

ಚಿಕ್ಕಬಳ್ಳಾಪುರ: ರಾಮಭಕ್ತರ ಬೈಕ್ ರ್ಯಾಲಿ, ದೇವಾಲಯಗಳಲ್ಲಿ ವಿಶೇಷ ಪೂಜೆ, ಸಾಮೂಹಿಕ ಭಜನೆ, ತಂಪು ಆಹಾರ ಪದಾರ್ಥಗಳ ವಿತರಣೆ ಸೇರಿದಂತೆ ಜಿಲ್ಲಾದ್ಯಂತ ಶ್ರೀರಾಮನವಮಿಯನ್ನು ಭಾನುವಾರ ವಿವಿಧ ಪೂಜಾ ಕಾರ್ಯಕ್ರಮಗಳೊಂಂದಿಗೆ ಆಚರಿಸಲಾಯಿತು.
ಹಬ್ಬದ ಹಿನ್ನೆಲೆಯಲ್ಲಿ ಜಿಲ್ಲಾ ಕೇಂದ್ರದ ಪ್ರಮುಖ ರಸ್ತೆಗಳಲ್ಲಿ ಧ್ವಜ, ಬಂಟಿಂಗ್ಸ್ ಗಳಿಂದ ಕೇಸರಿಯ ವಾತಾವರಣ ನಿರ್ಮಾಣವಾಗಿತ್ತು. ಇಲ್ಲಿನ ಕೋದಂಡರಾಮಸ್ವಾಮಿ, ಜೀವಾಂಜನೇಯ ಸ್ವಾಮಿ, ಪೇಟೆ ಆಂಜನೇಯಸ್ವಾಮಿ, ಪಂಚಮುಖಿ ಆಂಜನೇಯಸ್ವಾಮಿ, ಇಂದಿರಾನಗರದ ಅಭಯ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಬೆಳಗ್ಗೆ ದೇವರಿಗೆ ರಾಭಿಷೇಕ, ಪಂಚಾಮೃತ ಅಭಿಷೇಕ, ಸಹಸ್ರನಾಮಾರ್ಚನೆ ನೆರವೇರಿಸಿ ವಿಶೇಷ ಅಲಂಕಾರ ಮಾಡಲಾಯಿತು. ಅಲ್ಲಲ್ಲಿ ಉತ್ಸವ ಮೂರ್ತಿಯನ್ನು ಹೂವಿನ ಪಲ್ಲಕ್ಕಿಯಲ್ಲಿರಿಸಿ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ದೇವಸ್ಥಾನಗಳಿಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ, ದೇವರ ದರ್ಶನ ಪಡೆದರು.
*ಶ್ರೀಗಳ ನೇತೃತ್ವದಲ್ಲಿ ಪೂಜೆ
ತಾಲೂಕಿನ ಸೂಲಾಲಪ್ಪ ದಿನ್ನೆಯ ವೀರಾಂಜನೇಯ ಸ್ವಾಮಿ ದೇವಸ್ಥಾನಕ್ಕೆ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ನೇತೃತ್ವದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಕೈಗೊಳ್ಳಲಾಯಿತು. ಸ್ವತಃ ಶ್ರೀಗಳು ಶ್ರೀರಾಮ ಹಾಗೂ ವೀರಾಂಜನೇಯಸ್ವಾಮಿಗೆ ಅಭಿಷೇಕ ನೆರವೇರಿಸಿ, ವಿಶೇಷ ಪೂಜೆ ಸಲ್ಲಿಸಿದರು. ಶ್ರೀರಾಮನವಮಿಯ ಆಚರಣೆ ಬಗ್ಗೆ ಭಕ್ತರಿಗೆ ಆರ್ಶೀವಚನ ನೀಡಿದ ಬಳಿಕ ಹೆಸರುಬೇಳೆ, ಪಾನಕ ವಿತರಿಸಿದರು.
*ಬೈಕ್ ರ್ಯಾಲಿ
ಭಗತ್ ಸಿಂಗ್ ಚಾರಿಟಬಲ್ ಟ್ರಸ್ಟ್ ಹಾಗೂ ಮುಖಂಡ ಅಗಲಗುರ್ಕಿ ರು ನೇತೃತ್ವದಲ್ಲಿ ಕೇಸರಿಧ್ವಜಗಳನ್ನು ಹಿಡಿದುಕೊಂಡು ಯುವಕ ಪಡೆ ಘೋಷಣೆಗಳೊಂದಿಗೆ ಬೈಕ್ ರ್ಯಾಲಿ ನಡೆಸಿತು.
ಇಲ್ಲಿನ ವೀರಾಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಚಾಲನೆ ಸಿಗುತ್ತಿದ್ದಂತೆ ತಂಡೋಪ ತಂಡವಾಗಿ ಸವಾರರು ವಾಹನದಲ್ಲಿ ಸಾಗಿದರು.