

ಮಡಿಕೇರಿ:
ಹಳೇ ಪ್ರಕರಣಗಳನ್ನು ಕೆದಕಿ ಹಿಂದುಪರ ಕಾರ್ಯಕರ್ತರನ್ನು ಧಮನಿಸಲು ರಾಜ್ಯ ಸರ್ಕಾರ ಹೊರಟಿದೆ ಎಂದು ಆರೋಪಿಸಿ ಜಿಲ್ಲೆಯ ಮಡಿಕೇರಿ, ವೀರಾಜಪೇಟೆ ಹಾಗೂ ಕುಶಾಲನಗರ ಡಿ.ವೈ.ಎಸ್.ಪಿ. ಕಚೇರಿ ಎದುರು ಶನಿವಾರ ಹಿಂದು ಜಾಗರಣ ವೇದಿಕೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಹಿಂದುಪರ ಸಂಘಟನೆಗಳ ಕಾರ್ಯಕರ್ತರು ಮಡಿಕೇರಿ, ವೀರಾಜಪೇಟೆ ಹಾಗೂ ಕುಶಾಲನಗರ ಡಿ.ವೈ.ಎಸ್.ಪಿ. ಕಚೇರಿ ಮುಂಭಾಗ ಒಟ್ಟು ಸೇರಿ ಪ್ರತಿಭಟಿಸಿ ನಂತರ ಆಯಾಯ ತಾಲೂಕು ಡಿವೈಎಸ್‌ಪಿ ಗಳಿಗೆ ಮನವಿ ಪತ್ರ ಅರ್ಪಿಸಲಾಯಿತು.
ದೇಶದ ಬಹುಸಂಖ್ಯಾತ ಹಿಂದುಗಳಿಗೆ ಆದರ್ಶವಾಗಿರುವ ಶ್ರೀ ರಾಮನ ಭವ್ಯ ಮಂದಿರ ನಿರ್ಮಾಣದ ಅಭಿಲಾಷೆ 500 ವರ್ಷಗಳ ಹೋರಾಟದ ಬಳಿಕ ಇದೀಗ ಸಾಕಾರಗೊಂಡು ಜ. 22ಕ್ಕೆ ಪ್ರಾಣ ಪ್ರತಿಷ್ಠೆಯಾಗಲಿದೆ. ಶ್ರೀರಾಮ ಮಂದಿರ ಉದ್ಘಾಟನೆಯ ಹಿನ್ನೆಲೆಯಲ್ಲಿ, ದೇಶದೆಲ್ಲೆಡೆ ಸಂತಸ ಮನೆ ಮಾಡಿದೆ. ಹಬ್ಬದ ಸಡಗರದ ವಾತಾವರಣ ನಿರ್ಮಾಣಗೊಂಡಿದೆ. ಆದರೆ ಕರ್ನಾಟಕ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸÀರ್ಕಾರ ಬಹುಸಂಖ್ಯಾತ ಹಿಂದು ಬಾಂಧವರೆಲ್ಲರೂ ಉತ್ಸವದ ಸಂಭ್ರಮದಲ್ಲಿರುವ ಈ ಸಮಯದಲ್ಲಿ ಹಿಂದು ಸಮಾಜದ ಮೇಲೆಯೇ ಗಧಾ ಪ್ರಹಾರ ಮಾಡಲು ಹೊರಟಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದೆರು.
ತುಷ್ಟೀಕರಣದ ಓಟ್ ಬ್ಯಾಂಕ್ ರಾಜಕೀಯಕ್ಕಾಗಿ ಹಿಂದುಗಳ ವಿಷಯಗಳಲ್ಲಿ ಹಿಂದು ವಿರೋಧಿಯಂತೆ ವರ್ತಿಸುವ ಸಿದ್ದರಾಮಯ್ಯ ಮತ್ತವರ ಕಾಂಗ್ರೆಸ್ ಅನುಯಾಯಿಗಳಿಗೆ ಅಯೋಧ್ಯೆಯಲ್ಲಿ ಹಿಂದುಗಳ ಭವ್ಯವಾದ ಶ್ರೀರಾಮ ಮಂದಿರ ನಿರ್ಮಾಣ ಅರಗಿಸಿಕೊಳ್ಳಲಾಗುತ್ತಿಲ್ಲ. ಹಿಂದು ದ್ವೇಷದ ಭಾಗವಾಗಿ ಹುಬ್ಬಳ್ಳಿಯಲ್ಲಿ ರಾಮಜನ್ಮಭೂಮಿ ಹೋರಾಟದಲ್ಲಿ ಭಾಗವಹಿಸಿದ್ದ ಕಾರ್ಯಕರ್ತರನ್ನು ಗುರುತಿಸಿ ಅವರ ಮೇಲಿದ್ದ 30 ವರ್ಷಗಳಷ್ಟು ಹಿಂದಿನ ಹಳೆಯ ಪ್ರಕರಣವನ್ನು ಕೆದಕಿ ಅದಕ್ಕೆ ಮರುಜೀವ ನೀಡಿ ಕಾನೂನುಬಾಹಿರವಾಗಿ ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಪ್ರತಿಭಟನೆ ಹಿನ್ನೆಲೆಯಲ್ಲಿ ಮೂರು ಕಡೆಗಳಲ್ಲೂ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಜಿಲ್ಲೆಯ ಹಿಂದು ಜಾಗರಣಾ ವೇದಿಕೆ ಪ್ರಮುಖರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.