

ಮಂಗಳೂರು: ಬಿಜೆಪಿಯಲ್ಲಿರುವ ಶೇ.80ರಷ್ಟು ಮಂದಿ ಆಮದು ನಾಯಕರು. ಬೆಂಗಳೂರಿನ ಟೌನ್‌ಹಾಲ್‌ನಲ್ಲಿ ಗೋಮಾಂಸ ತಿಂದವರೂ ಬಿಜೆಪಿಯಲ್ಲಿ ಶಾಸಕರಾಗಿದ್ದಾರೆ. ಸ್ವತಃ ಮುಖ್ಯಮಂತ್ರಿಯೇ ಅನ್ಯಪಕ್ಷದಿಂದ ಬಂದವರು. ಇಂತಹ ಪರಿಸ್ಥಿತಿಯಲ್ಲಿ ಹಿಂದುಗಳ ರಕ್ಷಣೆ ಹೇಗೆ ಸಾಧ್ಯ ಎಂದು ಅಖಿಲ ಭಾರತ ಹಿಂದು ಮಹಾಸಭಾ ಪ್ರಶ್ನಿಸಿದೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಖಿಲ ಭಾರತ ಹಿಂದು ಮಹಾಸಭಾ ಕರ್ನಾಟಕ ಅಧ್ಯಕ್ಷ ರಾಜೇಶ್ ಪವಿತ್ರನ್, ಚುನಾಚಣಾ ಪೂರ್ವದಲ್ಲಿ ಹಿಂದುಗಳ ಓಲೈಕೆ ಮಾಡುವ ಬಿಜೆಪಿ ನಾಯಕರು, ನಂತರದಲ್ಲಿ ಜಾತ್ಯತೀತರಂತೆ ವರ್ತಿಸಿ, ಹಿಂದುಗಳಿಗೆ ಮೋಸ ಮಾಡುತ್ತಿದ್ದಾರೆ. ಎಸ್‌ಡಿಪಿಐ, ಪಿಎಫ್‌ಐನಂತಹ ಸಂಘಟನೆಗಳನ್ನು ಹಲವು ರಾಜ್ಯಗಳು ನಿಷೇಧಿಸಿದ್ದರೂ, ರಾಜ್ಯ ಸರ್ಕಾರ ಮಾತ್ರ ಕೇಂದ್ರದತ್ತ ಬೊಟ್ಟು ಮಾಡಿ ಮೌನವಹಿಸಿದೆ. ಬಿಜೆಪಿ ಅಧಿಕಾರದಲ್ಲಿರಲು ಇಂತಹ ಸಂಘಟನೆಗಳು ಬೇಕು ಎನ್ನುವ ಕಾರಣಕ್ಕಾಗಿಯೇ ಈ ರೀತಿ ನಾಟಕವಾಡುತ್ತಿದೆ ಎಂದು ಆರೋಪಿಸಿದರು.
ಕೇಸರಿ ಒಕ್ಕೂಟ ರಚನೆ:
ಕೇಸರಿ ಪಕ್ಷ ಎಂದು ಹೇಳಿಕೊಳ್ಳುವ ಬಿಜೆಪಿಯ ಜಾತ್ಯತೀತತೆಯಿಂದ ಕಾರ್ಯಕರ್ತರು ರೋಸಿ ಹೋಗಿದ್ದಾರೆ. ಆದ್ದರಿಂದ ಬಿಜೆಪಿಗೆ ಪರ್ಯಾಯವಾಗಿ ಹಿಂದುತ್ವ ವಿಚಾರಧಾರೆಯ ಪಕ್ಷಗಳನ್ನು ಒಟ್ಟು ಸೇರಿಸಿ, ಕೇಸರಿ ಒಕ್ಕೂಟ ರಚನೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಆ.6ರಂದು ಬೆಂಗಳೂರಿನಲ್ಲಿ ಸಭೆ ನಡೆಯಲಿದೆ. ಪ್ರಮೋದ್ ಮುತಾಲಿಕ್ ಸಹಿತ ವಿವಿಧ ಹಿಂದು ಮುಖಂಡರು ಬೆಂಬಲ ವ್ಯಕ್ತಪಡಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಎಲ್ಲ 224 ವಿಧಾನ ಸಭಾ ಕ್ಷೇತ್ರದಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು. ಅಧಿಕಾರಕ್ಕೆ ಬಂದರೆ ಯೋಗಿ ಮಾದರಿಯ ಆಡಳಿತ ನೀಡಲಾಗುವುದು ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷರಿಗೆ ಸವಾಲು:
ಅಖಿಲಭಾರತ ಹಿಂದು ಮಹಾಸಭಾಕ್ಕೆ ಮುಸ್ಲಿಮರ ಮತ ಬೇಡ. ಬಿಜೆಪಿಗೆ ಹಿಂದುತ್ವವೇ ಮುಖ್ಯ ಎಂದಾದರೆ ರಾಜ್ಯಾಧ್ಯಕ್ಷರು ನಮಗೆ ಮುಸ್ಲಿಮರ ಮತ ಬೇಡ ಎಂದು ಹೇಳಿಕೆ ಕೊಡಲಿ. ಆಗ ನಾವು ರಾಜಕೀಯದಿಂದ ಹಿಂದೆ ಸರಿಯುತ್ತೇವೆ ಎಂದು ಧರ್ಮೇಂದ್ರ ಸವಾಲು ಹಾಕಿದರು.
ಹಿಂದುಗಳಿಗೆ ಗನ್ ಟ್ರೈನಿಂಗ್:
ಸ್ವಯಂ ರಕ್ಷಣೆಗೆ ಆಯುಧವನ್ನು ಇಟ್ಟುಕೊಂಡಿದ್ದರೆ ಪ್ರವೀಣ್‌ನ ಹತ್ಯೆ ಆಗುತ್ತಿರಲಿಲ್ಲ. ಆದ್ದರಿಂದ ಹಿಂದುಗಳ ಸ್ವಯಂ ರಕ್ಷಣೆಗಾಗಿ ಗನ್ ಟ್ರೈನಿಂಗ್ ನೀಡುವಂತೆ ಹಿಂದು ಮಹಾಸಭಾ ಪೊಲೀಸ್ ಇಲಾಖೆಯನ್ನು ಒತ್ತಾಯಿಸುತ್ತದೆ. ಒಕ್ಕೂಟದ ಸರ್ಕಾರದ ರಚನೆಯಾದರೆ ಇದರ ಸಾಧ್ಯಾಸಾಧ್ಯತೆನ್ನು ಪರಿಶೀಲಿಸುತ್ತದೆ ಎಂದರು.
ಬಂಟ್ವಾಳ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಹರ್ಷ ನಾಯಕ್ ಉಪಸ್ಥಿತರಿದ್ದರು.