

ಯಳಂದೂರು : ತಾಲೂಕಿನ ಅಗರ-ಮಾಂಬಳ್ಳಿ ಗ್ರಾಮದಲ್ಲಿ ಶ್ರೀ ಹಿಂಡಿಮಾರಮ್ಮನ ಕೊಂಡೋತ್ಸವ ಭಾನುವಾರ ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಬೆಳಗ್ಗೆಯಿಂದಲೇ ಹಿಂಡಿಮಾರಮ್ಮದೇವಿಗೆ ವಿಶೇಷ ಅಲಂಕಾರ, ಹೋಮ, ಹವನಗಳನ್ನು ಮಾಡುವ ಮೂಲಕ ವಿಶೇಷ ಪೂಜೆ ಸಲ್ಲಿಸಲಾಯಿತು. ಸಂಜೆ 5 ಗಂಟೆಗೆ ತಮ್ಮಡಿಗಳು ದೇವಿಯ ಉತ್ಸವ ಮೂರ್ತಿಯೊಂದಿಗೆ ರಾಷ್ಟ್ರೀಯ ಹೆದ್ದಾರಿ-209 ಪಕ್ಕದಲ್ಲಿ ಹಾಕಿದ್ದ ಕೊಂಡದ ಸ್ಥಳಕ್ಕೆ ಹೋಗಿ ಕೊಂಡಹಾಯ್ದರು.
ತಮ್ಮಡಿಗಳಲ್ಲದೇ ಕೊಂಡಕ್ಕೆ ಹರಕೆ ಹೊತ್ತು ಬಂದಿದ್ದ ನೂರಾರು ಭಕ್ತರು ತಮ್ಮಡಿಗಳ ನಂತರ ಕೊಂಡ ಹಾಯ್ದರು. ಭಕ್ತರು ತಮ್ಮ ಬಾಯಿಗೆ ಬೀಗ ಹಾಕಿಕೊಂಡು ಹರಕೆ ತೀರಿಸಿದರು. ಯಳಂದೂರು ಹಾಗೂ ಕೊಳ್ಳೇಗಾಲ ತಾಲೂಕುಗಳ ವಿವಿಧ ಗ್ರಾಮಗಳಿಂದ ಸಾವಿರಾರು ಜನರು ಆಗಮಿಸಿ ಆಚರಣೆಯನ್ನು ಕಣ್ತುಂಬಿಕೊಂಡರು.