ಹಿಂದೂ ಮಹಾಸಭಾ ಹೆಸರು ದುರ್ಬಳಕೆ ವಿರುದ್ಧ ಕ್ರಮ

udp-hindu
Published on

ಉಡುಪಿ: ಅಖಿಲ ಭಾರತ ಹಿಂದೂ ಮಹಾಸಭಾ ಸ್ವಯಂಘೋಷಿತ ಅಧ್ಯಕ್ಷ ಕೆಲವು ಹಿಂದೂ ಯುವಕರ ತಂಡ ಕಟ್ಟಿಕೊಂಡು ಪಕ್ಷದ ಹೆಸರು, ಬಾವುಟ, ಲಾಂಛನ ದುರ್ಬಳಕೆ ಮಾಡಿಕೊಂಡಿರುವುದು ಗಮನಕ್ಕೆ ಬಂದಿದ್ದು, ಈ ಬಗ್ಗೆ ಮಂಗಳೂರು ಪೊಲೀಸ್ ಕಮಿಷನರ್ ಅವರಿಗೆ ದೂರು ನೀಡಲಾಗಿದೆ. ಈ ರೀತಿ ಘಟನೆ ಮರುಕಳಿಸಿದಲ್ಲಿ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮಹಾಸಭಾ ಜಿಲ್ಲಾಧ್ಯಕ್ಷ ಗುಡ್ರಿ ರಾಮಣ್ಣ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಚಕ್ರಪಾಣಿ ಮಹಾರಾಜ್ ಮನೋಜ್ ಅಲುಂಗರ್ ಎಂಬುವವರನ್ನು ಕರ್ನಾಟಕದ ರಾಜ್ಯಾಧ್ಯಕ್ಷರನ್ನಾಗಿ ಅಧಿಕೃತವಾಗಿ ನೇಮಕ ಮಾಡಿದ್ದಾರೆ. ರಾಜ್ಯದಲ್ಲಿ ವಿವಿಧ ಪದಾಧಿಕಾರಿಗಳನ್ನೂ ಆಯ್ಕೆ ಮಾಡಲಾಗಿದೆ. ಈ ಹಿಂದೆ ಸ್ವಯಂಘೋಷಿತ ಅಧ್ಯಕ್ಷ ರಾಜೇಶ್ ಪವಿತ್ರನ್, ಮುಖ್ಯಮಂತ್ರಿಗಳಿಗೆ ಬೆದರಿಕೆ ಹಾಕುವುದು, ಹಿಂದೂ ವಿರೋಧಿ ಹೇಳಿಕೆ ನೀಡುವುದು, ಸಮಾಜದಲ್ಲಿ ಗೊಂದಲಗಳನ್ನುಂಟು ಮಾಡುತ್ತಿದ್ದು, ಈ ಬಗ್ಗೆ ಈಗಾಗಲೇ ಬೆಂಗಳೂರು ನಗರ ಸಿವಿಲ್ ಮತ್ತು ಸೆಷನ್ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ. ನ್ಯಾಯಾಲಯದ ತಡೆಯಾಜ್ಞೆ ಇದ್ದರೂ ಕೆಲವರು ಮಹಾಸಭಾ ಹೆಸರಿನಲ್ಲಿ ಸಭೆಗಳನ್ನು ನಡೆಸಿರುವುದು ಗಮನಕ್ಕೆ ಬಂದಿದ್ದು, ಮಂಗಳೂರು ಪೊಲೀಸ್ ಕಮಿಷನರ್ ಅವರಿಗೆ ದೂರು ನೀಡಲಾಗಿದೆ ಎಂದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಗಿರೀಶ್ ಬೆಂಗಳೂರು ಮಾತನಾಡಿ, ಹಿಂದೂ ಧರ್ಮ ರಕ್ಷಣೆ ಹಾಗೂ ಧರ್ಮಶಿಕ್ಷಣ ನೀಡುವುದಕ್ಕಾಗಿ 1909ರಲ್ಲಿ ಲಾಲಾಲಜಪತ್ ರಾಯ್, ಮದನ ಮೋಹನ ಮಾಳವೀಯ, ಸ್ವಾಮೀಶ್ರದ್ಧಾನಂದ ಅವರು ಮಹಾಸಭಾ ಸ್ಥಾಪಿಸಿದ್ದು, 1937ರಲ್ಲಿ ವೀರ ಸಾವರ್ಕರ್ ಅವರನ್ನು ರಾಷ್ಟ್ರೀಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು ಎಂದು ಹೇಳಿದರು.

ದ.ಕ. ಜಿಲ್ಲಾಧ್ಯಕ್ಷ ಪ್ರಮೋದ್ ಉಚ್ಚಿಲ್, ಮಹಿಳಾ ಸಭಾ ಅಧ್ಯಕ್ಷೆ ಸ್ವರ್ಣ ಕುಂದಾಪುರ, ವಿದ್ಯಾರ್ಥಿ ಸಭಾ ಅಧ್ಯಕ್ಷ ಶಶಾಂಕ್ ಪೂಜಾರಿ, ಯುವ ಘಟಕ ಅಧ್ಯಕ್ಷೆ ಶೀತಲ್ ಕುಂದಾಪುರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net