

ಕೆ.ಆರ್.ಪೇಟೆ : ದೇಶದಲ್ಲಿ ಧರ್ಮ ಧರ್ಮದ ನಡುವೆ ಸಂಘರ್ಷ ನಡೆಯುವ ಘಟನೆ ನಡೆಯುತ್ತಿವೆ. ರಾಜ್ಯದಲ್ಲಿ ಕೂಡ ಹಲವು ವಿಷಯಗಳ ನಡುವೆ ಧರ್ಮ ದಂಗಲ್ ನಡೆಯುತ್ತಿದೆ. ಇತ್ತೀಚೆಗೆ ನಾಗಮಂಗಲದಲ್ಲಿ ಗಣೇಶ ನ ಮೆರವಣಿಗೆ ವಿಚಾರಕ್ಕೆ ಧರ್ಮದ ಕಿಚ್ಚು ಹೊತ್ತಿ ಉರಿಯುತ್ತಿದ್ದು ಇನ್ನೂ ಹಾರಿಲ್ಲ. ಗಣೇಶ ಮೂರ್ತಿ ಪ್ರತಿಷ್ಠಾಪನೆ ವಿಷಯವೇ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಆದರೆ ಈ ಪಟ್ಟಣದಲ್ಲಿ ಮುಸ್ಲಿಂ ಕುಟುಂಬಗಳು ಹಿಂದು ಧರ್ಮದವರು ಪ್ರತಿಷ್ಠಾಪಿಸಿದ್ದ ಗಣೇಶನಿಗೆ ಮುಸ್ಲಿಂ ಧರ್ಮದ ಕುಟುಂಬದವರು ಸಾಮೂಹಿಕವಾಗಿ ಪೂಜೆ ಸಲ್ಲಿಸಿ ಅನ್ನಸಂತರ್ಪಣೆ ಆಯೋಜಿಸುವ ಮೂಲಕ ನಾವೆಲ್ಲ ಒಂದೇ ಎಂಬ ಸಂದೇಶ ಸಾರಿದ್ದಾರೆ.
ಪಟ್ಟಣದ ಅಗ್ರಹಾರ ಬಡಾವಣೆ ಪಂಚಮುಖಿ ರಸ್ತೆ ಬಳಿ ಕನಕ-ಬೆನಕ ಯುವಕರ ಬಳಗದಿಂದ ಪ್ರತಿಷ್ಠಾಪಿಸಿರುವ ಗಣೇಶನಿಗೆ ಮುಸ್ಲಿಂ ಧರ್ಮದ ಯುವ ಮುಖಂಡ ಜಬಿ ಉಲ್ಲಾ ಖಾನ್ ನೇತೃತ್ವದಲ್ಲಿ ಭಕ್ತಿರಿಗೆ ಅನ್ನಸಂತರ್ಪಣೆ ಮಾಡಲಾಯಿತು. ಪಟ್ಟಣದಲ್ಲಿ ಹಿಂದು-ಮುಸ್ಲಿಂ ಧರ್ಮದವರು ಜತೆಯಾಗಿ ಬಾಳುತ್ತಿರುವುದಾಗಿ ಸಂದೇಶ ಸಾರಿದರು. ತಾಲೂಕಿನ ಸಮಸ್ತ ಜನತೆಗೆ ಒಳಿತಾಗಲಿ ಎಂದು ಪ್ರಾರ್ಥಿಸಿದರು. ನೂರಾರು ಭಕ್ತರು ಪೂಜೆಯಲ್ಲಿ ಪಾಲ್ಗೊಂಡಿದ್ದರು.
ಮುಸ್ಲಿಂ ಸಮುದಾಯದಿಂದ ಭಕ್ತಿರಿಗೆ ಹೊಳಿಗೆ ಊಟ ಆಯೋಜಿಸಲಾಗಿತ್ತು. ಮಸಾಲೆ ದೋಸೆ, ಹಲವು ಖಾದ್ಯಗಳನ್ನು ಮಾಡಿಸಲಾಗಿತ್ತು. ಶಾಸಕ ಎಚ್.ಟಿ.ಮಂಜು, ಸಮಾಜ ಸೇವಕ ಮಲ್ಲಿಕಾರ್ಜುನ್, ಮನ್ಮುಲ್ ನಿರ್ದೇಶಕ ಡಾಲು ರವಿ, ಕಾಂಗ್ರೆಸ್ ಯುವ ಮುಖಂಡ ದೇವರಹಳ್ಳಿ ಮಹೇಂದ್ರ, ಪಟ್ಟಣ ಠಾಣೆಯ ಉಪ ನಿರೀಕ್ಷಕ ನವೀನ್ ಸೇರಿ ಹಲವರು ಪೂಜೆಯಲ್ಲಿ ಪಾಲ್ಗೊಂಡಿದ್ದರು.
ಪೂಜೆಯಲ್ಲಿ ಸಯ್ಯದ್ ಫೈಜಲ್, ಇರ್ಫಾನ್, ಮುನ್ನಾ, ಲಿಯಾ ಖಾನ್, ಸಬ್ರಿನ್ ತಾಜ್, ಉಖ್ಸಾನ್, ಸಿಂಬ್ರಾನ್, ಸಲ್ಮಾ ಸೇರಿ ಹಲವರು ಪಾಲ್ಗೊಂಡಿದ್ದರು.