

ಮಂಗಳೂರು: ರಾಜ್ಯದಲ್ಲಿ ಹಿಂದೂ ಧಾರ್ಮಿಕ ಕಾರ್ಯಕ್ರಮ, ಮೆರವಣಿಗೆಗಳ ಸಂದರ್ಭದಲ್ಲಿ ಶ್ರೀರಾಮ ಸೇನೆಯಿಂದಲೇ ರಕ್ಷಣೆ ನೀಡಲಾಗುವುದು. ಶಸ್ತ್ರಸಜ್ಜಿತ 50 ಮಂದಿ ಶ್ರೀರಾಮ ಸೇನೆ ಕಾರ್ಯಕರ್ತರು ರಕ್ಷಣೆ ನೀಡುವ ಕೆಲಸ ಮಾಡಲಿದ್ದಾರೆ ಎಂದು ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಹೇಳಿದ್ದಾರೆ.
ಮಂಗಳೂರಿನಲ್ಲಿ ಶ್ರೀರಾಮ ಸೇನೆ ಜಿಲ್ಲಾ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಅವರು ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದರು. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಕೃಪೆಯಿಂದ ಜಿಹಾದಿ ಶಕ್ತಿಗಳ ಹದ್ದು ಮೀರುತ್ತಿದೆ. ಮುಸಲ್ಮಾನ ಪುಂಡರು ನಾಗಮಂಗಲ, ದಾವಣಗೆರೆಯಲ್ಲಿ ಗಣಪತಿ ಮೆರವಣಿಗೆ ಮೇಲೆ ಕಲ್ಲು ತೂರಿದ್ದಾರೆ. ಪೆಟ್ರೋಲ್ ಬಾಂಬ್ ಹಾಕುವಷ್ಟರ ಮಟ್ಟಿಗೆ ಬಂದು ನಿಂತಿದ್ದಾರೆ. ಇದಕ್ಕೆ ಕಾಂಗ್ರೆಸ್ ಸರ್ಕಾರವೇ ನೇರ ಕಾರಣ ಎಂದವರು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರದಿಂದ ಹಿಂದೂ ಕಾರ್ಯಕ್ರಮಗಳಿಗೆ ರಕ್ಷಣೆ ಇಲ್ಲ ಎಂಬುದು ಸಾಬೀತಾಗಿದೆ. ಹಾಗಾಗಿ ಮುಂಬರುವ ಗಣೇಶೋತ್ಸವ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಶಸ್ತ್ರ ಸಜ್ಜಿತ ಶ್ರೀರಾಮ ಸೇನೆಯ ಕಾರ್ಯಕರ್ತರು ರಕ್ಷಣೆ ನೀಡಲಿದ್ದಾರೆ. ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಕೈಯ್ಯಲ್ಲಿ ಕಲ್ಲು, ತಲವಾರು ಹಿಡಿಯಲು ಹಿಂದೂಗಳಿಗೆ ಗೊತ್ತಿಲ್ಲ ಎಂದು ಭಾವಿಸಬೇಡಿ ಎಂದು ಎಚ್ಚರಿಕೆ ನೀಡಿದರು.
ಗೃಹಸಚಿವರು ರಾಜೀನಾಮೆ ನೀಡಬೇಕು
ನಾಗಮಂಗಲ ಘಟನೆ ಆಕಸ್ಮಿಕ ಎಂದು ಗೃಹಸಚಿವರು ಹೇಳಿಕೆ ಕೊಟ್ಟಿದ್ದಾರೆ. ಅವರಿಗೆ ನಾಚಿಕೆ, ಮಾನ ಮರ್ಯಾದೆ ಇದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ವ್ಯವಸ್ಥಿತವಾಗಿ ಸಂಚು ರೂಪಿಸಿ ನಡೆಸಿದ ಗಲಭೆ ಆಕಸ್ಮಿಕ ಹೇಗಾಗುತ್ತದೆ? ರಾಜ್ಯ ಸರ್ಕಾರ ಸಂಪೂರ್ಣವಾಗಿ ಅವರ ಜತೆ ನಿಂತಿದೆ. ಈಗಿರುವುದು ನಮ್ಮ ಸರ್ಕಾರ ಎಂದು ಮುಸ್ಲಿಂ ಪುಂಡರು ಹೇಳುತ್ತಿದ್ದಾರೆ. ಇವರ ಉದ್ಧಟತನಕ್ಕೆ ರಾಜ್ಯ ಸರ್ಕಾರ ಕಾರಣ ಎಂದು ಕುಲಕರ್ಣಿ ಆರೋಪಿಸಿದರು.
ತಿರುಪತಿ ತಿಮ್ಮಪ್ಪನ ಶಾಪ ತಟ್ಟಲಿದೆ
ತಿರುಪತಿ ತಿಮ್ಮಪ್ಪನ ಪ್ರಸಾದ ವಿಚಾರದಲ್ಲಿ ಬಹಳ ದೊಡ್ಡ ದ್ರೋಹ ಮಾಡಿದ್ದಾರೆ. ಇಡೀ ಹಿಂದೂ ಸಮಾಜಕ್ಕೆ ಆಘಾತ ಉಂಟು ಮಾಡುವಂತೆ ಮಾಡಿದ್ದಾರೆ. ಈ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು. ದೇಶದ ಎಲ್ಲಾ ಹಿಂದೂ ಸಂಘಟನೆಗಳು ಸೇರಿ ಜಗನ್ ಮನೆಗೆ ಮುತ್ತಿಗೆಗೆ ಚಿಂತನೆ ನಡೆಯುತ್ತಿದೆ. ರಾಜ್ಯದಲ್ಲೂ ಈ ಕುರಿತು ಚಿಂತನೆ ನಡೆಯುತ್ತಿದೆ. ತಿರುಪತಿಯಲ್ಲಿ ತಕ್ಷಣಕ್ಕೆ ಒಂದು ಸುಸಜ್ಜಿತ ಲ್ಯಾಬ್ ಆಗಬೇಕು. ಮುಂಬರುವ ದಿನಗಳಲ್ಲಿ ಜಗನ್ ಗೆ ಹಿಂದೂ ಸಮಾಜ ತಕ್ಕ ಉತ್ತರ ನೀಡಲಿದೆ. ಉದ್ದೇಶಪೂರ್ವಕವಾಗಿ ಇದನ್ನು ಮಾಡಲಾಗಿದೆ. ತಿರುಪತಿ ತಿಮ್ಮಪ್ಪನ ಶಾಪದಿಂದ ಜಗನ್ ತಂದೆಯ ಹೆಣ ಕೂಡ ಸಿಗಲಿಲ್ಲ. ಹಿಂದೂ ಧರ್ಮದ ವಿರುದ್ಧ ಷಡ್ಯಂತ್ರ ಮಾಡಿದವರ ಸಾವು ಇದೇ ರೀತಿ ಬರುತ್ತದೆ. ಇಡೀ ಹಿಂದೂ ಸಮಾಜಕ್ಕೆ ಆಘಾತವನ್ನುಂಟು ಮಾಡಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಗಂಗಾಧರ ಕುಲಕರ್ಣಿ ಒತ್ತಾಯಿಸಿದರು.