ಭಾವೈಕ್ಯ ಬೆಸೆಯುವ ಹಿಂದು ಮಹಾ ಗಣಪತಿ, ನವನಗರ ಪಂಚಾಕ್ಷರಿನಗರದಲ್ಲಿ ಪ್ರತಿಷ್ಠಾಪನೆ

IMG-20230916-WA0009_1.jpg
Published on

ಹುಬ್ಬಳ್ಳಿ: ಹಿಂದುಸ್ಥಾನದಲ್ಲಿ ಹುಟ್ಟಿ ಬೆಳೆದ ನಾವುಗಳೆಲ್ಲರೂ ಹಿಂದುಗಳು. ಈ ಭಾವನೆಯು ಎಲ್ಲರಲ್ಲಿ ಇನ್ನಷ್ಟು ಜಾಗೃತವಾಗಬೇಕು ಎನ್ನುವ ದಿಸೆಯಲ್ಲಿ ಅವಳಿನಗರದಲ್ಲಿ ಹಿಂದು ಮಹಾಗಣಪತಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ.

ಇದೇ ಮೊದಲ ಬಾರಿ ಮಹಾನಗರದಲ್ಲಿ ಹಿಂದು& ಮುಸ್ಲಿಂ, ಕೆಸ್ತ್ ಎಲ್ಲ ಧರ್ಮದವರು ಸೇರಿ ಹುಬ್ಬಳ್ಳಿ ಧಾರವಾಡ ಹಿಂದು ಮಹಾ ಗಣಪತಿ ಪ್ರತಿಷ್ಠಾಪಿಸಿ ಪೂಜಿಸುವ ಮೂಲಕ ಸಾಮರಸ್ಯದ ಬೀಡಲ್ಲಿ ವಿಶೇಷತೆ ಮೆರೆಯುತ್ತಿದ್ದಾರೆ.

ಇಲ್ಲಿಯ ನವನಗರ ಪಂಚಾಕ್ಷರಿ ನಗರದ ಮಹಾವೀರ ವೃತ್ತದಲ್ಲಿ ಸಾರ್ವಜನಿಕವಾಗಿ ಆರಾಧನೆ ಮಾಡಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸ್ವಾತಂತ್ರ್ಯ ಸಮರದ ಸಂದರ್ಭದಲ್ಲಿ ಮುನ್ನೆಲೆಗೆ ಬಂದ ಸಾರ್ವಜನಿಕ ಗಣೇಶೋತ್ಸವಕ್ಕೆ ಹೊಸ ಮೆರಗು ನೀಡುವಂತೆ ಹಿಂದು ಮಹಾ ಗಣಪತಿ ಪರಿಕಲ್ಪನೆ ತರಲಾಗಿದೆ.

ಇದರ ಮೂಲಕ ನಾವೆಲ್ಲ ಭಾರತೀಯರು ಒಂದೇ ಎಂಬ ಭಾವನೆ ಹೊರಸೂಸಲು ಪ್ರಯತ್ನಿಸಲಾಗುತ್ತಿದೆ. ಇದಕ್ಕಾಗಿ ವೈವಿದ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಹುಧಾ ಹಿಂದು ಮಹಾ ಗಣಪತಿ ಉತ್ಸವ ಮಂಡಳಿ ಅಧ್ಯಕ್ಷ ವಿಜಯಕುಮಾರ ಅಪ್ಪಾಜಿ, ಪ್ರಧಾನ ಕಾರ್ಯದರ್ಶಿ ಸುನಿಲ ರೇವಣಕರ ತಿಳಿಸಿದ್ದಾರೆ.

ಸುಮಾರು 800 ಚದರ ಅಡಿಯಲ್ಲಿ ಪೆಂಡಾಲ್ ನಿರ್ಮಿಸಲಾಗುತ್ತಿದೆ. ಅಲಂಕಾರ ಮಾಡಿ 15 ಅಡಿ ಎತ್ತರದ ಪರಿಸರ ಸ್ನೇಹಿ ಮೂರ್ತಿ ಪ್ರತಿಷ್ಠಾಪಿಸಲಾಗುತ್ತಿದೆ. ಇಲ್ಲಿ ನಿತ್ಯ ವಿವಿಧ ಅಲಂಕಾರ ಪೂಜೆ, ಹೋಮ ಹವನ, ಆರಾಧನೆಗಳು ನಡೆಯಲಿವೆ. ದಿನವೂ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಕಲಾ ತಂಡಗಳು ಸಾಂಸತಿಕ ಕಾರ್ಯಕ್ರಮ ನಡೆಸಿಕೊಡಲಿವೆ.

ಉತ್ತರ ಕರ್ನಾಟಕ ಜನಶಕ್ತಿ ಸೇನಾ ಸಂಸ್ಥಾಪಕ ಅಧ್ಯಕ್ಷ ಎಸ್.ಎಸ್. ಶಂಕ್ರಣ್ಣ ಅವರು ವಿಗ್ರಹ ದೇಣಿಗೆ ನೀಡಿದ್ದಾರೆ.

ರಾಷ್ಟ್ರಪ್ರೇಮವನ್ನು ಎಲ್ಲೆಡೆ ಜಾಗೃತ ಮಾಡುವುದು ಈ ಆಚರಣೆಯ ಉದ್ದೇಶ. ಗಣೇಶ ಮಂಟಪದಲ್ಲಿ ಮುಸಲ್ಮಾನರು, ಕ್ರಿಶ್ಚಿಯನ್ನರು ಒಂದೊಂದು ದಿನ ವಿಶೇಷ ಪೂಜೆ ಸಲ್ಲಿಸುತ್ತಾರೆ. ಆ ದಿನದ ಪ್ರಸಾದದ ವ್ಯವಸ್ಥೆಯನ್ನು ಅವರೇ ಮಾಡುತ್ತಿದ್ದಾರೆ. ಈ ಎಲ್ಲ ಕಾರಣಗಳಿಂದ ಹಿಂದು ಮಹಾಗಣಪತಿ ವಿಶೇಷತೆ ಪಡೆದುಕೊಂಡಿದೆ.

ಎಲ್ಲ ಮಹಿಳಾ ಮಂಡಳದವರು ಇದರಲ್ಲಿ ಭಾಗವಹಿಸುತ್ತಿದ್ದು, ನವಶಕ್ತಿ ಮಹಿಳಾ ಮಂಡಳವು ನೇತೃತ್ವ ವಹಿಸಿದೆ. ಉತ್ಸವದ ಯಶಸ್ಸಿಗಾಗಿ ಸಲಹಾ ಸಮಿತಿ ರಚಿಸಲಾಗಿದೆ.

ಆರೋಗ್ಯ ತಪಾಸಣೆ: ನಿತ್ಯವೂ ಒಂದು ಆರೋಗ್ಯ ಸಮಸ್ಯೆಗಾಗಿ ತಪಾಸಣೆ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಹೆಣ್ಣು ಮಕ್ಕಳಿಗೆ ರಂಗೋಲಿ, ಗಾಯನ ಸ್ಪರ್ಧೆ, ಯುವಕರಿಗೆ ಸ್ಲೋ ಬೈಕ್ ರೇಸ್ ಮುಂತಾದ ಸ್ಪರ್ಧೆಗಳನ್ನು ನಡೆಸಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net