

ಮಂಗಳೂರು: ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ಹಿಂದುತ್ವ, ಅಭಿವೃದ್ಧಿ ವಿಚಾರಗಲ್ಲಿ ಮತ ಕೇಳಲು ಅಸಾಧ್ಯವಾಗಿರುವ ಹಿನ್ನೆಲೆಯಲ್ಲಿ ಸಾವರ್ಕರ್ ವಿಚಾರವನ್ನು ಮುನ್ನೆಲೆಗೆ ತಂದು ಮತ ಪಡೆಯುವ ಹುನ್ನಾರ ನಡೆಸುತ್ತಿದೆ. ಕಾಂಗ್ರೆಸ್‌ಗಿಂತಲೂ ಹೀನಾಯವಾಗಿ ಧರ್ಮವನ್ನು ಒಡೆಯುವ ಕೆಲಸ ಮಾಡಿದ ರಾಜ್ಯ ಬಿಜೆಪಿಗೆ ಸಾವರ್ಕರ್ ಹೆಸರು ಎತ್ತುವ ನೈತಿಕತೆ ಕೂಡಾ ಇಲ್ಲ ಎಂದು ಅಖಿಲ ಭಾರತ ಹಿಂದು ಮಹಾಸಭಾ ಆರೋಪಿಸಿದೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿಂದು ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ, ಬಿಜೆಪಿಗೆ ಸಾವರ್ಕರ್ ಕಟ್ಟಿದ ಅಖಿಲ ಭಾರತ ಹಿಂದು ಮಹಾಸಭಾ, ಅವರ ಅಖಂಡ ಭಾರತದ ಪರಿಕಲ್ಪನೆ, ಹಿಂದು ರಾಷ್ಟ್ರದ ಭಾರತದ ಸಂವಿಧಾನ, ಅವರ ಹಿಂದುತ್ವದ ವಿಚಾರಧಾರೆ ಯಾವುದೂ ಬೇಡ ಆದರೆ, ಮುಂದಿನ ಚುನಾವಣೆಗೆ ಸಾವರ್ಕರ್ ಹೆಸರು ಮತ್ತು ಭಾವಚಿತ್ರ ಮಾತ್ರ ಬೇಕು. ಇದು ಬಿಜೆಪಿಯ ದಿವಾಳಿತನವನ್ನು ತೋರಿಸುತ್ತದೆ ಎಂದು ಆರೋಪಿಸಿದರು.
ಸಾವರ್ಕರ್‌ರನ್ನು ಬಿಜೆಪಿ ಒಪ್ಪುವುದಾದರೆ ಅವರ ಜನ್ಮ ದಿನವನ್ನು ರಾಷ್ಟ್ರೀಯ ಹಬ್ಬವನ್ನಾಗಿ ಆಚರಿಸುವ ತಾಕತ್ತು ಇದೆಯೇ ಎಂದು ಪ್ರಶ್ನಿಸಿದರು. ಸಾವರ್ಕರ್ ವಿರೋಧಿ ಹೇಳಿಕೆ ನೀಡಿರುವ ಸಿದ್ಧರಾಮಯ್ಯ ಅವರದ್ದು ಪುಕ್ಕಲು ವ್ಯಕ್ತಿತ್ವ. ಸಾವರ್ಕರ್ ಬಗ್ಗೆ ವಿರೋಧ ವ್ಯಕ್ತಪಡಿಸುವ ಅವರು ಸ್ವಾತಂತ್ರೃ ಹೋರಾಟದಲ್ಲಿ ಎರಡೆರಡು ಕಾಲಾಪಾನಿ ಶಿಕ್ಷೆಗೆ ಗುರಿಯಾದ ಒಬ್ಬ ವ್ಯಕ್ತಿಯನ್ನು ತೋರಿಸಲಿ. ಕ್ರಾಂತಿಕಾರಿ ಸ್ವಾತಂತ್ರೃ ಹೋರಾಟಗಾರನನ್ನು ಅವಹೇಳನ ಮಾಡಿದ ಅವರ ವಿರುದ್ಧ ಪ್ರಕರಣ ದಾಖಲಿಸಲು ಉದ್ದೇಶಿಸಿದ್ದು, ದಾಖಲೆ ಸಂಗ್ರಹಿಸುತ್ತಿದ್ದೇವೆ ಎಂದರು.