ದೇವಸ್ಥಾನಗಳು ಸರ್ಕಾರದ ಅಧೀನಕ್ಕೆ ತರವಲ್ಲ: ಶೀರೂರು ಶ್ರೀ

UDP-11-3-Temple
Published on

ಉಡುಪಿ: ದೇವಸ್ಥಾನಗಳು ಸರ್ಕಾರದ ಅಧೀನದಲ್ಲಿದ್ದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಪೂಜೆ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳ ಸಂದರ್ಭ ಪಾರಂಪರಿಕ ಪದ್ಧತಿ ಅನುಸರಿಸಲು ಆಗದು. ಹೀಗಾಗಿ ಯಾವುದೇ ದೇವಸ್ಥಾನವನ್ನೂ ಸರ್ಕಾರದ ಅಧೀನಕ್ಕೆ ತರಲು ಬಿಡಬಾರದು. ಎಲ್ಲರೂ ಸಂಟಿತರಾದರೆ ದೇವಸ್ಥಾನಗಳನ್ನು ಸರ್ಕಾರದ ಮುಷ್ಟಿಯಿಂದ ಹೊರತರಲು ಸಾಧ್ಯ ಎಂದು ಶೀರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಹೇಳಿದರು.

ಉಡುಪಿಯಲ್ಲಿ ಕರ್ನಾಟಕ ದೇವಸ್ಥಾನ, ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ ಹಾಗೂ ಹಿಂದು ಜನಜಾಗೃತಿ ಸಮಿತಿ ಭಾನುವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ದೇವಸ್ಥಾನ ಪರಿಷತ್​ನ ಸಭೆ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಸನಾತನ ಸಂಸ್ಥೆಯ ಧರ್ಮಪ್ರಚಾರಕ ರಮಾನಂದ ಗೌಡ ಮಾತನಾಡಿ, ಸನಾತನ ಧರ್ಮದಲ್ಲಿ ದೇವಸ್ಥಾನಗಳು ಅತ್ಯಂತ ಪವಿತ್ರ ಸ್ಥಳಗಳು. ದೇವತೆಗಳು ವಾಸ ಮಾಡುವ ಚೈತನ್ಯಮಯ ಕ್ಷೇತ್ರವಾಗಿದೆಯಲ್ಲದೆ, ನಮ್ಮ ಧರ್ಮದ ಪ್ರಾಣವಾಗಿದೆ. ದೇಗುಲಗಳು ಸದೃಢವಾಗಿದ್ದರೆ ಧರ್ಮ, ರಾಷ್ಟ್ರ, ಸಮಾಜವೂ ಸದೃಢವಾಗಿರುತ್ತದೆ. ಹೀಗಾಗಿ ದೇವಸ್ಥಾನಗಳ ರಕ್ಷಣೆಗೆ ನಾವೆಲ್ಲ ಒಗ್ಗೂಡಬೇಕಿದೆ. ಸಂಘಟನಾತ್ಮಕ ಹೋರಾಟದಿಂದ ಯಶಸ್ಸು ಖಂಡಿತ ಎನ್ನುವುದು ರಾಮ ಮಂದಿರ ನಿಮಾರ್ಣದಿಂದ ಸಾಬೀತಾಗಿದೆ ಎಂದರು.

ಅವ್ಯವಹಾರದ ಆಗರ
ಕರ್ನಾಟಕ ದೇವಸ್ಥಾನ, ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ಸಂಯೋಜಕ ಮೋಹನ ಗೌಡ ಮಾತನಾಡಿ, ಕರ್ನಾಟಕದಲ್ಲಿ 34 ಸಾವಿರ ದೇವಸ್ಥಾನಗಳನ್ನು ಸರ್ಕಾರ ನಿಯಂತ್ರಣ ಮಾಡುತ್ತಿದೆ. ಇದರಲ್ಲಿ ಹೆಚ್ಚಿನ ದೇವಸ್ಥಾನಗಳು ಅವ್ಯವಹಾರದ ಆಗರವಾಗಿವೆ. ಅನೇಕ ದೇವಸ್ಥಾನಗಳು ಶಿಥಿಲಾವಸ್ಥೆಯಲ್ಲಿವೆ. ಎಲ್ಲ ದೇಗುಲಗಳನ್ನು ಸರ್ಕಾರದ ಮುಷ್ಟಿಯಿಂದ ಹೊರತರಲು ನಾವೆಲ್ಲ ಒಟ್ಟಾಗಿ ಹೋರಾಟ ಮಾಡಬೇಕಿದೆ ಎಂದರು.

ಕೆರ್ವಾಶೆ ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ, ನಿವೃತ್ತ ಸೇನಾಧಿಕಾರಿ ರಮೇಶ ಕಾರ್ಣಿಕ್​ ಮಾತನಾಡಿ, ದೇಶದೊಟ್ಟಿಗೆ ನಮ್ಮ ಸಂಸತಿ, ಸನಾತನ ಧರ್ಮದ ರಕ್ಷಣೆಯೂ ಆಗಿದೆ. ದೇವಸ್ಥಾನವೆಂದರೆ ನಮ್ಮೆಲ್ಲರ ಸಂಸತಿ, ಸಮಾಜದ ಒಗ್ಗಟ್ಟು ಕಾಪಾಡುವ ತಾಣ. ಸನಾತನ ಸಂಸತಿ ಉಳಿಸಬೇಕಾದರೆ ನಮ್ಮ ದೇವಸ್ಥಾನಗಳೆಲ್ಲ ಸಂಪೂರ್ಣ ಅಭಿವೃದ್ಧಿ ಆಗಬೇಕು ಎಂದರು.

ಮೂಡುಬಿದಿರೆ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಉಮೇಶ ಪೈ, ಶ್ರೀ ವಿದ್ಯಾವಂತ ಆಚಾರ್ಯ ಮೊದಲಾದವರು ಅಭಿಪ್ರಾಯ ವ್ಯಕ್ತಪಡಿಸಿದರು. 160ಕ್ಕೂ ಅಧಿಕ ದೇವಸ್ಥಾನದ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ದೇವಸ್ಥಾನಗಳ ನಿರ್ವಹಣೆಯಲ್ಲಿ ಬರುವ ಕಾನೂನು ಸಮಸ್ಯೆಗಳಿಗೆ ವಕೀಲರು ಕಾನೂನು ಸಲಹೆ ನೀಡಿದರು.

100ಕ್ಕೂ ಅಧಿಕ ದೇಗುಲದಲ್ಲಿ ವಸ್ತ್ರಸಂಹಿತೆ
ಸಭಾ ಕಾರ್ಯಕ್ರಮದ ಬಳಿಕ ನಡೆಸಿದ ಗುಂಪು ಚರ್ಚೆಯಲ್ಲಿ, ಉಡುಪಿ ಜಿಲ್ಲೆಯ 100ಕ್ಕೂ ಅಧಿಕ ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆ ಜಾರಿಗೊಳಿಸಲು ನಿರ್ಧಾರ ಮಾಡಲಾಯಿತು. ದೇವಸ್ಥಾನಗಳಲ್ಲಿ ಧರ್ಮಶಿಕ್ಷಣ ವರ್ಗ ಪ್ರಾರಂಭಿಸುವ ವಿಷಯಗಳ ಬಗ್ಗೆಯೂ ರ್ನಿಣಯ ಕೈಗೊಳ್ಳಲಾಯಿತು. ಚರ್ಚೆಯ ಬಳಿಕ ಒಂಬತ್ತು ಬೇಡಿಕೆಯಿರುವ ಠರಾವು ಸಿದ್ಧಪಡಿಸಿ ಎಲ್ಲರ ಅನುಮೋದನೆ ಪಡೆಯಲಾಯಿತು. ದೇವಸ್ಥಾನಗಳ ರಕ್ಷಣೆ ಹಿನ್ನೆಲೆಯಲ್ಲಿ ಈ ಠರಾವನ್ನು ಮುಖ್ಯಮಂತ್ರಿಗೆ ಹಾಗೂ ಹಿಂದು ಧಾರ್ಮಿಕ ದತ್ತಿ ಇಲಾಖೆ ಸಚಿವರಿಗೆ ನೀಡಿ, ರ್ನಿಣಯಗಳನ್ನು ಅನುಷ್ಠಾನಕ್ಕೆ ತರುವಂತೆ ಒತ್ತಾಯಿಸಲು ನಿರ್ಧಾರ ಕೈಗೊಳ್ಳಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net