

ಉಡುಪಿ: ದೇವಸ್ಥಾನಗಳು ಹಿಂದೂ ಧರ್ಮದ ಅತ್ಯಂತ ಪವಿತ್ರ ಕ್ಷೇತ್ರಗಳು. ಆದರೆ ಇತ್ತೀಚೆಗೆ ದೇವಸ್ಥಾನಗಳ ಮೇಲೆ ವಿವಿಧ ರೀತಿಯ ಆಕ್ರಮಣಗಳು ನಡೆಯುತ್ತಿವೆ. ಅದಕ್ಕಾಗಿ ದೇವಸ್ಥಾನಗಳಲ್ಲಿ ಧರ್ಮಪ್ರಸಾರ, ಭಕ್ತಾಧಿಗಳಿಗೆ ಮೂಲ ಸೌಕರ್ಯ ಒದಗಿಸುವುದು, ದೇವಸ್ಥಾನ ಪರಿಚಾರಕರ ಸಂಘಟನೆ ಮತ್ತು ವಸ್ತ್ರಸಂಹಿತೆಯನ್ನು ಅಳವಡಿಸುವ ನಿಟ್ಟಿನಲ್ಲಿ ಫೆ. 11ರಂದು ಕಿದಿಯೂರು ಹೋಟೆಲ್ ಮಾಧವ ಕೃಷ್ಣ ಸಭಾಭವನದಲ್ಲಿ ಜಿಲ್ಲಾ ಮಟ್ಟದ ದೇವಸ್ಥಾನ ಪರಿಷತ್ತು ಆಯೋಜಿಸಲಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ಕರ್ನಾಟಕ ರಾಜ್ಯ ಸಮನ್ವಯಕ ಚಂದ್ರ ಮೊಗವೀರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪರಿಷತ್ತಿನಲ್ಲಿ ಉಡುಪಿ ಜಿಲ್ಲೆಯಿಂದ 300 ಕ್ಕಿಂತ ಹೆಚ್ಚು ಆಮಂತ್ರಿತ ದೇವಸ್ಥಾನಗಳ ವಿಶ್ವಸ್ಥರು, ಅರ್ಚಕರು, ಪುರೋಹಿತರು, ಪ್ರತಿನಿಧಿಗಳು, ದೇವಸ್ಥಾನಗಳ ರಕ್ಷಣೆಗಾಗಿ ಹೋರಾಡುವ ವಕೀಲರು, ಧಾರ್ಮಿಕ ಚಿಂತಕರು ಪಾಲ್ಗೊಳ್ಳಲಿದ್ದಾರೆ. ಮಹಾಸಂಘವು ಕೇವಲ 6 ತಿಂಗಳುಗಳಲ್ಲಿ ದೇಶದಾದ್ಯಂತ 275 ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆ(ಡ್ರೆಸ್ ಕೋಡ್) ಜಾರಿಗೆ ತಂದಿದೆ. ಮಹಾಸಂಘದ ಅಭಿಯಾನದಿಂದ ಪ್ರೇರಿತಾರದ ಅನೇಕ ವಿಶ್ವಸ್ಥರು ದೇವಸ್ಥಾನಗಳಲ್ಲಿ ವಸ್ತ್ರ್ತ್ರಸಂಹಿತೆ ಜಾರಿಗೊಳಿಸುತ್ತಿದ್ದಾರೆ ಎಂದರು.
ದೇವಸ್ಥಾನಗಳನ್ನು ಸರ್ಕಾರೀಕರಣದಿಂದ ಮುಕ್ತಮಾಡುವುದು, ಅನಧಿಕೃತ ಹೆಸರಿನಲ್ಲಿ ದೇವಸ್ಥಾನಗಳನ್ನು ಧ್ವಂಸಗೊಳಿಸುವುದು, ಅನ್ಯಮತೀಯರಿಂದ ದೇವಸ್ಥಾನಗಳ ಭೂಮಿ ಅತಿಕ್ರಮಣ ವಿರುಧ್ಧ ಪರಿಹಾರೋಪಾಯ, ದೇವಸ್ಥಾನ ಮತ್ತು ತೀರ್ಥಕ್ಷೇತ್ರಗಳ ಪರಿಸರದಲ್ಲಿ ಮದ್ಯ-ಮಾಂಸ ನಿಷೇಧ, ರ್ನಿಲಕ್ಷಿತ ದೇವಸ್ಥಾನಗಳ ಜೀಣೋರ್ದ್ಧಾರ ಮುಂತಾದ ವಿಷಯಗಳ ಮೇಲೆ ಚರ್ಚೆ ನಡೆಯಲಿದೆ ಎಂದರು.
ಕೆರ್ವಾಸೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ರಮೇಶ ಕಾರ್ಣಿಕ್, ಅಂಬಾಗಿಲು ಪುತ್ತೂರಿನ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದ ಸಹ ಮೊಕ್ತೇಸರ ರಾಜೇಶ್ ಶೇಟ್, ಹಿಂದೂ ಜನಜಾಗೃತಿ ಸಮಿತಿ ಜಿಲ್ಲಾ ಸಮಿತಿ ಸೇವಕ ವಿಶ್ವನಾಥ ನಾಯಕ್ ಮುಂತಾದವರು ಉಪಸ್ಥಿತರಿದ್ದರು.