

ಸಿದ್ದಾಪುರ: ಮರಗೋಡುವಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಲೀಗ್ ಮಾದರಿಯ ಕೊಡಗು ಜಿಲ್ಲಾ ಹಿಂದು ಮಲಯಾಳಿ ಫುಟ್ಬಾಲ್ ಕಪ್‌ನಲ್ಲಿ ಹಿಂದು ಮಲಯಾಳಿ ಸಮಾಜ ಮರಗೋಡು ತಂಡ ಚಾಂಪಿಯನ್ ಆಗಿದೆ.
ಚಾಲೆಂಜರ್ಸ್ ಎಫ್‌ಸಿ ಚೆನ್ನಯ್ಯನಕೋಟೆ ತಂಡ ದ್ವಿತೀಯ ಸ್ಥಾನ ಪಡೆದಿದೆ. ಎರಡು ಬಲಿಷ್ಠ ತಂಡಗಳ ನಡುವೆ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಹಿಂದು ಮಲಯಾಳಿ ಸಮಾಜ ಮರಗೋಡು ತಂಡದ ನಾಯಕ ಅಜಿತ್ ಚೆಟ್ಟಳ್ಳಿ ಅವರ ಏಕೈಕ ಗೋಲಿನಿಂದ ಪ್ರಶಸ್ತಿ ಜಯಿಸಿದೆ.
ಇದಕ್ಕೂ ಮೊದಲು ನಡೆದ ಮೊದಲ ಸೆಮಿಫೈನಲ್ ಪಂದ್ಯವು ಶ್ರೀನಿಥಿ ಎಫ್.ಸಿ ಒಂಟಿಯಂಗಡಿ ಹಾಗೂ ಚಾಲೆಂಜರ್ಸ್ ಎಫ್.ಸಿ ಚೆನ್ನಯ್ಯನಕೋಟೆ ತಂಡಗಳ ನಡುವೆ ನಡೆಯಿತು. ಕುತೂಹಲಕಾರಿ ಪಂದ್ಯದಲ್ಲಿ ಎರಡು ತಂಡವೂ 1-1 ಗೋಲುಗಳನ್ನು ಬಾರಿಸಿ ಸಮಬಲ ಸಾಧಿಸಿತ್ತು. ಶ್ರೀನಿಥಿ ಎಫ್.ಸಿ ತಂಡದ ಪರವಾಗಿ ಸತ್ಯ ಹಾಗೂ ಚಾಲೆಂಜರ್ಸ್ ಎಫ್.ಸಿ ತಂಡದ ಪರವಾಗಿ ವಿಷ್ಣು ಗೋಲುಗಳಿಸಿದರು. ನಿಗದಿತ ಸಮಯದಲ್ಲಿ ಪಂದ್ಯವು ಸಮಬಲವಾದ ಕಾರಣ ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು. ಪೆನಾಲ್ಟಿ ಶೂಟೌಟ್‌ನ ಐದು ಕಿಕ್ಕನಲ್ಲಿ ಎರಡು ತಂಡವು ಸಮಬಲ ಸಾಧಿಸಿತು. ಪೆನಾಲ್ಟಿ ಶೂಟೌಟ್‌ನಲ್ಲಿ ಅಂತಿಮವಾಗಿ ಸಡನ್ ಡೆತ್‌ನಲ್ಲಿ 10-9 ಪೆನಾಲ್ಟಿ ಶೂಟೌಟ್ ಗೋಲುಗಳಿಂದ ಚಾಲೆಂಜರ್ಸ್ ಎಫ್.ಸಿ ಚೆನ್ನಯ್ಯನಕೋಟೆ ತಂಡವು ಗೆದ್ದು ಫೈನಲ್ ಪ್ರವೇಶಿಸಿತು.
ಎರಡನೇ ಸೆಮಿಫೈನಲ್ ಪಂದ್ಯವು ಹಿಂದು ಮಲಯಾಳಿ ಸಮಾಜ ಮರಗೋಡು ಹಾಗೂ ಚಾಮುಂಡೇಶ್ವರಿ ಫ್ರೆಂಡ್ಸ್ ಅರೆಕಾಡು ತಂಡಗಳ ನಡುವೆ ನಡೆಯಿತು. ನಾಯಕ ಅಜಿತ್ ಚೆಟ್ಟಳ್ಳಿ ಹಾಗೂ ಉಮೇಶ್ ಮರಗೋಡು ಅವರ ತಲಾ ಒಂದು ಗೋಲುಗಳ ನೆರವಿನಿಂದ ಚಾಮುಂಡೇಶ್ವರಿ ಅರೆಕಾಡು ತಂಡವನ್ನು ಮಣಿಸಿ ಹಿಂದು ಮಲಯಾಳಿ ಸಮಾಜ ಮರಗೋಡು ತಂಡವು 2-0 ಗೋಲುಗಳಿಂದ ಗೆಲುವು ಸಾಧಿಸಿ ಫೈನಲ್‌ಗೆ ಲಗ್ಗೆಯಿಟ್ಟಿತ್ತು.
ಪಂದ್ಯಾವಳಿಯ ಅತ್ಯುತ್ತಮ ಆಟಗಾರ ಪ್ರಶಸ್ತಿಯನ್ನು ಹಿಂದು ಮಲಯಾಳಿ ಸಮಾಜ ಮರಗೋಡು ತಂಡ ನಾಯಕ ಅಜಿತ್ ಚೆಟ್ಟಳ್ಳಿ ಪಡೆದುಕೊಂಡರು. ಬೆಸ್ಟ್ ಡಿಫೆಂಡರ್ ಪ್ರಶಸ್ತಿಗೆ ಚಾಲೆಂಜರ್ಸ್ ಎಫ್‌ಸಿ ಚೆನ್ನಯ್ಯನಕೋಟೆ ತಂಡದ ನಾಯಕ ಶರತ್(ಕಣ್ಣ) ಭಾಜನರಾದರು. ಅತ್ಯುತ್ತಮ ಗೋಲ್ ಕೀಪರ್ ಪ್ರಶಸ್ತಿಯನ್ನು ಚಾಲೆಂಜರ್ಸ್ ಎಫ್‌ಸಿ ಚೆನ್ನಯ್ಯನಕೋಟೆ ತಂಡದ ಅಭಿಷೇಕ್ ಕುಶಾಲನಗರ ಹಾಗೂ ಅತೀ ಹೆಚ್ಚು ಗೋಲು ಬಾರಿಸಿದ ಆಟಗಾರ ಪ್ರಶಸ್ತಿಯನ್ನು ಶ್ರೀನಿಧಿ ಎಫ್.ಸಿ ಒಂಟಿಯಂಗಡಿ ತಂಡದ ಸತ್ಯ ಪಡೆದುಕೊಂಡರು. ಉದಯೋನ್ಮುಖ ಆಟಗಾರ ಪ್ರಶಸ್ತಿಯನ್ನು ಚಾಮುಂಡೇಶ್ವರಿ ಫ್ರೆಂಡ್ಸ್ ಅರೆಕಾಡು ತಂಡದ ನೀಕ್ಷಿತ್ ಪಡೆದುಕೊಂಡರು.