

ಮೈಸೂರು: ಶೂದ್ರರನ್ನು ಹಿಂದು ಧರ್ಮ ಅವಹೇಳನ ಮಾಡಿದ್ದು, ನಿಮಗೆ ಮಾನ ಮರ್ಯಾದೆ ಇದ್ದರೆ ಮೊದಲು ದೇವಸ್ಥಾನಕ್ಕೆ ಹೋಗುವು ದನ್ನು ನಿಲ್ಲಿಸಬೇಕು ಎಂದು ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್. ಭಗವಾನ್ ಕರೆ ನೀಡಿದ್ದಾರೆ.
ನಗರದ ಪುರಭವ ಆವರಣದಲ್ಲಿ ಮಹಿಷ ದಸರಾ ಆಚರಣಾ ಸಮಿತಿ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಮಹಿಷ ಮಂಡಲೋತ್ಸವ (ಮಹಿಷ ದಸರಾ) ಕಾರ್ಯಕ್ರಮದಲ್ಲಿ ಮಾತನಾಡಿ, ಹಿಂದು ಧರ್ಮ ಅಂದರೆ ಅದು ಹಿಂದುಗಳ ಧರ್ಮ ಅಂತ ಅರ್ಥ ಅಲ್ಲ, ಹಿಂದು ಧರ್ಮ ಅಂದರೆ ಅದು ಬ್ರಾಹ್ಮಣರ ಧರ್ಮ. ಹಾಗಾಗಿ ಹಿಂದು ಅಂದರೆ ಹಿಂದಕ್ಕೆ ಹೋಗುವ ಜನ, ಮುಂದಕ್ಕೆ ಬರುವುದಿಲ್ಲ. ಮುಂದಕ್ಕೆ ಬರಲು ಅವರು ನಿಮ್ಮನ್ನು ಬಿಡುವುದೂ ಇಲ್ಲ ಎಂದರು.
ಬ್ರಾಹ್ಮಣ ಸಮುದಾಯದಲ್ಲಿ ಗಂಡಸರು ಮಾತ್ರ ಬ್ರಾಹ್ಮಣರು, ಹೆಂಗಸರು ಶೂದ್ರರು. ದೇವಸ್ಥಾನ ಕಟ್ಟುವವರು ಶೂದ್ರರು. ಆದರೆ, ಪೂಜೆ ಮಾಡುವವರು ಮಾತ್ರ ಬ್ರಾಹ್ಮಣರು. ಹಾಗಾಗಿ ಶೂದ್ರರು ದೇವಸ್ಥಾನಕ್ಕೆ ಹೋಗುವುದನ್ನು ನಿಲ್ಲಿಸಬೇಕು. ನಾನು ದೇವಸ್ಥಾನಕ್ಕೆ ಹೋಗುವುದು ನಿಲ್ಲಿಸಿ 50 ವರ್ಷ ಆಯಿತು. ದೇವಸ್ಥಾನಕ್ಕೆ ಹೋಗದೆ ಇದ್ದರೆ ಯಾವ ದೇವರು ಏನು ಮಾಡುವುದಿಲ್ಲ. ನೀವು ಹೋಗಿ ತಟ್ಟೆಗೆ ಕಾಸು ಹಾಕಿ ಹಣ ಕಳೆದುಕೊಳ್ಳುತ್ತೀರಿ ಅಷ್ಟೆ. ನೀವು ಕೊಡುವ ತೆಂಗಿನ ಕಾಯಿಯ ಅರ್ಧ ಭಾಗ ಅವರು ಇಟ್ಟುಕೊಳ್ಳುತ್ತಾರೆ. ದೇವಸ್ಥಾನಕ್ಕೆ ಹೋಗಿ ನೀವು ನಷ್ಟ ಮಾಡಿಕೊಳ್ಳುತ್ತೀರ ಎಂದು ಹೇಳಿದರು.
ಮನುಸ್ಮತಿಯಲ್ಲಿ ಶೂದ್ರರು ಅಂದರೆ ಸೂಳೆಗೆ ಹುಟ್ಟಿದವನು ಎಂಬ ಅರ್ಥವಿದೆ. ಹಾಗಾಗಿ ಇಂತಹ ಧರ್ಮವನ್ನು ನಾವು ಒಪ್ಪಿಕೊ ಳ್ಳಬೇಕಾ. ಹಿಂದು ಧರ್ಮ ನಮಗೆ ಬೇಕಾಗಿಲ್ಲ ಎಂಬ ತೀರ್ಮಾನ ಕೈಗೊಳ್ಳಿ. ಮನೆಯಲ್ಲಿಯೇ ಕುಳಿತು ಪೂಜೆ ಮಾಡಿ. ಬುದ್ಧ ಗುರುವನ್ನು ನೀವು ನಂಬಿ, ಅವನನ್ನು ಅನುಸರಿಸಿ. ಬುದ್ಧ ನಾನು ಹೇಳಿದ್ದೇ ಸರಿ ಎಂದು ಎಲ್ಲೂ ಹೇಳಿಲ್ಲ, ಅದು ಅವರ ದೊಡ್ಡತನ. ಏಸು ಹಾಗೂ ಪ್ರವಾದಿ ಮಹಮ್ಮದ್ ಪೈಗಂಬರ್ ಹಾಗೂ ಭಗವಾನ್ ಕೃಷ್ಣ ಅವರು ನಮ್ಮ ಮಾತು ನಂಬದೆ ಇದ್ದರೆ ನಿಮಗೆ ಮೋಕ್ಷ ದೊರೆಯುವುದಿಲ್ಲ ಎಂದು ಹೇಳಿದ್ದಾರೆ. ಈ ರೀತಿ ಹೆದರಿಸುವವರು ಜ್ಞಾನಿಯಲ್ಲ. ನಿಮಗೆ ಸ್ವಾಭಿಮಾನ ಇದ್ದರೆ ಬುದ್ಧ ಧಮ್ಮಕ್ಕೆ ಹೋಗಬೇಕು. ನಮ್ಮನ್ನು ಶೋಷಣೆಗೆ ಗುರಿ ಮಾಡುವ ಧರ್ಮವನ್ನು ಎಡಗಾಲಿನ ಎಕ್ಕಡದಂತೆ ಒದಿಯಬೇಕು ಎಂದು ಕರೆ ನೀಡಿದ್ದಾರೆ.