

ಮಡಿಕೇರಿ: ಹಿಂದುಗಳು ಆರ್ಥಿಕತೆ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಬೇಕೆಂದು ವರ್ಲ್ಡ್ ಹಿಂದು ಎಕನಾಮಿಕ್ ಫೋರಂ ಸಂಸ್ಥಾಪಕರಾಗಿರುವ ವಿಶ್ವ ಹಿಂದು ಪರಿಷತ್ ಅಂತಾರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ವಾಮಿ ವಿಜ್ಞಾನನಂದ ಕರೆ ನೀಡಿದರು.
ಗಾಳಿಬೀಡಿನಲ್ಲಿರುವ ಆಹಾನ್ ಹಿಲ್ಸ್ ಹಾಲಿ ರೆಸಾರ್ಟ್‌ನಲ್ಲಿ ಸೋಮವಾರ ಆಯೋಜಿಸಲಾಗಿದ್ದ ಹಿಂದು ಎಕನಾಮಿಕ್ ಫೋರಂ ಮಡಿಕೇರಿ ಘಟಕ ಉದ್ಘಾಟನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮುಸ್ಲಿಮರು, ಕ್ರಿಶ್ಚಿಯನರು ವ್ಯಾಪಾರೋದ್ಯಮ ಮೂಲಕ ಆರ್ಥಿಕಾಭಿವೃದ್ಧಿ ಸಾಧಿಸುತ್ತಿದ್ದಾರೆ. ಆದರೆ, ಹಿಂದುಗಳು ದೇವಾಲಯ ನಿರ್ಮಾಣ ಮಾಡಿಕೊಂಡು ಪೂಜೆ- ಪುನಸ್ಕಾರಕ್ಕೆ ಹೆಚ್ಚು ಒತ್ತು ಕೊಡುತ್ತಿದ್ದಾರೆ. ವ್ಯಾಪಾರೋದ್ಯಮ ಮೂಲಕ ಆರ್ಥಿಕ ವೃದ್ಧಿಯತ್ತ ಹಿಂದುಗಳು ಗಮನ ಹರಿಸಬೇಕೆಂದರು.
ಯುವಜನತೆ ವ್ಯಾಪಾರೋದ್ಯಮದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಇದರಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ ಸಿಗಲಿದೆ. ಸರ್ಕಾರ ಸಹಾಯ ಮಾಡುತ್ತದೆ ಎಂಬ ನಿರೀಕ್ಷೆಯಲ್ಲಿ ಇರುವುದಕ್ಕಿಂತ ಸ್ವ ಉದ್ಯೋಗ ಪ್ರಾರಂಭಿಸಬೇಕು. ತಳಮಟ್ಟದಿಂದ ಜಾಗತಿಕ ಮಟ್ಟದವರೆಗೂ ಸಂಪರ್ಕಿ ಸಾಧಿಸು ವಂತೆ ಮಾಡಲು ಹಿಂದು ಎಕಾನಮಿಕ್ ಫೋರಂ ಅಸ್ತಿತ್ವಕ್ಕೆ ತರಲಾಗಿದೆ. ಹಿಂದುಗಳು ಆರ್ಥಿಕತೆ ಬಗ್ಗೆ ಉದಾಸೀನತೆ ಹೊಂದಿದ್ದಾರೆ. ಆರ್ಥಿಕತೆ ಬಗ್ಗೆ ಮುತುವರ್ಜಿ ವಹಿಸಲು ಹಾಗೂ ಪರಸ್ಪರ ಸಹಕಾರಕ್ಕಾಗಿ ಫೋರಂ ರಚಿಸಲಾಗಿದೆ ಎಂದು ಸ್ವಾಮೀಜಿ ಹೇಳಿದರು.
ಗುಣಮಟ್ಟದ ಉತ್ಪನ್ನ ಮತ್ತು ಸೇವೆ ನೀಡುವುದರಿಂದ ವ್ಯಾಪಾರದಲ್ಲಿ ನಂಬಿಕೆ ಮೂಡುತ್ತದೆ. ಸಾಂಪ್ರದಾಯಿಕ ವ್ಯಾಪಾರ ಬದಲಾಗಿದ್ದು, ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು. ವಿವಿಧ ಕಾಲಘಟ್ಟದಲ್ಲಿನ ಬದಲಾವಣೆಗೆ ಹೊಂದಿಕೊಳ್ಳಬೇಕೆಂದು ಅಮೆಜಾನ್ ಪ್ರಮುಖರಾದ ರಾಜೇಶ್ ಕೆ. ಪ್ರಸಾದ್ ಕರೆ ನೀಡಿದರು.
ಹಿಂದು ಎಕಾನಮಿಕ್ ಫೋರಂ ಮೂಲಕ ದೇಶದ ವಿವಿಧ ಪ್ರತಿಷ್ಠಿತ ವ್ಯಾಪಾರೋದ್ಯಮಿಗಳನ್ನು ಭೇಟಿ ಮಾಡಲು ಮತ್ತು ಚರ್ಚಿಸಲು ಸಾಧ್ಯ ವಾಗಿದೆ. ಇದು ವ್ಯಾಪಾರೋದ್ಯಮಕ್ಕೆ ಹೆಚ್ಚು ಸಹಕಾರಿಯಾಗಿದೆ ಎಂದು ಡಿಟಿಡಿಸಿ ರಾಷ್ಟ್ರೀಯ ಪ್ರಮುಖರಾದ ಅಶ್ವಿನಿ ಕುಮಾರ್ ಗುಪ್ತಾ ಹೇಳಿದರು.
ಭಾರತೀಯ ಆಹಾರ ಸಂಸ್ಕರಣೆ, ಸಂರಕ್ಷಣೆ ಮತ್ತು ಪ್ಯಾಕೇಜಿಂಗ್‌ಗಾಗಿ ಹಲವಾರು ತಂತ್ರಜ್ಞಾನ ಅಭಿವೃದ್ಧಿ ಪಡಿಸಲಾಗಿದೆ. ತಯಾರಾದ ಆಹಾರ ಎಲ್ಲಾ ಹವಮಾನ, ಪರಿಸ್ಥಿತಿಗಳಡಿ ಕನಿಷ್ಠ ೬ ತಿಂಗಳಿಂದ ಒಂದು ವರ್ಷದವರೆಗೆ ಜೀವತಾವಧಿ ಹೊಂದಿದೆ. ಅಭಿವೃದ್ಧಿ ಪಡಿಸಿದ ಎಲ್ಲಾ ಆಹಾರಗಳು ಸೇವಿಸಲು ಸಿದ್ಧವಿರುವಂತೆ ತಯಾರಿಸಲಾಗಿದೆ ಎಂದು ಮೈಸೂರಿನ ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯ ಹಿರಿಯ ವಿಜ್ಞಾನಿ ಡಾ.ನವೀನ್ ಹೇಳಿದರು.
ವೇದಿಕೆಯಲ್ಲಿ ಹಿಂದು ಎಕಾನಮಿಕ್ ಫೋರಂ ಜಿಲ್ಲಾಧ್ಯಕ್ಷ ಡಾ.ಚೌರೀರ ಶ್ಯಾಮ್ ಅಪ್ಪಣ್ಣ ಇದ್ದರು. ಉಳ್ಳಿಯಡ ಗಂಗಮ್ಮ ಪ್ರಾರ್ಥಿಸಿದರು. ಕುಪ್ಪಂಡ ಛಾಯಾ ನಂಜಪ್ಪ ಸ್ವಾಗತಿಸಿದರು.
ಟಿಪ್ಪು ಸೋಲಿಸಿದ್ದೀರಾ… ಆದರೆ…
ಕೊಡಗಿನವರು ಟಿಪ್ಪುವನ್ನು ಹಲವು ಬಾರಿ ಸೋಲಿಸಿದ್ದೀರಾ. ಆದರೆ, ನಿಮ್ಮೂರಿನಲ್ಲಿ ಮಸೀದಿ ಸಂಖ್ಯೆ ಹೆಚ್ಚಾಗಿರುವುದು ಕಳವಳಕಾರಿ ವಿಚಾರ ಎಂದು ವಿಶ್ವ ಹಿಂದು ಪರಿಷತ್ ಅಂತಾರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ವಾಮಿ ವಿಜ್ಞಾನನಂದ ಎಚ್ಚರಿಕೆ ನೀಡಿದರು.
ಸತತವಾಗಿ ಕೊಡಗಿನವರ ಎದುರು ಟಿಪ್ಪು ಸೋತಿರುವುದು ಗಮನಕ್ಕೆ ಬಂದಿದೆ. ಕೊಡಗಿಗೆ ಮೈಸೂರಿನಿಂದ ಬರುವ ದಾರಿಯಲ್ಲಿ ಸಾಕಷ್ಟು ಮಸೀದಿ ಇರುವುದನ್ನು ಗಮನಿಸಿದ್ದೇನೆ. ಇದು ಅಪಾಯಕಾರಿ ಎಂದು ಎಚ್ಚರಿಸಿದರು.
ಕೊಡಗಿನ ಬಹುತೇಕ ಕಾಫಿ ಬೆಳೆಗಾರರು ಹಿಂದುಗಳಾಗಿದ್ದಾರೆ. ಆದರೆ, ವ್ಯಾಪಾರಿಗಳು ಮುಸ್ಲಿಮರಾಗಿದ್ದಾರೆ. ಉತ್ಪಾದಕರು, ಗ್ರಾಹಕರು ಹಿಂದುಗಳಾಗಿದ್ದು, ಮುಸ್ಲಿಮರು ವ್ಯಾಪಾರದ ಮೂಲಕ ಹೆಚ್ಚಿನ ಆರ್ಥಿಕ ಲಾಭ ಪಡೆಯುತ್ತಿದ್ದಾರೆ. ಕಾಫಿ ವ್ಯಾಪಾರ ಮಾಡುವತ್ತ ಹಿಂದು ಗಳು ಗಮನ ಹರಿಸಬೇಕೆಂದರು.
ಕೊಡಗಿನ ಜನ ಯಾವ ಕಾರಣಕ್ಕೂ ತಮ್ಮ ಜಾಗ ಮಾರಾಟ ಮಾಡಬಾರದು. ಅಸ್ಸಾಂ ರಾಜ್ಯದವರು ಒಗ್ಗಟ್ಟಿನಿಂದ ಮೊಘಲರನ್ನು ಓಡಿಸಿ ದ್ದರು. ಆದರೆ, ಅಸ್ಸಾಂನಲ್ಲಿರುವ ವಿವಿಧ ಪಂಗಡಗಳ ನಡುವಿನ ಒಡಕನಿಂದಾಗಿ ಅಲ್ಲಿ ಈಗ ಮುಸ್ಲಿಂ ಪ್ರಾಬಲ್ಯ ಹೆಚ್ಚಾಗಿದೆ. ಅದೇ ರೀತಿಯ ಪರಿಸ್ಥಿತಿ ಕೊಡಗಿಗೆ ಬರುತ್ತದೆ ಎಂದು ಸ್ವಾಮಿ ವಿಜ್ಞಾನನಂದ ಎಚ್ಚರಿಸಿದರು.
ಫೋರಂ ಕೊಡಗು ಘಟಕ
ಹಿಂದು ಎಕನಾಮಿಕ್ ಫೋರಂ ಜಿಲ್ಲಾಧ್ಯಕ್ಷರಾಗಿ ಡಾ.ಚೌರೀರ ಶ್ಯಾಮ್ ಅಪ್ಪಣ್ಣ ಅವರನ್ನು ನೇಮಕ ಮಾಡಲಾಗಿದೆ. ಫೋರಂ ಉಪಾಧ್ಯಕ್ಷ ರಾಗಿ ಸುರೇಶ್ ಮುತ್ತಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಮಚ್ಚಮಾಡ ಅನೀಶ್ ಮಾದಪ್ಪ, ಜಂಟಿ ಕಾರ್ಯದರ್ಶಿಯಾಗಿ ಮಲ್ಲೇಂಗಡ ಸೋಮಣ್ಣ, ಖಜಾಂಚಿಯಾಗಿ ಕುಪ್ಪಂಡ ರಾಜಪ್ಪ ನೇಮಕಗೊಂಡಿದ್ದಾರೆ.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕಿಶೋರ್ ಬಿದ್ದಪ್ಪ, ಟಿ.ಕೆ. ಸುಧೀರ, ಲಕ್ಷ್ಮಿ ರೆಡ್ಡಿ, ನಾಗೇಶ್ ಮೋಹನ್, ಚೇಮೀರ ನಾಜ್ ಚಂಗಪ್ಪ, ರಂಗಸ್ವಾಮಿ ಅವರನ್ನು ನೇಮಕ ಮಾಡಲಾಗಿದೆ.