ಪ್ರೇಮಿಗಳ ದಿನಾಚರಣೆ ರದ್ದತಿಗೆ ಹಿಂದು ಜನಜಾಗೃತಿ ಸಮಿತಿ ಆಗ್ರಹ

07_HSN_04
Published on

ಹಾಸನ: ಪ್ರೇಮಿಗಳ ದಿನವಾಗಿ ಆಚರಿಸುತ್ತಿರುವ ಫೆ.14ರ ದಿನವನ್ನು ನಿಷೇಧಿಸಿ ಮಾತಾ-ಪಿತೃ ದಿನವಾಗಿ ಆಚರಿಸಲು ಆಗ್ರಹಿಸಿ ಹಿಂದು ಜನಜಾಗೃತಿ ಸಮಿತಿ ವತಿಯಿಂದ ಜಿಲ್ಲಾಡಳಿತಕ್ಕೆ ಶುಕ್ರವಾರ ಮನವಿ ಸಲ್ಲಿಸಲಾಯಿತು.

ಈ ವೇಳೆ ಸಮಿತಿಯ ಅಧ್ಯಕ್ಷ ಗೋವಿಂದರಾಜು ಮಾತನಾಡಿ, ಕೆಲವು ವರ್ಷಗಳಲ್ಲಿ ಫೆಬ್ರವರಿ 14ರ ದಿನವನ್ನು ವ್ಯಾಲಂಟೈನ್ ಡೇ ಎಂದು ಆಚರಿಸುವ ಪಾಶ್ಚಿಮಾತ್ಯರ ದುಷ್ಟ ಪ್ರವೃತ್ತಿಯು ಭಾರತದಲ್ಲಿಯೂ ವ್ಯಾಪಕವಾಗಿ ಪಸರಿಸಿದೆ. ಪಾಶ್ಚಾತ್ಯರ ವ್ಯಾಪಾರಿಕ ಲಾಭಕ್ಕಾಗಿ ಪ್ರೇಮದ ಹೆಸರಿನಲ್ಲಿ ಈ ವಿಕೃತ ಕಲ್ಪನೆಯ ಪ್ರಚಾರದಿಂದ ಯುವಪೀಳಿಗೆ ಭೋಗವಾದ ಮತ್ತು ಅನೈತಿಕತೆಯಲ್ಲಿ ಮುಳುಗುತ್ತಿದೆ ಎಂದರು.

ಇತ್ತೀಚೆಗೆ ವ್ಯಾಲಂಟೈನ್ ಡೇ ನೆಪದಲ್ಲಿ ಯುವತಿಯರ ಮೇಲೆ ಕಿರುಕುಳ ಹಾಗೂ ಹಿಂಸಾತ್ಮಕ ಘಟನೆಗಳು ಸಂಭವಿಸುತ್ತಿವೆ. ಇದರ ಜತೆಗೆ ನಡೆಯುವ ಪಾರ್ಟಿಗಳಲ್ಲಿ ಯುವಕ-ಯುವತಿಯರು ಮದ್ಯಪಾನ, ಧೂಮಪಾನ, ಮಾದಕ ವಸ್ತುಗಳ ಸೇವನೆ ಮುಂತಾದ ಅನಾಚಾರಗಳಲ್ಲಿ ತೊಡಗುವುದನ್ನು ಕಾಣಬಹುದಾಗಿದೆ. ಇದರ ಜತೆಗೆ, ಈ ದಿನ ಗರ್ಭನಿರೋಧಕ ಸಾಮಗ್ರಿಗಳ ಹೆಚ್ಚಿನ ಮಾರಾಟವು ಅನೈತಿಕ ಸಂಬಂಧಗಳ ಹೆಚ್ಚಳವನ್ನು ತೋರಿಸುತ್ತದೆ ಎಂದರು.

ಯುವತಿಯರನ್ನು ಪ್ರಭಾವಿಸಲು ವೇಗವಾಗಿ ವಾಹನ ಚಲಾಯಿಸುವುದರಿಂದ ಅಪಘಾತಗಳ ಸಂಖ್ಯೆಯೂ ಹೆಚ್ಚುತ್ತಿದೆ. ಅಲ್ಲದೆ, ಸುಳ್ಳು ಹೆಸರು ಹೇಳಿ ಯುವತಿಯರಿಗೆ ಮೋಸ ಮಾಡುವವರಿಂದ ಲವ್ ಜಿಹಾದ್ ಕೂಡ ನಡೆಯುತ್ತಿದೆ. ಶಾಲಾ-ಕಾಲೇಜುಗಳ ಆವರಣಗಳಲ್ಲಿ ಕಾನೂನು ಮತ್ತು ಶಿಸ್ತಿನ ಸಮಸ್ಯೆ ಉಂಟಾಗುತ್ತಿದೆ. ಜತೆಗೆ ಶೈಕ್ಷಣಿಕ ವಾತಾವರಣವೂ ಹಾಳಾಗುತ್ತಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ, ಭಾರತದಲ್ಲಿ ಪ್ರತಿ 16 ನಿಮಿಷಕ್ಕೊಮ್ಮೆ ಅತ್ಯಾಚಾರ ಸಂಭವಿಸುತ್ತಿದ್ದು, ಮಹಿಳೆಯರ ಮೇಲೆ ನಡೆಯುತ್ತಿರುವ ಕಿರುಕುಳದ ಭಯಾನಕ ಅಂಕಿ ಅಂಶಗಳು ತಕ್ಷಣ ಕಾನೂನು ಕ್ರಮಗಳ ಅಗತ್ಯತೆಯನ್ನು ತೋರಿಸುತ್ತವೆ ಎಂದರು.

ಈ ವೇಳೆ ಅನಂತರಾಜ್, ಸೋಮಣ್ಣ, ಸತೀಶ್, ವೇದಾ ಅಶೋಕ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net