

ಕಲಬುರಗಿ: ಒಂದು ನಿರ್ಧಿಷ್ಟ ಕೋಮಿನ ವ್ಯಕ್ತಿಗಳು ಹಿಂದುಪರ ಸಂಘಟನೆಯ ವ್ಯಕ್ತಿಯೊಬ್ಬನನ್ನು ಮಾರಕಾಸ್ತ್ರಗಳಿಂದ ಹೊಡೆದು, ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಘಟನೆ ಕಲಬುರಗಿಯ ಬಾಲ ಮಂದಿರದ ಬಳಿ ಬುಧವಾರ ನಡೆದಿದೆ.
ಶೀತಲ್ ಜೈನ್ (35) ಕೊಲೆಯಾದ ವ್ಯಕ್ತಿ. ಈತನು ಹಿಂದುಪರ ಸಂಘಟನೆ ಕಾರ್ಯಕರ್ತನೆಂದು ಹೇಳಲಾಗುತ್ತಿದ್ದು ಕಲಬುರಗಿ ನಗರದ ದೇವಿ ನಗರ ನಿವಾಸಿಯಾಗಿದ್ದನು.
ಆಫ್ರಿನ್ ಅನ್ನೋ ಮಹಿಳೆ ಜೊತೆ ಶೀತಲ್ ಜೈನ್ ಬುಧವಾರ ಸಂಜೆ ಬಾಲ ಮಂದಿರಕ್ಕೆ ಬಂದಿದ್ದನು. ಆಫ್ರೀನ್ ಅವರ ಇಬ್ಬರು ಮಕ್ಕಳು ಬಾಲ ಮಂದಿರದಲ್ಲಿದ್ದರು. ಮಕ್ಕಳನ್ನು ಕರೆದುಕೊಂಡು ಹೋಗಲು ಬಾಲ ಮಂದಿರಕ್ಕೆ ಶೀತಲ್ ಜೈನ್ ಜೊತೆ ಆಫ್ರೀನ್ ಬಂದಿದ್ದರು.
ಈ ವೇಳೆ ಆಫ್ರಿನ್ ಅವರ ಸಹೋದರರು ಕುಲುಸುಂಬಿ, ಅಮ್ಜದ್ ಮತ್ತು ಮೆಹಬೂಬ್ ಎನ್ನುವರು ಶೀತಲ್ ಜೈನ್ ಮೇಲೆ ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿ, ಬಳಿಕ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಕುರಿತು ಕಲಬುರಗಿಯ ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.