

ಹುಬ್ಬಳ್ಳಿ: ಇಲ್ಲಿಯ ನವನಗರ ಪಂಚಾಕ್ಷರಿನಗರ ಮಹಾವೀರ ವೃತ್ತದಲ್ಲಿ ಹುಬ್ಬಳ್ಳಿ ಧಾರವಾಡ ಹಿಂದು ಮಹಾಗಣಪತಿ ಉತ್ಸವ ಮಂಡಳಿ ವತಿಯಿಂದ ಪ್ರತಿಷ್ಠಾಪಿಸಿರುವ 21 ದಿನಗಳ ಗಣೇಶ ಮಂಟಪದಲ್ಲಿ ಅ. 7 ಹಾಗೂ 8ರಂದು ವಿವಿಧ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಮಂಡಳಿ ಅಧ್ಯಕ್ಷ ವಿಜಯಕುಮಾರ ಅಪ್ಪಾಜಿ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ. 7ರಂದು ಸಂಜೆ 6.30ಕ್ಕೆ ಗಣಪತಿ ಉತ್ಸವಕ್ಕೆ ಸಹಾಯ, ಸಹಕಾರ ನೀಡಿದ ದಾನಿಗಳಿಗೆ ಸನ್ಮಾನಿಸಲಾಗುವುದು.
ನಂತರದಲ್ಲಿ ಕನ್ನಡ ಚಲನಚಿತ್ರ ರಂಗದ ಖ್ಯಾತ ನಟರಾದ ಜ್ಯೂನಿಯರ್ ರಾಜಕುಮಾರ, ಅಂಬರೀಶ, ಶಿವರಾಜಕುಮಾರ, ಉಪೇಂದ್ರ, ಪುನೀತರಾಜಕುಮಾರ, ಯಶ್ ಮುಂತಾದ ಕಲಾವಿದರು ರಸಮಂಜರಿ ಕಾರ್ಯಕ್ರಮ ನಡೆಸಿಕೊಡುವರು ಎಂದರು.
ಉತ್ಸವ ಮಂಡಳಿ ಸಲಹಾ ಸಮಿತಿ ಅಧ್ಯಕ್ಷ ಶಿವಾನಂದ ಮುತ್ತಣ್ಣವರ ಮಾತನಾಡಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಾರ್ಯಕ್ರಮ ಉದ್ಘಾಟಿಸುವರು. ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಮುಖಂಡರಾದ ಡಾ. ಕ್ರಾಂತಿಕಿರಣ, ದೇವಕಿ ಯೋಗಾನಂದ, ಉತ್ತರ ಕರ್ನಾಟಕ ಜನಶಕ್ತಿ ಸೇನಾ ಅಧ್ಯಕ್ಷ ಎಸ್.ಎಸ್. ಶಂಕ್ರಣ್ಣ, ಶಾಂತರಾಜ ಮಲ್ಲಸಮುದ್ರ, ಹನುಮಂತಪ್ಪ ಹುದ್ದಾರ ಇತರರು ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದರು.
ಅ. 8ರಂದು ಬೆಳಗ್ಗೆ 10ಕ್ಕೆ ಗಣೇಶ ವಿಸರ್ಜನೆ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭದಲ್ಲಿ ವಿವಿಧ ಸಾಂಸತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದು ಹೇಳಿದರು.
ಕಾರ್ಯದರ್ಶಿ ಸುನಿಲ ರೇವಣಕರ, ಸುಮಿತ ಮರೆಣ್ಣವರ, ಗಣೇಶ ರಾಣೆಬೆನ್ನೂರ, ಅಲಿಸಾಬ ನದಾ್, ಇತರರು ಗೋಷ್ಠಿಯಲ್ಲಿದ್ದರು.