ಹಿಂಡಲಗಾ ಕಾರಾಗೃಹದಲ್ಲಿ ಜಾಗೃತಿ

27RAVIG5-Web
ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಕರೊನಾ ನಿಯಂತ್ರಣ ಕುರಿತು ಕೈದಿಗಳಿಗೆ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಶಾಖೆಯ ಕಾರ್ಯದರ್ಶಿ ಡಾ. ಡಿ.ಎನ್. ಮಿಸಾಳೆ ಜಾಗೃತಿ ಮೂಡಿಸಿದರು. ಸಂಸ್ಥೆಯ ಸದಸ್ಯ ಎಲ್.ವಿ. ಶ್ರೀನಿವಾಸ್, ಮುಖ್ಯ ಅಧೀಕ್ಷಕ ಕೃಷ್ಣಕುಮಾರ, ಸಹಾಯಕ ಅಧೀಕ್ಷಕ ಬಿ.ಎಸ್. ಹೊಸಮನಿ, ಕಾರಾಗೃಹ ವೈದ್ಯಾಧಿಕಾರಿ ಡಾ.ಯಮಕನಮರಡಿ, ಜೈಲರ್‌ಗಳಾದ ಎಸ್.ಬಿ.ಪಾಟೀಲ ಇದ್ದರು.
Published on

ಬೆಳಗಾವಿ: ಜಗತ್ತಿನಾದ್ಯಂತ ತೀವ್ರವಾಗಿ ಕರೊನಾ ಹರಡುತ್ತಿರುವ ಹಿನ್ನೆಲೆಯಲ್ಲಿ ನೂರಾರು ಕೈದಿಗಳಿರುವ ಕಾರಾಗೃಹಗಳಲ್ಲೂ ಕೋವಿಡ್-19 ತಡೆಗಟ್ಟಲು ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಅಗತ್ಯತೆ ಇದೆ ಎಂದು ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಶಾಖೆಯ ಕಾರ್ಯದರ್ಶಿ ಡಾ. ಡಿ.ಎನ್. ಮಿಸಾಳೆ ಹೇಳಿದರು.

ಇಲ್ಲಿನ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಕರೊನಾ ವೈರಸ್ ನಿಯಂತ್ರಿಸುವ ಕುರಿತು ಶುಕ್ರವಾರ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

5 ಲಕ್ಷ ಜನರಿಗೆ ಸೋಂಕು: ಅಮೆರಿಕ, ಭಾರತ, ಇಟಲಿ, ಚೀನಾ ಸೇರಿ ಜಗತ್ತಿನ ಪ್ರಮುಖ ರಾಷ್ಟ್ರಗಳಲ್ಲಿ ಕರೊನಾ ವೈರಸ್ ಭೀತಿ ಮೂಡಿಸಿದೆ. ಶುಕ್ರವಾರದವರೆಗೆ ವಿಶ್ವದಲ್ಲಿ ಒಟ್ಟು 5,32,800 ಜನರು ಸೋಂಕಿತರಾಗಿದ್ದು, 24,070 ಜನ ಈ ವೈರಸ್‌ಗೆ ಬಲಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಭಾರತದಲ್ಲಿ 21 ದಿನಗಳ ಕಾಲ ಲಾಕ್‌ಡೌನ್ ಘೋಷಿಸಿದೆ. ಕಾರಾಗೃಹಗಳಲ್ಲೂ ನೂರಾರು ಜನರು ಇರುವುದರಿಂದ ಕೋವಿಡ್-19 ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ಕೈಗೊಳ್ಳಬೇಕಿದೆ ಎಂದರು.

ವೈದ್ಯರಿಗೆ ತೋರಿಸಿ: ಕರೊನಾ ವೈರಾಣುವಿನಿಂದ ಮುಖ್ಯವಾಗಿ ಶ್ವಾಸಕೋಶ ಹಾಗೂ ಉಸಿರಾಟಕ್ಕೆ ತೊಂದರೆ ಉಂಟಾಗಿ ರೋಗ ನಿರೋಧಕ ಶಕ್ತಿ ಕುಂದಿಸುತ್ತದೆ. ಹೀಗಾಗಿ ಜ್ವರ, ತಲೆನೋವು, ನೆಗಡಿ ಹಾಗೂ ಉಸಿರಾಟ ತೊಂದರೆ ಕಂಡುಬಂದರೆ ತಕ್ಷಣವೇ ಕಾರಾಗೃಹದ ವೈದ್ಯರ ಬಳಿ ಪರೀಕ್ಷಿಸಿಕೊಳ್ಳಬೇಕು. ಕಾರಾಗೃಹವಾಸಿಗಳು ನೈರ್ಮಲ್ಯತೆ ಕಾಪಾಡುವುದರ ಜತೆಗೆ ಸಾಮಾಜಿಕ ಅಂತರವನ್ನೂ ಕಾಯ್ದುಕೊಳ್ಳಬೇಕು ಎಂದು ಡಾ.ಮಿಸಾಳೆ ಸಲಹೆ ನೀಡಿದರು.

ಕಾರಾಗೃಹದಲ್ಲಿ ಇರುವ ಕೈದಿಗಳು ಕೋವಿಡ್-19 ಹರಡುವಿಕೆ ವಿಧಾನ, ಲಕ್ಷಣ ಮತ್ತು ಮುನ್ನೆಚ್ಚರಿಕೆ ಸೇರಿ ಅನೇಕ ವಿಷಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ರೆಡ್ ಕ್ರಾಸ್ ಸಂಸ್ಥೆಯ ಸದಸ್ಯ ಎಲ್.ವಿ. ಶ್ರೀನಿವಾಸ್ ಅವರು ಕೋವಿಡ್-19 ಹರಡದಂತೆ ಪಾಲಿಸಬೇಕಾದ ನಿಯಮಗಳ ಬಗ್ಗೆ ಮಾಹಿತಿ ನೀಡಿದರು.

ಕಾರಾಗೃಹದ ಮುಖ್ಯ ಅಧೀಕ್ಷಕ ಕೃಷ್ಣಕುಮಾರ, ಸಹಾಯಕ ಅಧೀಕ್ಷಕ ಬಿ.ಎಸ್. ಹೊಸಮನಿ, ಕಾರಾಗೃಹ ವೈದ್ಯಾಧಿಕಾರಿ ಡಾ.ಯಮಕನಮರಡಿ, ಜೈಲರ್‌ಗಳಾದ ಎಸ್.ಬಿ. ಪಾಟೀಲ, ವೈ.ಎಸ್. ನಾಯಕ, ಸಂಗಮೇಶ್ ಸೇರಿದಂತೆ ಇನ್ನಿತರ ಸಿಬ್ಬಂದಿ ಪಾಲ್ಗೊಂಡಿದ್ದರು. ಕಾರಾಗೃಹ ಶಿಕ್ಷಕ ಶಶಿಕಾಂತ ಯಾದಗೂಡೆ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net