇಳುತ್ತಿದ್ದೇವೆ. ನಿಮ್ಮ ಗುಣ ತಿದ್ದಿಕೊಳ್ಳದಿದ್ದರೆ ಭವಿಷ್ಯದ ಹಿಂದೂ ರಾಷ್ಟ್ರದಲ್ಲಿ ನಿಮಗೆ ಉತ್ತರ ನೀಡಲು ಹಿಂದೂ ಸಮಾಜ ಬದ್ಧವಾಗಿದೆ ಎಂದರು.
ಹೈಕೋರ್ಟ್ ವಕೀಲ ಅಮೃತೇಶ್ ಎನ್.ಪಿ. ಮಾತನಾಡಿ, ಪ್ರಸ್ತುತ ಸಿಮಿ, ಪಿಎಫ್‌ಐ ಸಂಘಟನೆಗಳು ನಿಷೇಧವಾಗಿದ್ದರೂ ಅದರಲ್ಲಿದ್ದವರು ಇನ್ನೊಂದು ರೀತಿ ಹುಟ್ಟಿಕೊಂಡಿದ್ದಾರೆ. ತಿರುಗಿ ಉತ್ತರ ನೀಡಲು ಶುರು ಮಾಡಿದರೆ ನೀವೆಲ್ಲರೂ ಓಡಿಹೋಗಬೇಕು. ಹಿಂದುತ್ವದ ಹೆಸರಿನಲ್ಲಿ ಅಧಿಕಾರ ಪಡೆದವರು ಅನ್ಯಧರ್ಮೀಯರನ್ನೂ ಸೇರಿ ನಾವು ಒಟ್ಟೊಟ್ಟಿಗೇ ಹೋಗೋಣ ಎನ್ನುತ್ತಾರೆ, ಇವರಿಂದ ಹಿಂದೂ ರಾಷ್ಟ್ರ ನಿರೀಕ್ಷೆ ಸಾಧ್ಯವೇ ಎಂದು ಪ್ರಶ್ನಿಸಿದರು.
ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕ ಗುರುಪ್ರಸಾದ ಗೌಡ ಹಾಗೂ ಸನಾತನ ಸಂಸ್ಥೆಯ ಲಕ್ಷ್ಮೀ ಪೈ ಅತಿಥಿಗಳಾಗಿದ್ದರು.
ಸನಾತನ ಸಂಸ್ಥೆಯ ಸಂತರಾದ ರಮಾನಂದ ಗೌಡ, ವಿನಾಯಕ ಕರ್ವೆ ಹಾಗೂ ರಾಧಾ ಪ್ರಭು ಹಾಗೂ ಬಾಲಸಂತರಾದ ಭಾರ್ಗವರಾಮ ಉಪಸ್ಥಿತರಿದ್ದರು.