ಹಿಂದಿ ಭಾಷಿಕರು ಕನ್ನಡ ಕಲಿಯಿರಿ: ಪ್ರೊ.ಎಸ್.ಎಲ್. ಭೈರಪ್ಪ

mysore
Published on

ಮೈಸೂರು: ರಾಜ್ಯದಲ್ಲಿ ಹಿಂದಿ ಭಾಷಿಕರ ಕುರಿತು ತಿರಸ್ಕಾರ ಭಾವನೆ ಮೂಡಿದ್ದು, ಇದನ್ನು ಹೊಗಲಾಡಿಸಲು ಇಲ್ಲಿಗೆ ಬರುವವರು ಆರು ತಿಂಗಳಲ್ಲಿ ಕನ್ನಡ ಕಲಿಯಬೇಕು ಎಂದು ಹಿರಿಯ ಕಾದಂಬರಿಕಾರ ಪ್ರೊ.ಎಸ್.ಎಲ್.ಭೈರಪ್ಪ ಹೇಳಿದರು.


ಸಿದ್ಧಾರ್ಥ ನಗರದಲ್ಲಿರುವ ಕೇಂದ್ರೀಯ ಹಿಂದಿ ಸಂಸ್ಥಾನದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಗೋಸ್ವಾಮಿ ತುಳಸಿದಾಸ ಜಯಂತಿ, ಗೋಸ್ವಾಮಿ ತುಳಸಿದಾಸ ಸಾರಸ್ವತ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.


ಕರ್ನಾಟಕಕ್ಕೆ ಬಂದು 50 ವರ್ಷವಾದರೂ ಅನೇಕ ಹಿಂದಿ ಭಾಷಿಕರು ಕನ್ನಡ ಕಲಿಯುತ್ತಿಲ್ಲ. ಕೇಳಿದರೆ ‘ಕನ್ನಡ ಎಂದರೆ ನನಗೆ ಗೊತ್ತಿಲ್ಲ’ ಎಂದು ಹೇಳುತ್ತಾರೆ. ಬೆಂಗಳೂರಿನಲ್ಲಿ ಇಂತಹವರ ಸಂಖ್ಯೆ ಅಧಿಕ. ಇದರಿಂದ ಹಿಂದಿ ಭಾಷೆ ಮತ್ತು ಹಿಂದಿ ಭಾಷಿಕರ ಕುರಿತು ಕನ್ನಡಿಗರಿಗೆ ತಿರಸ್ಕಾರ ಭಾವನೆ ಮೂಡಿದೆ ಎಂದು ಖಾರವಾಗಿ ಹೇಳಿದರು.


ಕನ್ನಡ ಕಲಿಕೆಗೆ ಹಿಂದೇಟು ಹಾಕುವುದು ಉತ್ತಮ ಬೆಳವಣಿಗೆಯಲ್ಲ. ಇದು ದೇಶದ ಏಕತೆಗೂ ಧಕ್ಕೆ ಉಂಟು ಮಾಡುತ್ತದೆ. ಆದ್ದರಿಂದ ರಾಜ್ಯದಲ್ಲಿರುವ ಎಲ್ಲ ಅನ್ಯ ಭಾಷಿಕರು ಕನ್ನಡವನ್ನು ಕಲಿತು ಮಾತನಾಡುವಂತಾಗಬೇಕು ಎಂದರು.


ಇನ್ನೂ ಹಿಂದಿ ಭಾಷೆ ಬೆಳೆದಿಲ್ಲ:


ದೇಶದಲ್ಲಿ ಕನ್ನಡ ಸೇರಿದಂತೆ ಇತರ ಪ್ರಾದೇಶಿಕ ಭಾಷಿಕರಿಗಿಂತ ಹಿಂದಿ ಭಾಷಿಕರು ಹೆಚ್ಚು. ಯೂರೋಪ್‌ನಲ್ಲಿರುವ ವಿವಿಧ ಭಾಷೆಗಳ ಭಾಷಿಕರು, ಅಮೆರಿಕಾದಲ್ಲಿರುವ ಇಂಗ್ಲಿಷ್ ಭಾಷಿಕರಿಗಿಂತ ಹಿಂದಿ ಭಾಷಿಕರ ಸಂಖ್ಯೆ ಅಧಿಕ. ಆದರೆ ಈವರೆಗೂ ಹಿಂದಿ ಭಾಷೆ ಬೆಳೆದಿಲ್ಲ. ಭಾಷಾ ಮಾಧ್ಯಮದಲ್ಲೇ ಜ್ಞಾನ, ವಿಜ್ಞಾನವೂ ಸೃಷ್ಟಿಯಾಗಬೇಕು. ಆಗ ಮಾತ್ರ ಇದು ಸಹಜವಾಗಿ ಬೆಳೆಯುತ್ತದೆ ಎಂದರು.


ಇದೀಗ ಕನ್ನಡ, ಹಿಂದಿ ಸೇರಿದಂತೆ ಇತರ ಪ್ರಾದೇಶಿಕ ಭಾಷೆಗಳು ಯಾರಿಗೂ ಬೇಡವಾಗಿದೆ. ಬರೀ ಇಂಗ್ಲಿಷ್ ಬೇಕಾಗಿದೆ. ಇದರಿಂದ ವಿವಿಧ ಸ್ಥಳೀಯ ಭಾಷೆಗಳು ಸೊರಗಿವೆ ಎಂದು ಕಳವಳ ವ್ಯಕ್ತಪಡಿಸಿದರು.


ಶಿಕ್ಷಣಕ್ಕಾಗಿ ಜರ್ಮನಿ ದೇಶಕ್ಕೆ ತೆರಳುವ ವ್ಯಕ್ತಿ ಕಡ್ಡಾಯವಾಗಿ ಆರು ತಿಂಗಳ ಒಳಗೆ ಜರ್ಮನಿ ಭಾಷೆ ಕಲಿಯಬೇಕು. ಬಳಿಕ ಪದವಿ, ಸಂಶೋಧನೆ ಇನ್ನಿತರ ಶೈಕ್ಷಣಿಕ ಚಟುವಟಿಕೆಗಳನ್ನು ಜರ್ಮನಿ ಭಾಷೆಯಲ್ಲೇ ತೊಡಬೇಕು. ಇದರಿಂದ ಆ ಭಾಷೆ ಬೆಳೆದಿದೆ. ಈ ಭಾಷೆ ಅಲ್ಲಿ ಅನಿವಾರ್ಯವಾಗಿದೆ. ಆ ರೀತಿ ಪರಿಸ್ಥಿತಿ ಭಾರತದಲ್ಲೂ ಸೃಷ್ಟಿಸಬೇಕಿದೆ. ಇಲ್ಲವಾದರೆ, ಹಿಂದಿ, ಕನ್ನಡ ಸೇರಿದಂತೆ ಯಾವುದೇ ಪ್ರಾದೇಶಿಕ ಭಾಷೆಗಳು ಬೆಳೆಯುವುದು ಕಷ್ಟಕರ ಎಂದರು.


ತಾಂತ್ರಿಕ ಶಿಕ್ಷಣ ಪಡೆದು ವಿದೇಶಕ್ಕೆ ಹೋಗಬೇಕು. ಇಲ್ಲವೇ ಡಾಕ್ಟರ್, ಇಂಜಿನಿಯರ್, ಸಾರ್ಫ್ಟ್‌ವೇರ್ ಇಂಜಿನಿಯರ್ ಆಗಬೇಕೆಂಬ ವ್ಯಾಮೋಹ ಹುಟ್ಟಿಕೊಂಡಿದೆ. ಸಿಟಿ ಜನರ ಮಕ್ಕಳಷ್ಟೇ ಇಂತಹ ಹುದ್ದೆಗೇರಬೇಕು. ಹಳ್ಳಿ ಮಕ್ಕಳು ವಿದೇಶಕ್ಕೆ ಹೋಗಬಾರದೆ? ಇಂಗ್ಲಿಷ್ ಕಲಿಯಬಾರದೆ? ಎಂಬ ಪ್ರಶ್ನಿಸುತ್ತಾರೆ. ಇದು ಪರೋಕ್ಷವಾಗಿ ಇಂಗ್ಲಿಷ್ ಬಲಗೊಳ್ಳಲು ಕಾರಣವಾಗುತ್ತಿದೆ ಎಂದರು.


ಹೈಕೋಟ್, ಸುಪ್ರೀಂಕೋರ್ಟ್‌ನಲ್ಲೂ ಇಂಗ್ಲಿಷ್ ಭಾಷೆ ಬಳಕೆಯಿದ್ದು, ಅಲ್ಲಿ ಪ್ರಾದೇಶಿಕ ಭಾಷೆಗಳಿಗೆ ಅವಕಾಶವಿಲ್ಲದಂತಾಗಿದೆ. ಈ ರೀತಿ ಅನೇಕ ತೊಡಕುಗಳು ನಮ್ಮ ದೇಶದಲ್ಲಿ ಇವೆ ಎಂದರು.


ನನಗೆ ಹಿಂದಿ ಪ್ರಕಾಶಕರು ದುಡ್ಡು ಕೊಡುತ್ತಿಲ್ಲ; ಲೆಕ್ಕವನ್ನೂ ಕೊಡುತ್ತಿಲ್ಲ


ನಾನು ಬರೆದ ಅನೇಕ ಕಾದಂಬರಿಗಳು ಹಿಂದಿ ಭಾಷೆಗೆ ತರ್ಜುಮೆಯಾಗಿವೆ. ಲಕ್ಷಾಂತರ ಪ್ರತಿಗಳೂ ಮಾರಾಟವಾಗಿವೆ. ಆದರೆ, ಲೆಕ್ಕವನ್ನೇ ಕೊಡುತ್ತಿಲ್ಲ, ಹಣವನ್ನೂ ನೀಡುತ್ತಿಲ್ಲ. ಇವರೆಲ್ಲ ದೇಶ, ಹಿಂದು ಸಮಾಜದ ಉದ್ಧಾರ ಮಾಡುವವರು ಎಂದು ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದರು.


ನನ್ನ ಕಾದಂಬರಿ ಮುದ್ರಿಸಿರುವ ಕನ್ನಡ ಪ್ರಕಾಶಕರು ಪ್ರಾಮಾಣಿಕರು. ನಿಯಮಿತವಾಗಿ ನನಗೆ ಹಣ ಕೊಡುತ್ತಾರೆ, ಜತೆಗೆ, ತೆರಿಗೆ ಪಾವತಿಸುತ್ತಾರೆ. ಆದರೆ, ಹಿಂದಿ ಪ್ರಕಾಶಕರಿಂದ ಹೀಗಾಗುತ್ತಿಲ್ಲ. ನನ್ನ 15 ಕೃತಿಗಳು ಹಿಂದಿ ಭಾಷೆಯಲ್ಲೇ 78 ಮರು ಮುದ್ರಣಗೊಂಡಿವೆ. ಮೊದಲು ಮುದ್ರಣಕ್ಕೆ 25 ಸಾವಿರ ರೂ. ಕೊಟ್ಟು ಸುಮ್ಮನಾಗುತ್ತಾರೆ. ಬಳಿಕ ಏನು ಕೊಡಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.


ನಾನು ದೇಶ-ವಿದೇಶಕ್ಕೆ ಹೋದಾಗ ಅಲ್ಲಿಯ ಓದುಗರು ನನ್ನ ಕೃತಿ ಕುರಿತು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ನಿಮಗೆ ಹೇಗೆ ದೊರೆಯಿತು ಎಂದರೆ ಹಿಂದಿ ಭಾಷೆಯಲ್ಲಿ ಎನ್ನುತ್ತಾರೆ. ಅದನ್ನೇ ಹಿಂದಿ ಪ್ರಕಾಶಕರಿಗೆ ಕೇಳಿದ್ದರೆ, ‘ನಿಮ್ಮ ಕೃತಿಗೆ ಬೇಡಿಕೆಯೇ ಇಲ್ಲ. ಅದಕ್ಕೆ ಮುದ್ರಣ ಮಾಡಿಲ್ಲ’ ಎಂಬ ಸಬೂಬು ಹೇಳುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.


ಮುದ್ರಣಕ್ಕೆ ಬೇಕಾದ ಕಾಗದದ ಕೃತಕ ಅಭಾವ ಸೃಷ್ಟಿಸಲಾಗುತ್ತಿದೆ. ಇದರಿಂದ ಕಾಗದ ದರ ಹೆಚ್ಚಿಸಿ ಲಾಭ ಮಾಡಿಕೊಳ್ಳುತ್ತಾರೆ. ಇಂತಹವರು ಹೇಗೆ ದೇಶಭಕ್ತರಾಗಲು ಸಾಧ್ಯ? ಎಂದು ಪ್ರಶ್ನಿಸಿದರು.


ಸಾಹಿತಿ ಪ್ರಧಾನ ಗುರುದತ್ತ, ಸಂಸ್ಕೃತ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಅಹಲ್ಯ ಶರ್ಮ, ಎನ್‌ಸಿಇಆರ್‌ನ ರಾಜೇಂದ್ರ ಸಾಹ, ಶಾರದಾ ವಿಲಾಸ ಔಷಧ ಕಾಲೇಜಿನ ಪ್ರಾಂಶುಪಾಲ ಹನುಮಂತ ಆಚಾರ್, ಮೈವಿವಿ ಪ್ರಾಧ್ಯಾಪಕ ಪ್ರವೀಣ್ ಮೇಲಳ್ಳಿ, ಕೇಂದ್ರೀಯ ಹಿಂದಿ ಸಂಸ್ಥಾನದ ಮೈಸೂರಿನ ನಿರ್ದೇಶಕ ಡಾ.ಯೋಗೇಂದ್ರ ಮಿಶ್ರಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net