ಒಂದೇ ವೇದಿಕೆಯಲ್ಲಿ ಹಿಂದು&ಮುಸ್ಲಿಂ ವಿವಾಹ!

FotoJet
Published on

ಮುಳಬಾಗಿಲು: ಹಿಂದು&ಮುಸ್ಲಿಂ ಪ್ರತ್ಯೇಕದ ಬಗ್ಗೆ ರಾಜ್ಯದ ಕೆಲವು ಕಡೆ ಭಿನ್ನ ಧ್ವನಿಗಳು ಮೊಳಗುತ್ತಿರುವ ಕಾಲಘಟ್ಟದಲ್ಲಿ ಮುಳಬಾಗಿಲು ತಾಲೂಕಿನ ನಂಗಲಿಯಲ್ಲಿ ಭಾನುವಾರ ಒಂದೇ ವೇದಿಕೆಯಲ್ಲಿ ಹಿಂದು ಹಾಗೂ ಮುಸ್ಲಿಂ ಧರ್ಮಗಳ ಸಾಮೂಹಿಕ ವಿವಾಹಗಳು ಸಾಮರಸ್ಯಕ್ಕೆ ಬೆಸುಗೆ ಹಾಕಿದೆ.

ನಂಗಲಿಯ ನವ ಜವಾನ್​ ಕಮಿಟಿ ಹಾಗೂ ನಂಗಲಿ ಯುವಕರ ಕಮಿಟಿಯಿಂದ ಒಂದೇ ವೇದಿಕೆಯಲ್ಲಿ ಮೂರು ಜೋಡಿ ಹಿಂದು, ಮುಸ್ಲಿಂ ಎರಡು ಜೋಡಿಗಳು ಮದುವೆಯಾದರು. ತಾಲೂಕಿನ ತಾಯಲೂರು, ಸೀಗೇಹೊಸಹಳ್ಳಿ ಹಾಗೂ ಮುಳಬಾಗಿಲು ನಗರದ ಮೂರು ಜೋಡಿಗಳು ಹಿಂದು ಧರ್ಮದವರಾದರೆ, ನಂಗಲಿಯ ಒಂದು ಹಾಗೂ ಮುಳಬಾಗಿಲು ನಗರದ ಒಂದು ಜೋಡಿ ಮುಸ್ಲಿಂ ಧರ್ಮದಿಂದ ನೂತನ ಜೀವನಕ್ಕೆ ಕಾಲಿಟ್ಟರು. ಎರಡು ಧರ್ಮಗಳ ಸಂಪ್ರದಾಯ, ಆಚರಣೆಗಳು ಒಂದೇ ವೇದಿಕೆಯಲ್ಲಿ ನಡೆದದ್ದು ಸೌಹಾರ್ದಕ್ಕೆ ಸಾಯಾಯಿತು.

ನಂಗಲಿಯ ನವ ಜವಾನ್​ ಸಮಿತಿ 4 ವರ್ಷದಿಂದ ಈದ್​ ಮಿಲಾದ್​ ಹಬ್ಬದ ಎರಡನೆಯ ದಿನ ಹಿಂದು ವಧು -ವರರು ಮತ್ತು ಮುಸ್ಲಿಂ ಜೋಡಿಗಳ ಸಾಮೂಹಿಕ ವಿವಾಹವನ್ನು 3 ವರ್ಷಗಳಿಂದ ಆಚರಿಸಿಕೊಂಡು ಬರುತ್ತಿದ್ದು, 4ನೇ ವರ್ಷವೂ ಧರ್ಮ ಸಹಿಷ್ಣುತೆಗೆ ಮಾದರಿಯಾಯಿತು.

ಹಿಂದು ಧರ್ಮದ ಅರ್ಚಕರು ಮಂತ್ರಗಳನ್ನು ಹೇಳುತ್ತಾ ಶಾಸ್ತ್ರಗಳನ್ನು ಪೂರೈಸಿ ಮದುವೆ ಮಾಡಿಸಿದರೆ, ಮುಸ್ಲಿಂ ಧರ್ಮಪಾಲಕರು ಮುಸ್ಲಿಂ ಸಂಪ್ರದಾಯದಂತೆ ನಿಖಾ ಕಾರ್ಯಕ್ರಮ ಪೂರೈಸಿದರು. ನಂತರ ನವ ಜೋಡಿಗಳಿಗೆ ನವ ಜವಾನ್​ ಸಮಿತಿಯಿಂದ ಬಂಗಾರದ ಮಾಂಗಲ್ಯ, ಮೂಗುತಿ, ಓಲೆ ಹಾಗೂ ಮಂಚ, ಬೀರು, ಹಾಸಿಗೆ, ಪಾತ್ರೆ ಮತ್ತಿತರ ಸಾಮಗ್ರಿಗಳನ್ನು ಉಚಿತವಾಗಿ ಜೋಡಿಗಳಿಗೆ ವಿತರಿಸಲಾಯಿತು.

ಅಕ್ಮಲ್​ ಬೇಗ್​, ಎನ್​.ಸಿ ಶ್ರೀಧರ್​, ಸತೀಶ್​ ಕುಮಾರ್​, ಹುಸೇನ್​, ನಿರಂಜನ್​, ಕೆ.ತ್ಯಾಗರಾಜ್​ ಹಾಗೂ ನವ ಜವಾನ್​ ಸಮಿತಿಯ ಯುವಕರು ಇದ್ದರು.

ಭಾರತ ಸರ್ವಧರ್ಮ ಸಮನ್ವಯ ದೇಶವಾಗಿದ್ದು, ಕುವೆಂಪು ಅವರ ವಿಶ್ವ ಮಾನವ ಸಂದೇಶಕ್ಕೆ ಒಂದೇ ವೇದಿಕೆಯಲ್ಲಿ ನಡೆದ ಹಿಂದು ಮುಸ್ಲಿಂ ವಿವಾಹಗಳು ಆದರ್ಶವಾಗಿದ್ದು, ಎಲ್ಲರೂ ಸಹೋದರರಂತೆ ಬದುಕಬೇಕು.

- ಎನ್​.ಸಿ.ಶ್ರೀಧರ್​

ಅಧ್ಯಕ್ಷ, ನಂಗಲಿ ಗ್ರಾಪಂ, ಮುಳಬಾಗಿಲು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net