

ಆಲ್ದೂರು: ಹಿಂದು ಸಂಸ್ಕೃತಿ, ನಮ್ಮ ಸಂಸ್ಕಾರಗಳನ್ನು ಉಳಿಸಿ, ಬೆಳಸಿ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡಲು ಇಂತಹ ಧಾರ್ಮಿಕ ಕಾರ್ಯಕ್ರಮಗಳ ಅವಶ್ಯಕತೆ ಇದೆ ಎಂದು ಕನ್ನಡದ ಪೂಜಾರಿ ಹಿರೇಮಗಳೂರು ಕಣ್ಣನ್ ಹೇಳಿದರು.
ಮಹಾಗಣಪತಿ ದೇವಸ್ಥಾನದಲ್ಲಿ ಪ್ರತಿಷ್ಟಾಪಿಸಿರುವ ಹಿಂದು ದುರ್ಗಾ ದೇವಿಯ ನವರಾತ್ರಿ ಉತ್ಸವದಲ್ಲಿ ಏರ್ಪಡಿಸಿದ್ದ ಸಂಸಾರ, ಸಂಸ್ಕಾರ ಚಿಂತನ -ಮಂಥನ ಕಾರ್ಯಕ್ರಮದಲ್ಲಿ ಮಾತನಾಡಿ, ಮನುಷ್ಯ ಸಂಸ್ಕಾರ, ಸಂಸ್ಕೃತಿಗಳನ್ನು ಕಳೆದುಕೊಂಡರೆ ಬದುಕು ಶೂನ್ಯವಾಗುತ್ತದೆ. ಸಂದರ ಬದುಕಿನ ತಳಹದಿಗೆ ಸಂಸ್ಕಾರವೇ ಆಧಾರ ಎಂದರು.
ಮನೆ ಮೊದಲ ಪಾಠ ಶಾಲೆ. ತಾಯಿ ಗುರು. ಮಕ್ಕಳಿಗೆ ಸಂಸ್ಕಾರದ ವಿದ್ಯೆ ಮನೆಯಲ್ಲಿ ತಾಯಿಯಿಂದ ಆರಂಭವಾಗಬೇಕು. ಬಾಲ್ಯದಲ್ಲಿ ದೊರೆತ ಉತ್ತಮ ಸಂಸ್ಕಾರ ಶಿಕ್ಷಣ ಮಕ್ಕಳನ್ನು ಸಮಾಜದಲ್ಲಿ ಸುಸಂಸ್ಕೃತವಂತರನ್ನಾಗಿ ಮಾಡುತ್ತದೆ ಎಂದರು. ಸಂಸಾರ ಚನ್ನಾಗಿರಬೇಕಾದರೆ ನಮ್ಮ ತಂದೆ , ತಾಯಿಯನ್ನು ಗೌರವದಿಂದ ಕಾಣಬೇಕು ಎಂದರು.
ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಬಿಲ್ವಪತ್ರೆಗೆ ಹೆಚ್ಚು ಮಹತ್ವವಿದೆ, ಮರದಿಂದ ಬಿಡಿಸಿ ಶಿವನಿಗೆ ಅರ್ಪಿಸಿದರೆ ಪೂಜೆಗೆ ಅರ್ಪಿತವಾಗುತ್ತದೆ, ಒಣಗಿದ ಬಿಲ್ವಪತ್ರೆಯನ್ನು ಸುಟ್ಟರೆ ಹಣೆಗೆ ವಿಭೂತಿಯಾಗುತ್ತದೆ. ಭಾರತೀಯ ಸಂಸ್ಕೃತಿಯನ್ನು ಆಡು ಭಾಷೆಗಳ ಮೂಲಕ, ಒಗಟು ಗಾದೆಗಳ ಮೂಲಕ ಮನಮುಟ್ಟುವಂತೆ ತಿಳಿಸಿದರು.
ಮಹಾಗಣಪತಿ ದೇವಸ್ಥಾನ ಸಮಿತಿಯಿಂದ ಪೂಜಾರಿ ಹಿರೇಮಗಳೂರು ಕಣ್ಣನ್ ಗೌರವಿಸಲಾಯಿತು. ದೇವಸ್ಥಾನ ಸಮಿತಿ ಅಧ್ಯಕ್ಷ ಸುರೇಶ್,ಕಾರ್ಯದರ್ಶಿ ರವಿಕುಮಾರ್, ಗಿರೀಶ್, ಪ್ರಮುಖರಾದ ತುಡಕೂರು ಮಂಜು, ಅನೂಪ್, ಭವ್ಯ ನಟೇಶ್, ಶಶಿ ಸನಾತನ, ಪುನೀತ್, ಭಾನುಪ್ರಕಾಶ್, ರಾಘವೇಂದ್ರ,ದರ್ಶನ್, ಭರತ್, ಸುರೇಶ್ ಇದ್ದರು.