ವ್ಯರ್ಥವಾಗುತ್ತಿದೆ ಹಿಂದು ರುದ್ರಭೂಮಿ

Btw_Rudrabhoomi
Published on

ಬಂಟ್ವಾಳ: ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಮೃತದೇಹಗಳ ಅಂತಿಮ ಸಂಸ್ಕಾರ ನಡೆಸಲು ಸ್ಮಶಾನಕ್ಕೆ ಜಮೀನು ಮೀಸಲಿಟ್ಟು ಮೂಲಸೌಲಭ್ಯ ಒದಗಿಸಬೇಕೆನ್ನುವ ನಿಯಮವಿದೆ. ಬಂಟ್ವಾಳ ತಾಲೂಕಿನ ನಾವೂರು ಗ್ರಾಮದಲ್ಲಿ ಸ್ಮಶಾನವೇನೋ ನಿರ್ಮಾಣಗೊಂಡಿದೆ. ಆದರೆ ಇನ್ನೂ ಲೋಕಾರ್ಪಣೆಯಾಗದೆ ಅದರಲ್ಲಿದ್ದ ಸ್ವತ್ತುಗಳು ಕಳ್ಳರ ಪಾಲಾಗುತ್ತಿದೆ. ನಾವೂರು ಗ್ರಾಮದಲ್ಲಿ ಸುಸಜ್ಜಿತ ಸ್ಮಶಾನ ನಿರ್ಮಿಸಲು ನಾವೂರು ಗ್ರಾಮ ಪಂಚಾಯಿತಿ 80 ಸೆಂಟ್ಸ್ ಜಾಗ ಮೀಸಲಿಟ್ಟು ಮೂರು ವರ್ಷಗಳ ಹಿಂದೆ ನಿರ್ಮಾಣ ಕಾಮಗಾರಿ ನಡೆಸಿತ್ತು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆರ್ಥಿಕ ಸಹಕಾರ, ಎನ್‌ಆರ್‌ಇಜಿ ಯೋಜನೆ ಹಾಗೂ ಪಂಚಾಯಿತಿಯ ಸ್ವಂತ ನಿಧಿಯಿಂದ ಸ್ಮಶಾನ ನಿರ್ಮಾಣ ಮಾಡಿತ್ತು. ಇದರಲ್ಲಿ ಒಂದು ಹೆಣ ಸುಡುವ ಚಿತಾಗಾರ, ಕಟ್ಟಿಗೆ ಶೇಖರಿಸಲು ಆರ್‌ಸಿಸಿ ಕಟ್ಟಡ ನಿರ್ಮಿಸಲಾಗಿದೆ. ವಿದ್ಯುತ್ ಮತ್ತು ನೀರಿನ ಸಂಪರ್ಕ ಬಾಕಿಯಾಗಿದ್ದು, ಅದನ್ನು ಪೂರ್ಣಗೊಳಿಸುವ ಕೆಲಸ ಆರಂಭಿಸಲಾಗಿತ್ತು. ಈ ನಡುವೆ ಸ್ಮಶಾನದಲ್ಲಿ ಹೆಣ ಸುಡುವ ಕಬ್ಬಿಣದ ಚಿತಾಗಾರದ ಎರಡು ಕಬ್ಬಿಣ ಬಕೆಟ್‌ಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಇದರಿಂದಾಗಿ ಸ್ಮಶಾನ ನಿರ್ಮಾಣಗೊಂಡರೂ ಜನರ ಉಪಯೋಗಕ್ಕೆ ಲಭ್ಯವಾಗದೆ ವ್ಯರ್ಥವಾಗುತ್ತಿದೆ. ಸ್ಮಶಾನದ ಸುತ್ತಮುತ್ತಲೂ ಕಳೆಗಿಡಗಳು ತುಂಬಿಕೊಂಡು ಲೋಕಾರ್ಪಣೆಯ ಮುನ್ನವೇ ಸ್ಮಶಾನ ಪೊದೆಯ ಮಧ್ಯೆ ಮರೆಯಾಗುತ್ತಿದೆ. ಈ ಸ್ಮಶಾನ ನಿರ್ಮಾಣಗೊಂಡರೆ ನಾವೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳೆಗೇಟು, ಮಲೆಬಾವ್, ಕೀಲ್ತೋಡಿ, ಕೊಪ್ಪಳ, ಕನಪಾದೆ, ಅಜಂಕೋಡಿ, ನಾವೂರ ಬೀದಿ, ಮೈಂದಲ, ಪಕಲಬೆಟ್ಟು, ನಾವೂರ ಅದರ್ಗಳ, ಸಜಂಕಬೆಟ್ಟು ಭಾಗದ ಜನರಿಗೆ ಅನುಕೂಲವಾಗಲಿದೆ. ಇದೀಗ ಈ ಪರಿಸರದ ಜನರು ಸ್ಮಶಾನಕ್ಕೆ ಬಂಟ್ವಾಳ ಬಡ್ಡಕಟ್ಟೆಯ ಹಿಂದು ರುದ್ರಭೂಮಿಯನ್ನು ಅವಲಂಬಿಸುತ್ತಿದ್ದಾರೆ.

ನಾವೂರದಲ್ಲಿ ಹಲವಾರು ವರ್ಷಗಳ ಹಿಂದೆ ಸರ್ಕಾರದಿಂದ ನೇತ್ರಾವತಿ ನದಿ ಬದಿಯಲ್ಲೇ ಹಿಂದು ರುದ್ರಭೂಮಿ ನಿರ್ಮಾಣಕ್ಕೆ ಸ್ಥಳ ಮಂಜೂರಾಗಿದೆ. ಇಲ್ಲಿ ಸ್ಮಶಾನದ ಅಗತ್ಯವೂ ಇದೆ. ನಿರ್ಮಾಣ ಮಾಡಿರುವ ಸ್ಮಶಾನ ಈಗ ದುಸ್ಥಿತಿಯಲ್ಲಿದ್ದು, ಇಲ್ಲಿನ ಗ್ರಾಮಸ್ಥರು ಬಂಟ್ವಾಳದ ಬಡ್ಡಕಟ್ಟೆಯಲ್ಲಿರುವ ಸ್ಮಶಾನವನ್ನೇ ಅವಲಂಬಿಸುವುದು ಅನಿವಾರ್ಯ. ಸ್ಮಶಾನದಲ್ಲಿ ಹೆಣ ಸುಡಲು ಅಳವಡಿಸಿರುವ ಕಬ್ಬಿಣ ಬಕೆಟ್ ಕಳವಾಗಿದ್ದು ಈ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ತಿಳಿಸಿದರೂ ಏನೂ ಪ್ರಯೋಜನವಾಗಿಲ್ಲ. ಸದಾನಂದ ಗೌಡ ನಾವೂರು, ಅಧ್ಯಕ್ಷರು, ನಾವೂರು ಸ್ಮಶಾನ ನಿರ್ವಹಣಾ ಸಮಿತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net