

ಮಂಗಳೂರು : ನಗರದ ಹೊರ ವಲಯದ ಬಜ್ಪೆ ಬಳಿ ನಡೆದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಗೆ ವಹಿಸಿ ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಡಿಸಿದೆ.
ಪ್ರಕರಣದಲ್ಲಿ ನಿಷೇಧಿತ ಪಿಎಫ್‌ಐ ಸಂಘಟನೆ ಕಾರ್ಯಕರ್ತರು ಶಾಮೀಲಾಗಿರುವ ಶಂಕೆ ಇದೆ. ವ್ಯಕ್ತಿಗಳನ್ನು ಗುರಿಯಾಗಿಸಿ ಕೊಲೆ ನಡೆಸುತ್ತಿರುವುದರಿಂದ ಜಿಲ್ಲೆಯಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಎನ್‌ಐಎಗೆ ವಹಿಸುವಂತೆ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳು ಸರ್ಕಾರವನ್ನು ವ್ಯಾಪಕವಾಗಿ ಆಗ್ರಹಿಸಿದ್ದವು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಎನ್‌ಐಎ ಕಾಯ್ದೆ 2008ರ ಪ್ರಕಾರ ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ತನಿಖೆ ನಡೆಸುವಂತೆ ಎನ್‌ಐಎಗೆ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ: ಮೇ 1 ರಂದು ರಾತ್ರಿ ಸುಹಾಸ್ ಶೆಟ್ಟಿ ತನ್ನ ಸಹಚರರ ಜತೆ ಕಾರಿನಲ್ಲಿ ತೆರಳುತ್ತಿದ್ದಾಗ ತಂಡವೊಂದು ಬಜ್ಪೆಯ ಕಿನ್ನಿಪದವು ಎಂಬಲ್ಲಿ ಪ್ರಯಾಣಿಸುತ್ತಿದ್ದ ಕಾರಿಗೆ ಪಿಕಪ್ ಡಿಕ್ಕಿ ಹೊಡೆಸಿ, ತಲವಾರುಗಳಿಂದ ಬರ್ಬರವಾಗಿ ಕಡಿದು ಕೊಲೆ ಮಾಡಲಾಗಿತ್ತು. ಸುಹಾಸ್ ಜತೆಗಿದ್ದ ಇಬ್ಬರು ಸಹಚರರಿಗೂ ಗಾಯವಾಗಿತ್ತು. ಈ ಪ್ರಕರಣ ರಾಜ್ಯಾದ್ಯಂತ ವ್ಯಾಪಕ ಸದ್ದು ಮಾಡಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮಂಗಳೂರು ಪೊಲೀಸರು 5 ತಂಡಗಳನ್ನು ರಚಿಸಿ ಕೃತ್ಯದಲ್ಲಿ ಭಾಗಿಯಾದ ಒಟ್ಟು 12 ಮಂದಿ ಆರೋಪಿಗಳನ್ನು ಇದುವರೆಗೆ ಬಂಧಿಸಿದ್ದಾರೆ.
ಈ ಕೊಲೆ ಪ್ರವೀಣ್ ನೆಟ್ಟಾರು ಕೊಲೆಗೆ ಪ್ರತೀಕಾರವಾಗಿ ನಡೆದಿದ್ದ ಸುರತ್ಕಲ್‌ನ ಪಾಝಿಲ್ ಹತ್ಯೆಗೆ ಪ್ರತೀಕಾರವಾಗಿ ನಡೆದಿದೆ ಎಂದು ಪೊಲೀಸ್ ತನಿಖೆಯಿಂದ ತಿಳಿದು ಬಂದಿತ್ತು. ಪಾಝಿಲ್ ಹತ್ಯೆಯಲ್ಲಿ ಸುಹಾಸ್ ಶೆಟ್ಟಿ ಆರೋಪಿಯಾಗಿದ್ದ ಕಾರಣ ಪಾಝಿಲ್ ಸಹೋದರ ಆರೋಪಿಗಳಿಗೆ ಹಣಕಾಸು ಸಹಾಯವನ್ನು ಮಾಡಿರುವುದು ಬೆಳಕಿಗೆ ಬಂದಿತ್ತು.
ಬಿಜೆಪಿ ನಿಯೋಗದ ಒತ್ತಡ: ಈ ಪ್ರಕರಣದಲ್ಲಿ ಪೊಲೀಸ್ ತನಿಖೆಯಿಂದ ನ್ಯಾಯ ಸಿಗಲು ಸಾಧ್ಯವಿಲ್ಲ. ಆದ್ದರಿಂದ ಎನ್‌ಐಎ ತನಿಖೆಗೆ ಒಪ್ಪಿಸುವಂತೆ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸಿದ್ದವು. ರಾಜ್ಯ ಬಿಜೆಪಿ ನಿಯೋಗ ಸುಹಾಸ್ ಶೆಟ್ಟಿ ಹೆತ್ತವರನ್ನು ಕರೆದುಕೊಂಡು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತ್ತು. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್, ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮತ್ತು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಬಿಜೆಪಿ ಸಂಸದರು, ಶಾಸಕರು ರಾಜ್ಯಪಾಲರಿಗೆ ನಾಲ್ಕು ಪುಟಗಳ ಲಿಖಿತ ರೂಪದಲ್ಲಿ ಮನವಿ ಸಲ್ಲಿಸಿದ್ದರು. ಅಲ್ಲದೆ, ಪ್ರಕರಣದ ತನಿಖೆಯನ್ನು ಎನ್‌ಐಎ ಗೆ ನೀಡುವಂತೆ ಸುಹಾಸ್ ಶೆಟ್ಡಿ ಪೋಷಕರು ಸರ್ಕಾರವನ್ನು ಒತ್ತಾಯಿಸಿದ್ದರು.