

ಹುಬ್ಬಳ್ಳಿ: ಇಲ್ಲಿಯ ನವನಗರದ ಪಂಚಾಕ್ಷರಿನಗರ ಮಹಾವೀರ ವೃತ್ತದಲ್ಲಿ ಹಿಂದು ಮಹಾಗಣಪತಿ ಉತ್ಸವ ವಿಜೃಂಭಣೆಯಿಂದ ನಡೆಯುತ್ತಿದ್ದು, ದ್ವಿತೀಯ ವಾರ್ಷಿಕೋತ್ಸವ ಅಂಗವಾಗಿ ಸೆ. 21ರಂದು ವೈವಿಧ್ಯಮಯ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದು ಅಪ್ಪಾಜಿ ಜನಸೇವಾ ಟ್ರಸ್ಟ್ ಅಧ್ಯಕ್ಷ ವಿಜಯಕುಮಾರ ಅಪ್ಪಾಜಿ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟ್ರಸ್ಟ್ ಹಾಗೂ ನವಶಕ್ತಿ ಮಹಿಳಾ ಮಂಡಳ ಮತ್ತು ಭಕ್ತ ಸಮೂಹದ ಆಶ್ರಯದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಸೆ. 21ರಂದು ಸಂಜೆ ಸಾಧಕ ಮಹನೀಯರಿಗೆ ಸನ್ಮಾನ ನಡೆಯಲಿದೆ. ನಂತರ ಕಲಾವಿದರಿಂದ ಬೃಹತ್ ರಸಮಂಜರಿ ನಡೆಯಲಿದೆ. ಜೂನಿಯರ್ ರಾಜಕುಮಾರ, ಜೂ. ಅಂಬರೀಶ, ಜೂ. ಪುನೀತ ರಾಜಕುಮಾರ ಇತರರು ಪಾಲ್ಗೊಳ್ಳುವರು ಎಂದರು.
ಶಾಸಕ ಪ್ರಸಾದ ಅಬ್ಬಯ್ಯ, ಹುಡಾ ಮಾಜಿ ಅಧ್ಯಕ್ಷ ನಾಗೇಶ ಕಲಬುರ್ಗಿ, ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಮಲ್ಲಿಕಾರ್ಜುನ ಸಾಹುಕಾರ ಅತಿಥಿಗಳಾಗಿ ಭಾಗವಹಿಸುವರು. ಕಾಶಿ ಶಾಖಾಮಠದ ಶ್ರೀ ರಾಜಶೇಖರ ಶಿವಾಚಾರ್ಯರು ಸಾನ್ನಿಧ್ಯ ವಹಿಸುವರು.
ಸೆ. 22ರಂದು ಹಿಂದು ಮಹಾಗಣಪತಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯನ್ನು ಏರ್ಪಡಿಸಲಾಗಿದೆ. ಸೆ. 24ರಂದು ಗಣಹೋಮ, ಸೆ. 27ರಂದು ಬೆಳಗ್ಗೆ 10ಕ್ಕೆ ಶ್ರೀಗಣೇಶ ವಿಸರ್ಜನೆ ಭವ್ಯ ಮೆರವಣಿಗೆ ನಡೆಯಲಿದೆ ಎಂದರು.
ಟ್ರಸ್ಟ್ ಉಪಾಧ್ಯಕ್ಷ ಸುನಿಲ ರೇವಣಕರ, ನಿರ್ದೇಶಕ ಅಲಿಸಾಬ ನದಾಫ್, ಮಹಿಳಾ ಮಂಡಳದ ಅಧ್ಯಕ್ಷೆ ಶೋಭಾ ಅಪ್ಪಾಜಿ, ಸರೋಜಾ ಹಬೀಬ, ನಿಧಿ ದೇಶಪಾಂಡೆ, ಗೋಷ್ಠಿಯಲ್ಲಿದ್ದರು.