

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಅಧಿಕಾರಕ್ಕಾಗಿ ಹಿಂದುತ್ವ ಬಳಸುತ್ತಿರುವ ಬಿಜೆಪಿಯದ್ದು ನೈಜ ಹಿಂದುತ್ವವಲ್ಲ. ಬಿಜೆಪಿಯ ನಕಲಿ ಹಿಂದುತ್ವ ವಿರುದ್ಧದ ನಮ್ಮ ಹೋರಾಟ ಸದಾ ಇರುತ್ತದೆ ಎಂದು ಅಖಿಲ ಭಾರತ ಹಿಂದೂ ಮಹಾಸಭಾ ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್ ಹೇಳಿದ್ದಾರೆ.
ಹಿಂದುಗಳಿಗೆ ಮಾತ್ರ ಇರುವ ಏಕೈಕ ಪಕ್ಷ ನಮ್ಮದಾಗಿದೆ. ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲಿಯೂ ಪಕ್ಷದ ಅಭ್ಯರ್ಥಿಗಳು ಈ ಬಾರಿ ಸ್ಪರ್ಧಿಸಲಿದ್ದಾರೆಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಘೋಷಿಸಿದರು. ಮಡಿಕೇರಿ, ವಿರಾಜಪೇಟೆ ಕ್ಷೇತ್ರದಲ್ಲಿ ತಲಾ ಮೂವರು ಆಕಾಂಕ್ಷಿಗಳಿದ್ದು, ಸೂಕ್ತ ಅಭ್ಯರ್ಥಿ ಆಯ್ಕೆ ಮಾಡಲಾಗುವುದೆಂದರು.
ಹಿಂದೂ ಮಹಾಸಭಾ ಒಡೆಯುವ ಕುತಂತ್ರಕ್ಕೆ ಬಿಜೆಪಿ ಕೈಹಾಕಿದೆ. ಮಹಾಸಭದಲ್ಲಿ ಭಿನ್ನಾಭಿಪ್ರಾಯವಿದೆ ಎಂದು ಬಿಂಬಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಹಿಂದೂ ನಾಯಿಕರ ಮೇಲೆ ಸುಳ್ಳು ಪ್ರಕರಣ ದಾಖಲಿಸಿ, ಜೈಲಿಗೆ ಹಾಕುವ ಕೆಲಸ ಬಿಜೆಪಿ ಸರ್ಕಾರ ಮಾಡುತ್ತಿದೆ. ಹಿಂದೂ ಸಮಾಜ ಬಿಜೆಪಿ ವಿರುದ್ಧವಾಗಿದ್ದು, ಈ ಬಾರಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದಿಲ್ಲ ಎಂದಿದ್ದಾರೆ.
ಹಿಂದುತ್ವದ ಹೆಸರಿನಲ್ಲಿ ಧರ್ಮ ದ್ರೋಹ ಮಾಡುವುದನ್ನು ಮಹಾಸಭಾ ಎಂದಿಗೂ ಸಹಿಸುವುದಿಲ್ಲ. ಮಹಾಸಭಾ ಮುಗಿಸಲು ಬಿಜೆಪಿ ಸಂಚು ರೂಪಿಸಿದ್ದು, ಇದು ಫಲಕೊಡುವುದಿಲ್ಲ. ಹಿಂದುಗಳಿಗೆ ತೊಂದರೆಯಾದಾಗ ಮುಂದೆ ನಿಲ್ಲುವುದು ಮಹಾಸಭಾ ಎಂದು ಹೇಳಿದರು.
ಪಿಎಫ್‌ಐ ಸೇರಿದ್ದಂತೆ ಹಲವು ಸಂಘಟನೆಗಳನ್ನು ದೇಶದಲ್ಲಿ ನಿಷೇಧಿಸಿರುವ ಬಿಜೆಪಿ ಎಸ್‌ಡಿಪಿಐಯನ್ನು ಏಕೆ ನಿಷೇಧ ಮಾಡಿಲ್ಲ. ಕಾಂಗ್ರೆಸ್ಸಿ ಗೆ ಮುಸ್ಲಿಂ ಮತ ಹೋಗುವುದನ್ನು ತಪ್ಪಿಸಲು ಎಸ್‌ಡಿಪಿಐನ್ನು ಬೆಳೆಸುತ್ತಿದೆ. ಕಾಂಗ್ರೆಸ್ ಆಳ್ವಿಕೆ ಇದ್ದ ಸಂದರ್ಭದಲ್ಲಿಯೂ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿತ್ತು. ಬಿಜೆಪಿ ಸರ್ಕಾರ ಗೋಹತ್ಯೆ ನಿಷೇಧ ಪೂರ್ಣ ಪ್ರಮಾಣದಲ್ಲಿ ಏಕೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.
ಸಾವರ್ಕರ್ ವಾದವನ್ನು ಬಿಜೆಪಿ ಪಾಲಿಸುತ್ತಿಲ್ಲ. ಹಿಂದುಗಳ ಸಾವಿನಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಿದೆ. ಗಾಂಧಿ ವಧೆ ಮಾಡಿದ ಹಿಂದೂ ಮಹಾಸಭಾ ಕಾರ್ಯಕರ್ತ ನಾಥರಾಮ್ ಗೂಡ್ಸೆಯನ್ನು ಮಹಾಸಭಾ ಎಂದಿಗೂ ಬಿಟ್ಟುಕೊಟ್ಟಿಲ್ಲ. ನಮ್ಮ ನಾಯಕ ನಾಥರಾಮ್ ಗೂಡ್ಸೆ ಎಂದು ರಾಜೇಶ್ ಪವಿತ್ರನ್ ಹೇಳಿದರು.
ಮಹಾಸಭಾ ರಾಜ್ಯ ಉಪಾಧ್ಯಕ್ಷರಾದ ಎಸ್. ಮುರಳಿ, ಪ್ರವೀಣ್, ಸಂಘಟನಾ ಕಾರ್ಯದರ್ಶಿ ಶ್ರೀನಿವಾಸ್ ರೈ ಗೋಷ್ಠಿಯಲ್ಲಿದ್ದರು.