

ಬೆಂಗಳೂರು: ಹಿಂದೂ ರಾಷ್ಟ್ರ ಪ್ರತಿ ಹಿಂದೂವಿನ ಸಂವಿಧಾನ ಬದ್ಧ ಅಧಿಕಾರ ಮತ್ತು ಅದನ್ನು ಪಡೆಯಲು ಪ್ರತಿಯೊಬ್ಬ ಹಿಂದೂ ಕೂಡ ಸಂಘಟಿತಗೊಳ್ಳಬೇಕು ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕರೆ ನೀಡಿದ್ದಾರೆ. ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ನಡೆದ ಹಿಂದೂ ರಾಷ್ಟ್ರಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು. ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ್ದ ಈ ಸಭೆ ಅಭೂತಪೂರ್ವವಾಗಿ ನಡೆದಿದ್ದು, ಆನ್ಲೈನ್ ಮೂಲಕ 20 ಸಾವಿರ ಜನರು ವೀಕ್ಷಣೆ ಮಾಡಿದ್ದಾರೆ.
ದೆಹಲಿಯಲ್ಲಿ ರೈತರ ಪ್ರತಿಭಟನೆ ಹೆಸರಿನಲ್ಲಿ ದೇಶವಿರೋಧಿ ಕೃತ್ಯ ನಡೆಯುತ್ತಿದೆ. ಹಿಂದೂ ಕಾರ್ಯಕರ್ತರ ಬರ್ಬರ ಹತ್ಯೆ ನಡೆಯುತ್ತಿದೆ. ಹಿಂದೂಗಳ ಮೇಲೆ ವಿವಿಧ ಮಾಧ್ಯಮಗಳಿಂದ ಆಘಾತ ಎದುರಾಗುತ್ತಿದೆ. ವೆಬ್ ಸೀರೀಸ್ ಮೂಲಕ ಹಿಂದೂ ದೇವತೆಗಳ ಅಪಮಾನ ನಡೆಯುತ್ತಿದೆ. ಇದನ್ನು ತಡೆಯಲು ಸಮಸ್ತ ಹಿಂದೂಗಳು ಸಂಘಟಿತರಾಗಬೇಕು ಎಂದು ಅವರು ಹೇಳಿದರು.
ಇಂದು ದೇಶದಲ್ಲಿ ಭಯೋತ್ಪಾದನೆ, ಲವ್ ಜಿಹಾದ್, ಮತಾಂತರ, ಗೋಹತ್ಯೆ, ಹಿಂದೂ ದೇವತೆಗಳ ಅಪಮಾನ ಮಿತಿಮೀರಿ ನಡೆಯುತ್ತಿದೆ. ಹಲವು ರಾಜ್ಯಗಳಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗುತ್ತಿದ್ದಾರೆ. ಭವ್ಯ ಶ್ರೀರಾಮ ಮಂದಿರ ನಿರ್ಮಾಣದ ಜತೆ ಹಿಂದೂ ರಾಷ್ಟ್ರ ಸ್ಥಾಪನೆ ಸಹ ಮುಂದಿನ ದಿನಗಳಲ್ಲಿ ಹಿಂದೂ ಜನಜಾಗೃತಿ ಸಮಿತಿಯಂಥ ಸಂಘಟನೆಗಳ ಪ್ರಯತ್ನದಿಂದ ನಡೆಯಲಿದೆ. ಹಿಂದೂ ಜನಜಾಗೃತಿ ಸಮಿತಿಯು ಹಿಂದೂ ರಾಷ್ಟ್ರದ ಬಗ್ಗೆ ಅತ್ಯಂತ ಸ್ಪಷ್ಟ ದೂರದೃಷ್ಟಿ ವಿಚಾರ, ಅದಕ್ಕೆ ಧರ್ಮ ಶಿಕ್ಷಣದ ಅಡಿಪಾಯ ಮತ್ತು ಧರ್ಮ ಪ್ರಸಾರದ ಮೂಲಕ ಕಾರ್ಯ ಮಾಡುತ್ತಿದೆ. ಅದಕ್ಕಾಗಿ ಸಮಸ್ತ ಹಿಂದೂಗಳು ಸಹ ಹಿಂದೂ ಜನಜಾಗೃತಿ ಸಮಿತಿಯ ಹಿಂದೂ ರಾಷ್ಟ್ರದ ಕಾರ್ಯದಲ್ಲಿ ಭಾಗಿಯಾಗಬೇಕು ಎಂಬ ನಿಲುವನ್ನು ಸಭೆಯಲ್ಲಿ ತಳೆಯಲಾಯಿತು.
ಧರ್ಮ ಶಿಕ್ಷಣ, ಧರ್ಮ ಜಾಗೃತಿ ಮೂಲಕ ಹಿಂದೂಗಳ ಸಂಘಟನೆ ಮಾಡಿ ಹಿಂದೂ ರಾಷ್ಟ್ರ ಸ್ಥಾಪನೆ ಮಾಡಬೇಕು ಎಂದು ಸನಾತನ ಸಂಸ್ಥೆಯ ರಮಾನಂದ ಗೌಡ ಹೇಳಿದರು. ದೇಶದಲ್ಲಿ ರಾಷ್ಟ್ರವಿರೋಧಿ ಷಡ್ಯಂತ್ರ ನಡೆಯುತ್ತಿದೆ. ಅದರ ವಿರುದ್ಧ ಹಿಂದೂಗಳು ಸಂಘಟಿತರಾಗಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕರಾದ ಗುರುಪ್ರಸಾದ ಗೌಡ ಹೇಳಿದರು.
ಸಭೆಯ ಮುಖ್ಯ ವಕ್ತಾರರಾಗಿ ಪ್ರಮೋದ್ ಮುತಾಲಿಕ್, ಸನಾತನ ಸಂಸ್ಥೆಯ ಧರ್ಮಪ್ರಚಾರಕ ರಮಾನಂದ ಗೌಡ, ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕ ಗುರುಪ್ರಸಾದ ಗೌಡ ಉಪಸ್ಥಿತರಿದ್ದರು.
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ