

ಬೆಳಗಾವಿ: ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ನಡೆದ ಕೈದಿಗಳಿಬ್ಬರ ಮಾರಾಮಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಕಾರಾಗೃಹದ ಸಿಬ್ಬಂದಿಯನ್ನು ಸೇವೆಯಿಂದ ಅಮಾನತ್ತುಗೊಳಿಸಲಾಗಿದೆ.
ಕಾರಾಗೃಹದ ಹಿರಿಯ ವೀಕ್ಷಕ ಬಿ.ಎಲ್.ಮೆಳವಂಕಿ, ವೀಕ್ಷಕ ವಿ.ಟಿ.ವಾಘಮೋರೆ ಅವರನ್ನು ಕರ್ತವ್ಯಲೋಪ ಎಸಗಿದ್ದರಿಂದ ‘ಈ ಗಲಾಟೆ ನಡೆಯದಂತೆ ನೋಡಿಕೊಳ್ಳುವಲ್ಲಿ ಇಬ್ಬರೂ ವಿಫಲವಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಹಾಗಾಗಿ ಸೇವೆಯಿಂದ ಅಮಾನತುಗೊಳಿಸಲಾಗಿದೆ’ ಎಂದು ಉತ್ತರ ವಲಯದ ಕಾರಾಗೃಹಗಳ ಉಪಮಹಾನಿರೀಕ್ಷಕ ಟಿ.ಪಿ.ಶೇಷ ಅವರು ಆದೇಶ ಹೊರಡಿಸಿದ್ದಾರೆ.
ಕೊಲೆ ಪ್ರಕರಣದ ವಿಚಾರಣೆ ಎದುರಿಸುತ್ತಿರುವ ಸಾಯಿಕುಮಾರ್ ಮತ್ತು ಮತ್ತೊಂದು ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತರುವ ಶಂಕರಪ್ಪ ಕೊರವರ ಮಧ್ಯೆ ಜುಲೈ 29ರಂದು ಗಲಾಟೆ ನಡೆದಿತ್ತು.
ಮಂಡ್ಯ ಮೂಲದ ಸಾಯಿಕುಮಾರ್‌ಗೆ ಶಂಕರಪ್ಪ ಬಲವಾಗಿ ಹೊಡೆದಿದ್ದ. ನ್ಯೂಡ್ರೈವರ್‌ನಿಂದ ಎದೆಗೆ ಐದು ಬಾರಿ ಚುಚ್ಚಿದ್ದ. ಸಾಯಿಕುಮಾರ್‌ಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದವು. ಮರು ಹೊಡೆತದಿಂದ ಶಂಕರಪ್ಪ ಕೂಡ ಗಾಯಗೊಂಡಿದ್ದ. ಇಬ್ಬರೂ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು.