

ಮೂಲ್ಕಿ: ರಾಷ್ಟ್ರ ಭಾಷೆಯಾಗಿರುವ ಹಿಂದಿ ಉತ್ತಮ ಸಾಹಿತ್ಯಾತ್ಮಕ, ನಮ್ಮ ದೈನಂದಿನ ಜೀವನದಲ್ಲಿ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಹೊಂದಿದೆ ಎಂದು ಮಂಗಳೂರು ವಿಶ್ವವಿದ್ಯಾಲಯ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥೆ ಡಾ.ಸುಮಾ ಟಿ.ರೋಡನವರ್ ಹೇಳಿದರು.
ಹಿಂದಿ ದಿವಸ್ ಕಾರ್ಯಕ್ರಮದಡಿ ಮೂಲ್ಕಿ ವಿಜಯ ಕಾಲೇಜಿನ ಗ್ರಂಥಾಲಯದಲ್ಲಿ ಹಿಂದಿ ಪುಸ್ತಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ಟಿಸಿಎಸ್ ವಿಭಾಗೀಯ ಪ್ರಬಂಧಕ ಪುಷ್ಪರಾಜ್ ಚೌಟ ಮಾತನಾಡಿ, ಅರ್ಥಪೂರ್ಣ ಬದುಕಿಗಾಗಿ, ನಮ್ಮ ದೇಶ ಹೆಮ್ಮೆಪಡುವ ಭಾಷೆಯಾದ ಹಿಂದಿಯು ಪ್ರಪಂಚದಲ್ಲಿ ಹೆಚ್ಚು ಮಾತನಾಡುವ ಭಾಷೆಗಳಲ್ಲಿ ಒಂದಾಗಿದೆ ಎಂದರು.
ಕಾಲೇಜು ಪ್ರಾಂಶುಪಾಲ ಪ್ರೊ.ವೆಂಕಟೇಶ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಪದವಿಪೂರ್ವ ಕಾಲೇಜು ಪ್ರಾಂಶುಪಾಲೆ ಪಮೀದಾ ಬೇಗಂ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಹಿಂದಿ ಭಾಷೆಯ ಇತಿಹಾಸ, ಜ್ಞಾನಪೀಠ ಪುರಸ್ಕೃತ ಕವಿಗಳ ಪರಿಚಯವನ್ನು ಪವರ್‌ಪಾಯಿಂಟ್ ಪ್ರೆಸೆಂಟೇಶನ್ ಮೂಲಕ ತೋರಿಸಲಾಯಿತು. ಹಿಂದಿ ಉಪನ್ಯಾಸಕಿ ವಿನುತಾ ನಾಯಕ್, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಲತೀಫಾ ಫಲಕ್ ಕಾರ್ಯಕ್ರಮ ನಿರೂಪಿಸಿದರು. ಗ್ರಂಥಪಾಲಕಿ ಅರ್ಚನಾ ರಾವ್ ಸ್ವಾಗತಿಸಿದರು. ಪ್ರತೀಕ್ಷಾ ಪ್ರಾಸ್ತಾವಿಕ ಮಾತನಾಡಿದರು. ಅನನ್ಯ ಆರ್.ಶೆಟ್ಟಿ ವಂದಿಸಿದರು.