ಹಿಂದೂ ಮಲಯಾಳಿ ಬಾಂಧವರು ಒಗ್ಗಟ್ಟಾಗಿ ರಾಜಕೀಯವಾಗಿ ಮುಂದೆಬರಬೇಕು: ಕೆ.ಎಂ.ಗಣೇಶ್

31adarshkdga1
Published on

ಮಡಿಕೇರಿ: ಜಿಲ್ಲೆಯಲ್ಲಿರುವ ಹಿಂದೂ ಮಲಯಾಳಿ ಬಾಂಧವರು ಒಗ್ಗಟ್ಟಾಗಿ ರಾಜಕೀಯವಾಗಿ ಮುಂದೆಬರಬೇಕಾಗಿದೆ ಎಂದು ಕೊಡಗು ಜಿಲ್ಲಾ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಅಭಿಪ್ರಾಯಪಟ್ಟರು.


ಚೆಟ್ಟಳ್ಳಿ ಮಂಗಳ ಸಭಾಂಗಣದಲ್ಲಿ ಚೆಟ್ಟಳ್ಳಿ ಹಿಂದೂ ಮಲಯಾಳಿ ಸಮಾಜದ ವತಿಯಿಂದ ಭಾನುವಾರ ಆಯೋಜಿಸಿದ್ದ ೧೪ನೇ ವರ್ಷದ ಓಣಂ ಆಚರಣೆ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.


ಜಿಲ್ಲೆಯಲ್ಲಿ ೨೦೧೧ರ ಜನಗಣತಿ ಹಾಗೂ ಇತ್ತೀಚಿನ ಜನಸಂಖ್ಯೆ ನೋಡಿದರೆ, ಜಿಲ್ಲೆಯಲ್ಲಿ ಮಲಯಾಳಿ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಕೊಡಗು ಜಿಲ್ಲೆಯಲ್ಲಿರುವ ಹಿಂದೂ ಮಲಯಾಳಿ ಬಾಂಧವರು, ಒಗ್ಗಟ್ಟಾಗಿ ಮುಂದೆ ಸಾಗಬೇಕಾಗಿದೆ. ಕೇವಲ ಚಿಕ್ಕ ಸಮುದಾಯ ಎಂದು ಹೇಳಿ ಮತಕ್ಕಾಗಿ ರಾಜಕೀಯ ಮಾಡುವವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಇದಕ್ಕೆ ಜಿಲ್ಲೆಯ ಹಿಂದೂ ಮಲಯಾಳಿ ಸಮಾಜ ಬಾಂಧವರು ಬಲಿ ಪಶುವಾಗಬಾರದು ಎಂದು ಹೇಳಿದರು.


ಕೊಡಗು ಜಿಲ್ಲೆಯಲ್ಲಿ ಹಿಂದೂ ಮಲಯಾಳಿ ಬಾಂಧವರು ಒಗ್ಗಟ್ಟಾಗಿ ನಿಂತರೆ ತಮ್ಮದೇ ಸಮುದಾಯದ ವ್ಯಕ್ತಿಯನ್ನು ಒಬ್ಬ ಶಾಸಕನಾಗಿ ಆಯ್ಕೆ ಮಾಡುವಂತಹ ಶಕ್ತಿ ಜಿಲ್ಲೆಯ ಹಿಂದೂ ಮಲಯಾಳಿ ಸಮುದಾಯಕ್ಕೆ ಇದೆ. ಸಂಘಟನೆ ಗಟ್ಟಿಯಾಗಿ ಬೆಳೆದು, ತಮ್ಮ ಹಕ್ಕನ್ನು ಪಡೆದುಕೊಳ್ಳಬೇಕಾಗಿದೆ. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಂಡಿದ್ದು ಸಂತಸ ತಂದಿದೆ ಎಂದು ಹೇಳಿದರು.


ಕಾರ್ಯಕ್ರಮ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಕಾಂಗ್ರೆಸ್ ಯುವ ಮುಖಂಡ ಡಾ.ಮಂಥರ್ ಗೌಡ, ಎಲ್ಲಾ ಸಮುದಾಯಗಳು ಪ್ರಗತಿ ಸಾಧಿಸಬೇಕೆಂದರೆ ಶೈಕ್ಷಣಿಕವಾಗಿ ಬೆಳೆಯಬೇಕು. ಆದರೆ ಮಾತ್ರ ಸಮುದಾಯಗಳು ಪ್ರಗತಿ ಸಾಧಿಸಲು ಸಾಧ್ಯ. ಹಿಂದೂ ಮಲಯಾಳಿ ಬಾಂಧವರು ಸಂಸ್ಕೃತಿ, ಆಚಾರ, ವಿಚಾರಗಳು ಎಲ್ಲಾ ಸಮುದಾಯಗಳಿಗಿಂತ ಭಿನ್ನವಾಗಿದೆ. ಬಾಂಧವರು, ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಬೆಳೆದು ಬಂದು ಸಮಾಜದ ಮುಖ್ಯವಾಹಿನಿಗೆ ಬರಬೇಕಾಗಿದೆ. ಎಲ್ಲರು ಕೂಡ ಒಗ್ಗಟ್ಟಾಗಿ ಕಾರ್ಯನಿರ್ವಹಿಸಿದರೆ ಮಾತ್ರ ಯಶಸ್ಸು ಕಾಣಲು ಸಾಧ್ಯ ಎಂದು ಹೇಳಿದರು.


ಕೊಡಗು ಜಿಲ್ಲಾ ಹಿಂದೂ ಮಲಯಾಳಿ ಸಮಾಜದ ಗೌರವಾಧ್ಯಕ್ಷ ಕೆ.ಎಂ.ರಮೇಶ್ ಮಾತನಾಡಿ, ನಮ್ಮ ಈಗಿನ ಯುವ ಜನಾಂಗಕ್ಕೆ ಓಣಂ ಹಬ್ಬದ ಆಚರಣೆಯ ಮಹತ್ವವನ್ನು ಮನದಟ್ಟು ಮಾಡುವ ಕೆಲಸ ಹಿರಿಯರಿಂದ ಆಗಬೇಕಾಗಿದೆ. ಮಲಯಾಳಿಗಳ ಆಚಾರ, ವಿಚಾರ, ಸಂಸ್ಕೃತಿ,ಭಾಷೆಯನ್ನು ನಾವು ಉಳಿಸಿ,ಬೆಳೆಸಿದರೆ ಮಾತ್ರ ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿ ಉಳಿಯಲು ಸಾಧ್ಯ. ಓಣಂ ಹಬ್ಬ ಆಚರಣೆಗೆ ಹಲವಾರು ದಶಕಗಳ ಇತಿಹಾಸವಿದ್ದು, ಯಾರು ಕೂಡ ಓಣಂ ಹಬ್ಬವನ್ನು ಕೇವಲ ಪೂಕಳಂ ,ಓಣಂ ಸದ್ಯಕ್ಕೆ ಸೀಮಿತಗೊಳಿಸಬಾರದು ಎಂದು ಹೇಳಿದರು.


ಚೆಟ್ಟಳ್ಳಿ ಭಾಗದಲ್ಲಿರುವ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಹಿಂದೂ ಮಲಯಾಳಿ ಸಮಾಜದ ಸದಸ್ಯರಿಗೆ, ಚೆಟ್ಟಳ್ಳಿ ಹಿಂದೂ ಮಲಯಾಳಿ ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಸಭಾ ಕಾರ್ಯಕ್ರಮದ ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.


ಸಮಾರೋಪ ಸಮಾರಂಭ: ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು, ಚೆಟ್ಟಳ್ಳಿ ಹಿಂದೂ ಮಲಯಾಳಿ ಸಮಾಜದ ಅಧ್ಯಕ್ಷ ಎನ್.ಚಂದ್ರನ್ ವಹಿಸಿದ್ದರು. ಈ ಸಂದರ್ಭ ವೇದಿಕೆಯಲ್ಲಿ ಚೆಟ್ಟಳ್ಳಿ ಹಿಂದೂ ಮಲಯಾಳಿ ಸಮಾಜದ ಗೌರವಾಧ್ಯಕ್ಷ ಟಿ.ಆರ್.ವಾಸುದೇವನ್, ಎಸ್.ಎಲ್.ಎನ್ ಪ್ಲಾಂಟೇಷನ್ ವ್ಯವಸ್ಥಾಪಕ ಪಿ.ಕಣ್ಣನ್, ಚೆಟ್ಟಳ್ಳಿ ಓಣಂ ಆಚರಣಾ ಸಮಿತಿ ಅಧ್ಯಕ್ಷ ಕೆ ಶ್ರೀನಿವಾಸ್, ಮೂರ್ನಾಡು ಸಮಾಜದ ಅಧ್ಯಕ್ಷ ಕೆ.ಬಾಬು, ಸಮಿತಿ ಗೌರವಾಧ್ಯಕ್ಷರಾದ ಸರೋಜಿನಿ ಬಾಲನ್, ಬಾಬು, ವಿಜಯನ್, ಹಾಗೂ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net